Site icon Vistara News

ಸದ್ಗುರು Save Soil ಅಭಿಯಾನ: ಸರ್ಬಿಯಾದಿಂದ ಸಂದೇಶ

ಬೆಲ್‌ಗ್ರೇಡ್:‌ “ಜಗತ್ತು ಮಣ್ಣಿನ ಬಗ್ಗೆ ಮಾತನಾಡುತ್ತಿದೆ. ಏಕೆಂದರೆ ಮಣ್ಣು ಶುದ್ಧ ನೀರಿನ ಆಧಾರವಾಗಿದೆ. ಶುದ್ಧ ಗಾಳಿ ಮತ್ತು ನೀರು ನಮ್ಮ ಜೀವನದ ಮೂಲಾಧಾರವಾಗಿದೆ ಎಂದು ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ತಮ್ಮ ಭೂ ದಿನದ ಸಂದೇಶದಲ್ಲಿ ಹೇಳಿದ್ದಾರೆ.

Save soil ಆಂದೋಲನದ ಭಾಗವಾಗಿ ತಮ್ಮ 100 ದಿನಗಳ, 30,000 ಕಿ.ಮೀ. ಏಕಾಂಗಿ ಮೋಟಾರ್‌ಸೈಕಲ್ ಪ್ರಯಾಣದ 33ನೇ ದಿನದಂದು ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಿಂದ “ಎಲ್ಲಾ ಭೂಶಿಶುಗಳಿಗೆ ಶುಭಾಶಯಗಳು” ಎಂದು ಹಾರೈಸಿದ್ದಾರೆ.

ಮಣ್ಣನ್ನು ಅವನತಿಯಿಂದ ರಕ್ಷಿಸಲು ಜಗತ್ತು ತನ್ನ ನೀತಿಯನ್ನು ತಕ್ಷಣ ಸುಧಾರಿಸದಿದ್ದರೆ ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಮುಂದಿನ 30-40 ವರ್ಷಗಳಲ್ಲಿ ಗಂಭೀರ ಅಪಾಯವನ್ನು ಎದುರಿಸಲಿದೆ. ಪ್ರತಿವರ್ಷ 27,000 ಸೂಕ್ಷ್ಮಜೀವಿ ಪ್ರಭೇದಗಳ ಅಳಿವಿಗೆ ಕಾರಣವಾಗುತ್ತಿದ್ದೇವೆ. ನಾವು ಈಗ ಮನಸ್ಸು ಮಾಡಿದರೆ ಮುಂದಿನ 8-12 ಅಥವಾ ಗರಿಷ್ಠ 15 ವರ್ಷಗಳ ಅವಧಿಯಲ್ಲಿ ಇದನ್ನು ನಿಲ್ಲಿಸಬಹುದು ಎಂದು ಆಗ್ರಹಿಸಿದರು.

ಕಳೆದ ಸಾವಿರ ವರ್ಷಗಳಲ್ಲಿ ಜಗತ್ತಿನಲ್ಲಿ ದ್ಯುತಿಸಂಶ್ಲೇಷಣೆಯ ಪ್ರದೇಶವು ಶೇ.85ರಷ್ಟು ಇಳಿಮುಖ ಕಂಡಿದೆ. ದ್ಯುತಿಸಂಶ್ಲೇಷಣೆಯು ಭೂಮಿಯ ವಾತಾವರಣ ಆಮ್ಲಜನಕದಿಂದ ಸಮೃದ್ಧವಾಗಿರುವಂತೆ ಮತ್ತು ಮಣ್ಣು ಇಂಗಾಲದಿಂದ ಸಮೃದ್ಧವಾಗಿರುವಂತೆ ಜೀವಂತವಾಗಿಡುತ್ತದೆ ಮತ್ತು ಸೂಕ್ಷ್ಮಜೀವಿ ಚಟುವಟಿಕೆಯನ್ನು ವರ್ಧಿಸುತ್ತದೆ. ಹಸಿರಿನ ಹೊದಿಕೆ ಮಾತ್ರ ಎರಡನ್ನೂ ಸಾಧ್ಯವಾಗಿಸುತ್ತದೆ. ಬೆಳೆಗಳು, ಮುಚ್ಚಿಗೆ ಬೆಳೆಗಳು, ಪೊದೆಗಳು ಅಥವಾ ಮರಗಳು- ಹಸಿರಿನ ಕವಚವಾಗಿದ್ದು ಇದಕ್ಕಾಗಿ ಎಲ್ಲೆಡೆ ನಾವು ಕಾರ್ಯನೀತಿಗಳನ್ನು ರೂಪಿಸಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: KGFನಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ 7 ಪಾಠಗಳು

ಸದ್ಗುರು ಕಳೆದ ತಿಂಗಳು save soil ಜಾಗತಿಕ ಆಂದೋಲನವನ್ನು ಪ್ರಾರಂಭಿಸಿದ್ದರು. ತುರ್ತು ನೀತಿ ಸುಧಾರಣೆಗಾಗಿ ಜಾಗತಿಕ ಒಮ್ಮತ ಮೂಡಿಸಲು ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಮೂಲಕ ಅವರು ಬೈಕ್‌ ಪ್ರಯಾಣ ಆರಂಭಿಸಿದ್ದಾರೆ. ಜೂನ್‌ನಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಇದು ಕೊನೆಗೊಳ್ಳಲಿದೆ. ಕಾವೇರಿ ನದಿ ಜಲಾನಯನ ಪ್ರದೇಶವು ಈಶದ Cauvery Calling ಅಭಿಯಾನದ ಕಾರ್ಯಕ್ಷೇತ್ರ. ಉಷ್ಣವಲಯದ ಪ್ರದೇಶಗಳಲ್ಲಿ ಮಣ್ಣಿನ ಆರೋಗ್ಯ ಮತ್ತು ಜಲಮೂಲಗಳ ಮರುಸ್ಥಾಪನೆಗೆ ಕಾವೇರಿ ನದಿ ಜಲಾನಯನ ಪ್ರದೇಶವನ್ನು ಒಂದು ಮಾದರಿಯನ್ನಾಗಿಸುವ ಪ್ರಯತ್ನವಾಗಿದೆ Cauvery Calling.

Exit mobile version