Site icon Vistara News

Sandeshkhali Violence: ಲೈಂಗಿಕ ದೌರ್ಜನ್ಯ ಆರೋಪಿ, ಟಿಎಂಸಿ ನಾಯಕ ಷಹಜಹಾನ್‌ ಶೇಖ್‌ ಬಂಧನ

Shahjahan-Sheikh

ಕೋಲ್ಕತ್ತಾ: ಪಶ್ಚಿಮ ಬಂಗಾಲದ (West Bengal) ಸಂದೇಶ್‌ಖಾಲಿ (Sandeshkhali Violence) ದೌರ್ಜನ್ಯದ (physical abuse) ಆರೋಪಿ, ಬಹುಕೋಟಿ ಹಗರಣದ ರೂವಾರಿ ಹಾಗೂ ತಲೆ ತಪ್ಪಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ (Trinamool congress) ನಾಯಕ ಶೇಖ್ ಶಹಜಹಾನ್‌ನನ್ನು (sheikh Shahjahan) ಬಂಧಿಸಲಾಗಿದೆ.

ಈತ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದು, ಸಂದೇಶ್‌ಖಾಲಿ ಗ್ರಾಮದಲ್ಲಿ ಭೂಕಬಳಿಕೆ ನಡೆಸಿದ್ದ. ಗುರುವಾರ ಬೆಳಗ್ಗೆ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಉತ್ತರ 24 ಪರಗಣ ಜಿಲ್ಲೆಯ ಮಿನಾಖಾನ್‌ನಲ್ಲಿರುವ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಎಂದು ಗೊತ್ತಾಗಿದೆ.

ಟಿಎಂಸಿಯ ಪ್ರಭಾವಿ ನಾಯಕ ಇದೀಗ ಬಸಿರ್‌ಹತ್ ಕೋರ್ಟ್ ಲಾಕಪ್‌ನಲ್ಲಿದ್ದು, ಅವನನ್ನು ಈ ದಿನದ ಕೊನೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಹೆಚ್ಚಿನ ವಿವರಗಳನ್ನು ದಕ್ಷಿಣ ಬಂಗಾಳ ಎಡಿಜಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಲಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿ, ಕಳೆದ ಒಂದು ತಿಂಗಳಿನಿಂದ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕನಾದ ಶಹಜಹಾನ್‌ ಇಲ್ಲಿ ನಿರಂತರವಾಗಿ ಲೈಂಗಿಕ ದೌರ್ಜನ್ಯಗಳು ಮತ್ತು ಭೂಕಬಳಿಕೆ ನಡೆಸುತ್ತ ಬಂದಿದ್ದಾನೆ. ಕಳೆದ ತಿಂಗಳು ಸಂದೇಶಖಾಲಿಯಲ್ಲಿ ಬಹುಕೋಟಿ ಪಡಿತರ ಹಗರಣಕ್ಕೆ ಸಂಬಂಧಿಸಿ ಈತನನ್ನು ವಿಚಾರಿಸಲು ಇಡಿ ಅಧಿಕಾರಿಗಳು ಇಲ್ಲಿಗೆ ಬಂದಾಗ, ಈತ ಹಾಗೂ ಇವನ ಬೆಂಬಲಿಗರು ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ನಂತರ ಶಹಜಹಾನ್ ಪರಾರಿಯಾಗಿದ್ದ.

ಟಿಎಂಸಿ ನಾಯಕನ ದೌರ್ಜನ್ಯ, ಇಡಿ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ನಾಪತ್ತೆ ಮತ್ತು ಪ್ರತಿಭಟನೆಯಿಂದಾಗಿ ಪಶ್ಚಿಮ ಬಂಗಾಲ ಸರ್ಕಾರಕ್ಕೆ ಬಿಸಿ ಮುಟ್ಟಿತ್ತು. ರಾಜಕೀಯ ಪಕ್ಷಗಳ ನಿಯೋಗಗಳು ಸಂದೇಶಖಾಲಿಗೆ ಹೋಗಿದ್ದವು. ಬಿಜೆಪಿ ನಿಯೋಗ ಹಾಗೂ ನಾಯಕರನ್ನು ಮಧ್ಯದಲ್ಲಿ ತಡೆಯಲಾಗಿತ್ತು. ಪರಿಸ್ಥಿತಿ ಉದ್ವಿಗ್ನವಾಗಿತ್ತು.

ಆರೋಪಿಗಳನ್ನು ಬಂಧಿಸಲಾಗುವುದು ಎಂದು ಟಿಎಂಸಿ ಭರವಸೆ ನೀಡಿದ ಕೆಲವು ದಿನಗಳ ನಂತರ ಶಹಜಹಾನ್ ಬಂಧನವಾಗಿದೆ. ಟಿಎಂಸಿಯಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿರುವ ಸಾಗರಿಕಾ ಘೋಷ್ ಅವರು‌, ಇತ್ತೀಚಿನ ಬಂಧನಗಳು ಕಾನೂನಿನ ರಕ್ಷಣೆಯ ಕುರಿತು ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸಿವೆ ಎಂದಿದ್ದಾರೆ. ಆರೋಪಿಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂಬ ಆಪಾದನೆಗಳನ್ನು ನಿರಾಕರಿಸಿದ್ದಾರೆ. “ಯಾರನ್ನೂ ರಕ್ಷಿಸಲಾಗುತ್ತಿಲ್ಲ. ಯಾರೂ ಕಾನೂನಿನಿಂದ ತಪ್ಪಿಸಿಕೊಳ್ಳುವುದಿಲ್ಲ. ಟಿಎಂಸಿ ಮತ್ತು ಬಂಗಾಲ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ” ಎಂದು ಸಾಗರಿಕಾ ಘೋಷ್ ಹೇಳಿದ್ದಾರೆ.

ಹೈಕೋರ್ಟ್‌ ಆದೇಶ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ (TMC) ನಾಯಕ ಶೇಖ್‌ ಶಹಜಹಾನ್‌ನನ್ನು (Sheikh Shahjahan) ಬಂಧಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ (Calcutta High Court) ಮೂರು ದಿನಗಳ ಹಿಂದೆ ಆದೇಶಿಸಿತ್ತು. ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಕ್ರಮವಾಗಿ ಭೂಸ್ವಾಧೀನ ಮಾಡಿಕೊಂಡ ಆರೋಪದಲ್ಲಿ ತಲೆಮರೆಸಿಕೊಂಡಿರುವ ಶೇಖ್‌ ಶಹಜಹಾನ್‌ ಬಂಧನಕ್ಕೆ ತಡೆ ನೀಡುವುದಿಲ್ಲ. ಆತನನ್ನು ಕೂಡಲೇ ಬಂಧಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ ಆದೇಶಿಸಿತ್ತು.

ಬುಡಕಟ್ಟು, ದಲಿತ ಸಮುದಾಯದ ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಅವರ ಭೂಮಿ ಅತಿಕ್ರಮಣ ಸೇರಿ ಹಲವು ಪ್ರಕರಣಗಲ್ಲಿ ಬೇಕಾಗಿರುವ ಶೇಖ್‌ ಜಹಾನ್‌ ವಿರುದ್ಧ ಸ್ವಯಂಪ್ರೇರಿತವಾಗಿ (ಸುಮೋಟೊ) ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಬೇಕು ಎಂದು ಕೂಡ ಇ.ಡಿ ಹಾಗೂ ಸಿಬಿಐಗೆ ಕೋಲ್ಕೊತಾ ಹೈಕೋರ್ಟ್‌ ನಿರ್ದೇಶನ ನೀಡಿದೆ. ಶೇಖ್‌ ಜಹಾನ್‌ ಪರಾರಿಯಾಗಿರುವ ಕುರಿತು, ಆತನ ವಿರುದ್ಧ ದಾಖಲಾಗಿರುವ ಕೇಸ್‌ಗಳ ಕುರಿತು ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕು ಎಂದು ಕೂಡ ಕೋರ್ಟ್‌ ಸೂಚಿಸಿದೆ.

ಏನಿದು ಪ್ರಕರಣ?

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯು ಫೆಬ್ರವರಿ 14ರಿಂದಲೂ ಹಿಂಸಾಚಾರದಲ್ಲಿ ಮುಳುಗಿದೆ. ತೃಣಮೂಲ ನಾಯಕ ಶಹಜಹಾನ್‌ನ ಇಬ್ಬರು ನಿಕಟ ಸಹಚರರು ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಪೊಲೀಸರಿಗೆ ಬೇಕಾಗಿದ್ದಾರೆ. ಇದೇ ಪ್ರದೇಶದಲ್ಲಿರುವ ಶಹಜಹಾನ್ ಮನೆಗೆ ಜನವರಿ 5ರಂದು ಇಡಿ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಶಹಜಹಾನ್‌ ಬೆಂಬಲಿಗರು ಹಾಗೂ ಕೆಲವು ಗ್ರಾಮಸ್ಥರು ಸೇರಿ ದಾಳಿ ನಡೆಸಿದ್ದರು. ಆಗ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು.

ಶಹಜಹಾನ್ ತಲೆಮರೆಸಿಕೊಂಡ ಒಂದು ತಿಂಗಳ ನಂತರ, ಫೆಬ್ರವರಿ 8ರಂದು, ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಪೊರಕೆ ಮತ್ತು ಬಡಿಗೆಗಳೊಂದಿಗೆ ಬೀದಿಗಿಳಿದರು. ಆತನ ಇಬ್ಬರು ಸಹಾಯಕರಾದ ಶಿಬಾ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಮರುದಿನ, ಪ್ರತಿಭಟನಾಕಾರರು ಹಜ್ರಾಗೆ ಸೇರಿದ ಆಸ್ತಿಗಳ ಮೇಲೆ ದಾಳಿ ಮಾಡಿ ಅವರ ಕೋಳಿ ಫಾರಂಗೆ ಬೆಂಕಿ ಹಚ್ಚಿದರು. ಟಿಎಂಸಿ ನಾಯಕ ಕಬಳಿಸಿರುವ ಜಮೀನಿನಲ್ಲಿ ಕೋಳಿ ಫಾರಂ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಶಹಜಹಾನ್ ಮತ್ತು ಆತನ ಸಹಾಯಕರು ವರ್ಷಗಟ್ಟಲೆ ತಮ್ಮ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ ಶೋಷಣೆ ಮಾಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಪೊಲೀಸರು ಸಂದೇಶ್‌ಖಾಲಿಯ ವಿವಿಧ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಲ್ಲದೆ, 16 ಪಂಚಾಯತ್‌ಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದರು.

ಇದನ್ನೂ ಓದಿ: ಸಂದೇಶ್‌ಖಾಲಿ ಹಿಂಸಾಚಾರ; ಟಿಎಂಸಿಯ ಶೇಖ್‌ ಶಹಜಹಾನ್‌ ಬಂಧನಕ್ಕೆ ಹೈಕೋರ್ಟ್‌ ಆದೇಶ

Exit mobile version