ನವದೆಹಲಿ: ಸುಬ್ರತಾ ರಾಯ್ (Subrata Roy) ನಿಧನದ ಹೊರತಾಗಿಯೂ ಸಹಾರಾ ಇಂಡಿಯಾ ಪರಿವಾರದ (Sahara India Pariwar) ವಿಷಯವು ಬಂಡವಾಳ ಮಾರುಕಟ್ಟೆಯ ನಿಯಂತ್ರಣದಲ್ಲೇ ಮುಂದುರಿಯುತ್ತದೆ ಎಂದು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿಯ ಅಧ್ಯಕ್ಷೆ ಮಾಧಬಿ ಪುರಿ ಬುಚ್ (Sebi chairperson Madhabi Puri Buch) ಅವರು ಹೇಳಿದ್ದಾರೆ. ಸಹಾರಾ ಇಂಡಿಯಾ ಪರಿವಾರ ಸಂಸ್ಥಾಪಕ ಸುಬ್ರತಾ ರಾಯ್ ಅವರು ನವೆಂಬರ್ 14ರಂದು ಮುಂಬೈನಲ್ಲಿ ವಿಧಿವಶವಾದರು.
ಫಿಕ್ಕಿ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೆಬಿ ಮುಖ್ಯಸ್ಥೆ ಮಾದಭಿ ಪುರಿ ಬುಚ್ ಅವರು, ಸೆಬಿಗೆ ಸಂಬಂಧಿಸಿದಂತೆ ಈ ವಿಷಯವು ಒಂದು ಘಟಕದ ನಡವಳಿಕೆಗೆ ಸಂಬಂಧಿಸಿದ್ದಾಗಿದೆ. ಒಬ್ಬ ವ್ಯಕ್ತಿಯು ಜೀವಂತವಾಗಿದ್ದಾನೆ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಅದು ತನ್ನ ಕಾರ್ಯವನ್ನು ಮುಂದುರಿಸಲಿದೆ ಎಂದು ತಿಳಿಸಿದ್ದರು.
ಸಹಾರಾ ಇಂಡಿಯಾ ಗ್ರೂಪ್ (Sahara India Group) ಸಂಸ್ಥಾಪಕ ಸುಬ್ರತಾ ರಾಯ್ (Subrata Roy) ಅವರು ಮಂಗಳವಾರ (ನವೆಂಬರ್ 14) ನಿಧನರಾಗಿದ್ದು, ದೇಶದ ಉದ್ಯಮಿಗಳು ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ, ಸುಬ್ರತಾ ರಾಯ್ ಅವರು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India-SEBI) ಸಂಸ್ಥೆಯಲ್ಲಿಯೇ 25 ಸಾವಿರ ಕೋಟಿ ರೂ. ಬಿಟ್ಟಿದ್ದಾರೆ. ಈಗ ಅಷ್ಟೂ ಹಣ ಯಾರಿಗೆ ಸೇರಲಿದೆ ಎಂಬ ಕುತೂಹಲ ಮೂಡಿದೆ.
ಹೌದು, 2014ರಲ್ಲಿ ಸೆಬಿಯೊಂದಿಗಿನ ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಸುಬ್ರತಾ ರಾಯ್ ಅವರಿಗೆ ಹೂಡಿಕೆದಾರರ ಎಲ್ಲ ಹಣವನ್ನು ಹಿಂತಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆ, ಸುಬ್ರತಾ ರಾಯ್ ಅವರಿಗೆ ಸೇರಿದ ಸುಮಾರು 25 ಸಾವಿರ ಕೋಟಿ ರೂ. ಸೆಬಿ ಬಳಿ ಇದೆ. ಇದುವರೆಗೆ ಸೆಬಿಯು ಹೂಡಿಕೆದಾರರಿಗೆ ಹಣ ವಿತರಿಸುವಲ್ಲಿಯೇ ತೊಡಗಿರುವ ಕಾರಣ ಅದರ ಖಾತೆಯಲ್ಲಿಯೇ 25 ಸಾವಿರ ಕೋಟಿ ರೂ. ಉಳಿದಿದೆ. ಸುಬ್ರತಾ ರಾಯ್ ಅವರು ನಿಧನರಾದ ಹಿನ್ನೆಲೆಯಲ್ಲಿ ಈ ವಿಷಯವೀಗ ಮುನ್ನೆಲೆಗೆ ಬಂದಿದೆ.
ಏನಿದು ಪ್ರಕರಣ?
ಪಾಂಜಿ ಯೋಜನೆಗಳ (Ponzi Schemes) ಅಂದರೆ, ಹೆಚ್ಚು ಮೊತ್ತವನ್ನು ವಾಪಸ್ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿಕೊಂಡ ಪ್ರಕರಣದಲ್ಲಿ ಸುಬ್ರತಾ ರಾಯ್ ಕಂಪನಿಗಳು ಸಿಲುಕಿದ್ದವು. ಹಾಗಾಗಿ, ಸುಬ್ರತಾ ರಾಯ್ ಅವರ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಗಳು 3 ಕೋಟಿ ಹೂಡಿಕೆದಾರರಿಗೆ ಹಣ ಹಿಂತಿರುಗಿಸಬೇಕು ಎಂದು ಸೆಬಿ ಆದೇಶಿಸಿತ್ತು. ಸೆಬಿ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಹಾಗಾಗಿ, ಈಗಲೂ ಸೆಬಿ ಖಾತೆಯಲ್ಲಿ ಸಹಾರಾ ಗ್ರೂಪ್‌ಗೆ ಸೇರಿದ 25 ಸಾವಿರ ಕೋಟಿ ರೂ. ಇದೆ.
ಜೂನ್ 10, 1948ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ ಸುಬ್ರತಾ ರಾಯ್ ಅವರು ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಆತಿಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿರುವ ವಿಶಾಲವಾದ ಉದ್ಯಮವನ್ನು ಸ್ಥಾಪಿಸಿದ್ದರು. ಹೂಡಿಕೆದಾರರ ಹಣ ವಂಚಿಸಿದ ಆರೋಪದಲ್ಲಿ ಸುಬ್ರತಾ ರಾಯ್ ಅವರು ಸೆರೆಮನೆ ವಾಸವನ್ನೂ ಅನುಭವಿಸಿದ್ದರು. ತಿಹಾರ ಜೈಲು ಸೇರಿದ್ದ ಅವರು ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ಇವರು ಪತ್ರಿಕೆಯೊಂದನ್ನೂ ಮುನ್ನಡೆಸಿ ಸೈ ಎನಿಸಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: Subrata Roy: ಸಹಾರಾ ಇಂಡಿಯಾ ಸಂಸ್ಥಾಪಕ ಸುಬ್ರತಾ ರಾಯ್ ನಿಧನ