ಕೋಲ್ಕತ್ತಾ: ಮಕ್ಕಳ ಕಳ್ಳರೆಂದು ಭಾವಿಸಿ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಮೂವರು ಸಾಧುಗಳ ಮೇಲೆ ಗುಂಪುಗೂಡಿ ಹಲ್ಲೆ (Sadhus Assaulted) ನಡೆಸಲಾಗಿದೆ. ವಿಪಕ್ಷ ಬಿಜೆಪಿ ಇದರಿಂದ ಆಕ್ರೋಶಗೊಂಡಿದ್ದು, ʼಇದು ಪಾಲ್ಘಾರ್ ಥರದ ಗುಂಪುನ್ಯಾಯದ (Palghar Mob Lynching) ಕೃತ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ (West Bengal) ಹಿಂದೂ ಆಗಿರುವುದೇ ಅಪರಾಧವಾಗಿದೆʼʼ ಎಂದು ಟೀಕಿಸಿದೆ.
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಜನಸಮೂಹವೊಂದು ಹಿಂದೂ ಸಾಧುಗಳನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ನಂತರ ಈ ರಾಜಕೀಯ ಗದ್ದಲ ಭುಗಿಲೆದ್ದಿದೆ. ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ವಿವಸ್ತ್ರಗೊಳಿಸಿ ಥಳಿಸಿದೆ. ಘಟನೆಯ ವಿಡಿಯೋ ಶುಕ್ರವಾರ ಹೊರಬಿದ್ದು ವೈರಲ್ ಆಗಿದೆ.
Absolutely shocking incident reported from Purulia in West Bengal. In a Palghar kind lynching, sadhus traveling to Gangasagar for Makar Sankranti, were stripped and beaten by criminals, affiliated with the ruling TMC.
— Amit Malviya (@amitmalviya) January 12, 2024
In Mamata Banerjee’s regime, a terrorist like Shahjahan Sheikh… pic.twitter.com/DsdsAXz1Ys
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ), ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ವಾಗ್ದಾಳಿ ನಡೆಸಿತು ಮತ್ತು ಘಟನೆಯನ್ನು 2020ರ ಪಾಲ್ಘಾರ್ ಗುಂಪು ಹತ್ಯೆಯೊಂದಿಗೆ ಸಮೀಕರಿಸಿತು.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ʼಸಾಧುಗಳ ಮೇಲಿನ ಹಲ್ಲೆಯ ಹಿಂದೆ ಆಡಳಿತಾರೂಢ ಟಿಎಂಸಿಗೆ ಸಂಬಂಧಿಸಿದ ಗೂಂಡಾಗಳು ಇದ್ದಾರೆʼ ಎಂದು ಆರೋಪಿಸಿದ್ದಾರೆ.
“ಪಶ್ಚಿಮ ಬಂಗಾಳದ ಪುರುಲಿಯಾದಿಂದ ಆಘಾತಕಾರಿ ಘಟನೆ ವರದಿಯಾಗಿದೆ. ಮಕರ ಸಂಕ್ರಾಂತಿಗಾಗಿ ಗಂಗಾಸಾಗರಕ್ಕೆ ಪ್ರಯಾಣಿಸುತ್ತಿದ್ದ ಸಾಧುಗಳನ್ನು ಆಡಳಿತಾರೂಢ ಟಿಎಂಸಿಗೆ ಸಂಬಂಧಿಸಿದ ಗೂಂಡಾಗಳು ವಿವಸ್ತ್ರಗೊಳಿಸಿ ಥಳಿಸಿದರು” ಎಂದು ಮಾಳವಿಯಾ Xನಲ್ಲಿ ಬರೆದಿದ್ದಾರೆ.
ʼಪಶ್ಚಿಮ ಬಂಗಾಳದಲ್ಲಿ ಹಿಂದೂ ಆಗಿರುವುದು ಅಪರಾಧʼ ಎಂದು ಪ್ರತಿಪಾದಿಸಿದ ಅವರು, “ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ, ಷಹಜಹಾನ್ ಶೇಖ್ನಂತಹ ಭಯೋತ್ಪಾದಕನಿಗೆ ಆಡಳಿತದ ರಕ್ಷಣೆ ಸಿಗುತ್ತದೆ ಮತ್ತು ಸಾಧುಗಳನ್ನು ಹತ್ಯೆ ಮಾಡಲಾಗುತ್ತಿದೆ” ಎಂದಿದ್ದಾರೆ.
ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಕೂಡ ಈ ದಾಳಿಯ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (mamata banerjee) ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಪುರುಲಿಯಾದಲ್ಲಿ ಪಾಲ್ಘಾರ್ ದುರಂತವನ್ನು ಪ್ರತಿಧ್ವನಿಸುವಂಥ ಘಟನೆ. ಗಂಗಾಸಾಗರಕ್ಕೆ ಹೋಗುವ ಮಾರ್ಗದಲ್ಲಿ ಸಾಧುಗಳನ್ನು ಟಿಎಂಸಿಯ ಗೂಂಡಾಗಳು ವಿವಸ್ತ್ರಗೊಳಿಸಿ ಥಳಿಸಿದರು. ಮಮತಾ ಬ್ಯಾನರ್ಜಿಯವರ ಆಳ್ವಿಕೆಯಲ್ಲಿ ಹಿಂದೂ ಆಗಿರುವುದೇ ಅಪರಾಧ” ಎಂದಿದ್ದಾರೆ.
ಸಾಧುಗಳು ಏಕೆ ದಾಳಿಗೊಳಗಾದರು?
ಮೂರು ಸಾಧುಗಳು – ಒಬ್ಬ ವ್ಯಕ್ತಿ ಮತ್ತು ಅವರ ಇಬ್ಬರು ಪುತ್ರರು – ಉತ್ತರ ಪ್ರದೇಶದಿಂದ ಬಂದವರಾಗಿದ್ದು, ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಗಂಗಾಸಾಗರ್ ತಲುಪಲು ಗುರುವಾರ ವಾಹನವನ್ನು ಬಾಡಿಗೆಗೆ ಪಡೆದಿದ್ದರು. ಈ ಸಾಧುಗಳು ದಾರಿ ತಪ್ಪಿದ್ದರು ಮತ್ತು ದಾರಿಯಲ್ಲಿ ಕಂಡ ಇಬ್ಬರು ಹುಡುಗಿಯರ ಬಳಿ ಮಾರ್ಗವನ್ನು ಕೇಳಿದರು. ಆಗ ಹುಡುಗಿಯರು ಹೆದರಿ ಓಡಿಹೋಗಿದ್ದರು. ಸಾಧುಗಳು ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆಕ್ರೋಶಗೊಂಡ ಸ್ಥಳೀಯರು ಗುಂಪು ಸೇರಿ ಸಾಧುಗಳಿಗೆ ಥಳಿಸಿದ್ದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಸಾಧುಗಳನ್ನು ರಕ್ಷಿಸಿದ್ದರು. ಪುರುಲಿಯಾ ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಬ್ಯಾನರ್ಜಿ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಾಲ್ಘಾರ್ ಲಿಂಚಿಂಗ್
ಏಪ್ರಿಲ್ 16, 2020ರಂದು ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಇಬ್ಬರು ಹಿಂದೂ ಸಾಧುಗಳು ಮತ್ತು ಅವರ ಚಾಲಕನನ್ನು ಜನಸಮೂಹ ಥಳಿಸಿ ಹತ್ಯೆ ಮಾಡಿತ್ತು. ದೇಶಾದ್ಯಂತ ಕೊರೋನಾ ವೈರಸ್ ಲಾಕ್ಡೌನ್ ಇದ್ದ ಈ ಸಮಯದಲ್ಲಿ, ಈ ಪ್ರದೇಶದಲ್ಲಿ ಮಕ್ಕಳ ಕಳ್ಳರು ಆಗಮಿಸಿದ್ದಾರೆ ಎಂಬ ವಾಟ್ಸಾಪ್ ವದಂತಿಯನ್ನು ನಂಬಿದ ಜನಸಮೂಹ ಸಾಧುಗಳ ಕಾರಿನ ಮೇಲೆ ದಾಳಿ ಮಾಡಿತ್ತು. ಹತ್ಯೆಗೆ ಸಂಬಂಧಿಸಿ 100ಕ್ಕೂ ಹೆಚ್ಚು ಗ್ರಾಮಸ್ಥರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಬಾಲಕನ ಬಳಿ ದಾರಿ ಕೇಳಿದ ನಾಲ್ವರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಥಳಿಸಿದ ಗ್ರಾಮಸ್ಥರು