Site icon Vistara News

Sadguru Jaggi Vasudev: ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಸದ್ಗುರು ಜಗ್ಗಿ ವಾಸುದೇವ್‌ ಡಿಸ್‌ಚಾರ್ಜ್‌

Sadguru Jaggi Vasudev

Sadguru Jaggi Vasudev

ಹೊಸದಿಲ್ಲಿ: ಕೆಲವು ದಿನಗಳ ಹಿಂದೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ತುರ್ತು ಶಸ್ತ್ರಚಿಕಿತ್ಸೆಗೆ (Brain Surgery) ಒಳಗಾಗಿದ್ದ ಆಧ್ಯಾತ್ಮಿಕ ನಾಯಕ (Spiritual leader) ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬುಧವಾರ (ಮಾರ್ಚ್‌ 27) ಡಿಸ್‌ಚಾರ್ಜ್‌ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಅವರನ್ನು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್‌ 17ರಂದು ಅವರು ತುರ್ತು ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಾಗಿತ್ತು?

ದೆಹಲಿಯ ಇಂದ್ರಪ್ರಸ್ಥ ಅಪೋಲೋ ಹಾಸ್ಪಿಟಲ್ಸ್‌ನ ಹಿರಿಯ ಸಲಹೆಗಾರ, ನರರೋಗ ತಜ್ಞ ಡಾ. ವಿನಿತ್ ಸೂರಿ ಅವರ ಬಳಿ ಮಾರ್ಚ್ 15ರ ಮಧ್ಯಾಹ್ನ ಸದ್ಗುರು ತೀವ್ರ ತಲೆನೋವಿನ ಕಾರಣ ಸಮಾಲೋಚಿಸಿದ್ದರು. ವಿನಿತ್ ಸೂರಿ ಅವರು ತಕ್ಷಣವೇ ಇದು ಸಬ್-ಡ್ಯೂರಲ್ ಹೆಮಟೋಮಾ ಇರಬಹುದು ಎಂದು ಶಂಕಿಸಿದ್ದರು. ತುರ್ತು ಎಂಆರ್‌ಐ ಸ್ಕ್ಯಾನ್‌ಗೆ ಸಲಹೆ ನೀಡಿದ್ದರು. ಅದೇ ದಿನ ಸದ್ಗುರು ಮೆದುಳಿನ ಎಂಆರ್‌ಐ ಮಾಡಿಸಿಕೊಂಡಿದ್ದರು. ಈ ವೇಳೆ ಮೆದುಳಿನಲ್ಲಿ ಭಾರೀ ರಕ್ತಸ್ರಾವ ಕಂಡುಬಂದಿತ್ತು.

24-48 ಗಂಟೆಗಳ ಅವಧಿಯ ಒಂದು ತಾಜಾ ರಕ್ತಸ್ರಾವದ ಜೊತೆಗೆ, 3-4 ವಾರಗಳ ಅವಧಿಯ ಹಿಂದಿನ ದೀರ್ಘಕಾಲದ ರಕ್ತಸ್ರಾವದ ಗುರುತೂ ಇತ್ತು. ಸದ್ಗುರುಗಳಿಗೆ ತಕ್ಷಣವೇ ಆಸ್ಪತ್ರೆಗೆ ಸೇರಲು ಸಲಹೆ ನೀಡಲಾಯಿತು. ಮಾರ್ಚ್ 17ರಂದು ಸದ್ಗುರುವಿಗೆ ಎಡಗಾಲಿನ ಊತ, ಪ್ರಜ್ಞೆಯಲ್ಲಿ ಕುಸಿತ, ಪುನರಾವರ್ತಿತ ವಾಂತಿ ಕಂಡುಬಂತು. ತಲೆನೋವು ತೀವ್ರವಾಗಿ ಉಲ್ಬಣಗೊಂಡಿತು. ಅಂತಿಮವಾಗಿ ಡಾ. ವಿನಿತ್ ಸೂರಿ ಅವರ ಆರೈಕೆಯಲ್ಲಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. “ಇದೀಗ ನೀವು ಸರ್ಜರಿ ನಿರ್ವಹಿಸುವ ಸಮಯ” ಎಂದು ಸದ್ಗುರು ಹೇಳಿದ್ದರು.

ಮೆದುಳಿನ ಊತ ಮಾರಣಾಂತಿಕವಾಗಿ ಬೆಳೆದುದನ್ನು ತುರ್ತು ಸಿಟಿ ಮುಖ್ಯಸ್ಥರು ಖಚಿತಪಡಿಸಿದ್ದರು. ಡಾ. ವಿನಿತ್ ಸೂರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಮತ್ತು ಡಾ. ಎಸ್ ಚಟರ್ಜಿ ಅವರನ್ನೊಳಗೊಂಡ ವೈದ್ಯರ ತಂಡವು ಸದ್ಗುರುಗಳ ಸರ್ಜರಿ ನಿರ್ವಹಿಸಿತು. ತಲೆಬುರುಡೆಯಲ್ಲಿನ ರಕ್ತಸ್ರಾವವನ್ನು ತೆಗೆದುಹಾಕಲು ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಯಿತು. ಶಸ್ತ್ರಚಿಕಿತ್ಸೆಯ ನಂತರ ಸದ್ಗುರುಗಳನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ವೈದ್ಯರ ಪ್ರಕಾರ ಸದ್ಗುರು ಆರೋಗ್ಯದಲ್ಲಿ ಸ್ಥಿರವಾದ ಪ್ರಗತಿಯನ್ನು ತೋರಿಸಿದ್ದರು. ಅವರ ಮೆದುಳು, ದೇಹ ಮತ್ತು ಪ್ರಮುಖ ಆರೋಗ್ಯ ಸೂಚಿಗಳು ಸುಧಾರಿಸಿದ್ದವು.

ಇದನ್ನೂ ಓದಿ: Sadguru Jaggi Vasudev: ಸದ್ಗುರು ಆರೋಗ್ಯದ ಬಗ್ಗೆ ಮಗಳು ರಾಧೆ ಹೇಳಿದ್ದೇನು?

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಗರು ಜತೆ ಮಾತನಾಡಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು. “ಸದ್ಗುರು ಅವರೊಂದಿಗೆ ಮಾತನಾಡಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದೇನೆ” ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಮೋದಿಯವರ ಸಂದೇಶಕ್ಕೆ ಪ್ರತಿಕ್ರಿಯಿಸಿದ ಸದ್ಗುರು, “ಪ್ರೀತಿಯ ಪ್ರಧಾನ ಮಂತ್ರಿಜೀ, ನನ್ನ ಬಗ್ಗೆ ಕಳವಳ ಪಡಬೇಡಿ. ನಿಮಗೆ ಮುನ್ನಡೆಸಲು ಒಂದು ದೇಶವೇ ಇದೆ. ನಿಮ್ಮ ಕಾಳಜಿಯಿಂದ ನನ್ನ ಹೃದಯತುಂಬಿದೆ. ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ. ಧನ್ಯವಾದ” ಎಂದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version