ನವದೆಹಲಿ: ಲಂಡನ್‌ನಲ್ಲಿರುವ ಇಂಡಿಯನ್ ಹೈ ಕಮಿಷನ್ ಕಟ್ಟಡದಲ್ಲಿನ ತ್ರಿವರ್ಣ ಧ್ವಜವನ್ನು ಖಲಿಸ್ತಾನಿ ಪರ ಹೋರಾಟಗಾರರು ಕೆಳಗಿಳಿಸಿದ ಬೆನ್ನಲ್ಲೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ (San Francisco) ಇಂಡಿಯನ್ ಕಾನ್ಸುಲೇಟ್(Indian Consulate) ಮೇಲೆ ದಾಳಿ ನಡೆಸುವ ವಿಡಿಯೋ ವೈರಲ್ ಆಗಿದೆ. ಜತೆಗೆ, ಕಟ್ಟಡದ ಗೋಡೆಯೊಂದರ ಮೇಲೆ ಅಮೃತ್‌ಪಾಲ್ ಬಿಡುಗಡೆ ಮಾಡಿ ಎಂದು ಗೀಚಲಾಗಿದೆ.
ಇಂಡಿಯನ್ ಕಾನ್ಸುಲೇಟ್ ದಾಳಿ ನಡೆಸಿ, ಹಲವಾರು ವಿಡಿಯೋಗಳನ್ನು ಚಿತ್ರಿಕರಿಸಿ, ಖಲಿಸ್ತಾನಿಗಳೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇಂಡಿಯನ್ ಕಾನ್ಸುಲೇಟ್ ಕಚೇರಿಯ ಬಾಗಿಲುಗಳ ಗಾಜುಗಳನ್ನು ಪುಡಿ ಮಾಡುತ್ತಿರುವುದು, ಕಿಟಕಿಗಳನ್ನು ಮುರಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಖಲಿಸ್ತಾನಿ ಧ್ವಜಗಳನ್ನು ಕಾಣಬಹುದು. ಕಟ್ಟಡದ ಪ್ರವೇಶ ದ್ವಾರದಲ್ಲಿ ನೆಡಲಾಗಿರುವ ಖಲಿಸ್ತಾನಿ ಧ್ವಜಗಳನ್ನು ಕಾನ್ಸುಲೇಟ್‌ನ ಮೂವರು ಸಿಬ್ಬಂದಿ ತೆರವುಗೊಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಲಂಡನ್ ಹೈಕಮಿಷನ್ ಕಚೇರಿಯಲ್ಲಿ ಏನಾಯಿತು?
ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮೇಲೆ ಹಾರಾಡುತ್ತಿದ್ದ ತ್ರಿವರ್ಣ ಧ್ವಜವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿ ಪ್ರತಿಭಟನಾಕಾರರ ಗುಂಪೊಂದು ಕೆಳಗಿಳಿಸಿ, ಪ್ರತ್ಯೇಕತಾವಾದಿಗಳ ಧ್ವಜವನ್ನು ಹಾರಾಟ ನಡೆಸಿ, ಘೋಷಣೆಗಳನ್ನು ಕೂಗಿದ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ಇಂಗ್ಲೆಂಡ್ ರಾಯಭಾರಿಯಿಂದ ವಿವರಣೆ ಕೇಳಿದೆ(pro-Khalistan).
ಈ ಘಟನೆಯ ಬಗ್ಗೆ ಮಾಹಿತಿ ಇದೆ ಎಂದು ಹೇಳಿರುವ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್, ಇನ್ನೂ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಬೇಕಿದೆ. ಏತನ್ಮಧ್ಯೆ, ಭಾರತವು ಈ ಘಟನೆ ಕುರಿತು ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ. ಅಲ್ಲದೇ, ಈ ಪ್ರದೇಶದಲ್ಲಿನ ಸೂಕ್ತ ಭದ್ರತೆಯನ್ನು ಕೈಗೊಳ್ಳದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಒಡೆದಿರುವ ಕಿಟಿಕಿಗಳು ಮ್ತತು ಇಂಡಿಯಾ ಹೌಸ್ ಕಟ್ಟಡವನ್ನು ಖಲಿಸ್ತಾನಿ ಪರ ಪ್ರತಿಭಟನಾಕಾರರು ಹತ್ತುತ್ತಿರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೇ ವಿಡಿಯೋವೊಂದರಲ್ಲಿ ಭಾರತೀಯ ಅಧಿಕಾರಿಯೊಬ್ಬರು ಪ್ರತಿಭಟನಾಕಾರರಿಂದ ಮಿಷನ್‌ನ ಮೊದಲ ಮಹಡಿಯ ಕಿಟಕಿಯ ಮೂಲಕ ಧ್ವಜವನ್ನು ಹಿಡಿದಿರುವುದನ್ನು ಕಾಣಬಹುದು. ಪ್ರತಿಭಟನಾಕಾರನು ಖಾಲಿಸ್ತಾನ್ ಧ್ವಜವನ್ನು ಬೀಸುತ್ತಿರುವುದನ್ನು ಕಾಣಬಹುದು.
ಇಂಗ್ಲೆಂಡ್ ರಾಯಭಾರಿಗೆ ಸಮನ್ಸ್
ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯವು ದಿಲ್ಲಿಯಲ್ಲಿರುವ ಇಂಗ್ಲೆಂಡ್ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು ಕರೆಯಿಸಿಕೊಂಡು, ತನ್ನ ತೀವ್ರ ಪ್ರತಿರೋಧವನ್ನು ದಾಖಲಿಸಿದೆ.
ಇದನ್ನೂ ಓದಿ: Amritpal Singh: ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಬಳಿ ಸ್ವಂತ ಮಿಲಿಟರಿ, ಬಾಂಬ್ ಸ್ಕ್ವಾಡ್!
ದುಷ್ಕರ್ಮಿಗಳನ್ನು ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಅನುಮತಿಸಿದ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿಯ ಬಗ್ಗೆ ವಿವರಣೆಯನ್ನು ವಿದೇಶಾಂಗ ಸಚಿವಾಲಯವು ರಾಯಭಾರ ಕಚೇರಿಯ ಅಧಿಕಾರಿಯಿಂದ ಕೇಳಿದೆ. ವಿಯೆನ್ನಾ ಒಪ್ಪಂದದ ಅಡಿಯಲ್ಲಿ ಇಂಗ್ಲೆಂಡ್ ಸರ್ಕಾರದ ಅನುಸರಿಸಬೇಕಾದ ಮೂಲಭೂತ ನಿಯಮಗಳ ಬಗ್ಗೆ ಅಧಿಕಾರಿಗೆ ನೆನಪಿಸಲಾಯಿತು ಎಂದು ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.