ಮುಂಬೈ, ಮಹಾರಾಷ್ಟ್ರ: ಶಿವಸೇನೆಯ ಬಿಲ್ಲು-ಬಾಣ ಚಿಹ್ನೆ ಖರೀದಿಗೆ ಸುಮಾರು 2 ಸಾವಿರ ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಶಿವಸೇನೆ(ಉದ್ಧವ್ ಬಣ) ನಾಯಕ ಸಂಜಯ್ ರಾವತ್ (Sanjay Raut) ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾವತ್ ಅವರು, 2,000 ಕೋಟಿ ರೂ. ಎಂಬುದು ಪ್ರಾಥಮಿಕ ಅಂಕಿ ಅಂಶ ಮತ್ತು ಇದು 100 ಪ್ರತಿಶತ ನಿಜ. ಈ ಕುರಿತಾದ ಮಾಹಿತಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಆಡಳಿತದ ಆಡಳಿತಕ್ಕೆ ಹತ್ತಿರವಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆಂದು ರಾವತ್ ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವ ಶಿವಸೇನೆ ಬಣಕ್ಕೆ ಭಾರತೀಯ ಚುನಾವಣಾ ಆಯೋಗ(ECI) ಮಾನ್ಯತೆ ನೀಡಿರುವುದು ನ್ಯಾಯವಲ್ಲ, ಅದು ಪಕ್ಕಾ ಬಿಸಿನೆಸ್ ಎಂದು ರಾವತ್ ಆರೋಪಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು, ಮೊನ್ನೆಯಷ್ಟೇ ಏಕನಾಥ ಶಿಂಧೆ ನೇತೃತ್ವ ಬಣವೇ ರಿಯಲ್ ಶಿವಸೇನೆ ಹಾಗೂ ಪಕ್ಷದ ಬಿಲ್ಲು ಮತ್ತು ಬಾಣವನ್ನು ಈ ಬಣಕ್ಕೆ ವರ್ಗಾಯಿಸಿ, ಆದೇಶಿಸಿತ್ತು.
ಇದನ್ನೂ ಓದಿ: Cow Hug Day: ಬಿಜೆಪಿಗರಿಗೆ ಗೌತಮ್ ಅದಾನಿಯೇ ಪವಿತ್ರ ಗೋವು ಎಂದು ವ್ಯಂಗ್ಯವಾಡಿದ ಸಂಜಯ್ ರಾವತ್
ಶಾಸಕರೊಬ್ಬರನ್ನು ಖರೀದಿಸಲು 50 ಕೋಟಿ, ಸಂಸದರ ಖರೀದಿಗೆ 100 ಕೋಟಿ ಆಫರ್ ಮಾಡಲಾಗಿತ್ತು. ಅದೇ ರೀತಿ, ನಮ್ಮ ಪಕ್ಷದ ಶಾಖಾ ಪ್ರಮುಖರು ಮತ್ತು ಕೌನ್ಸಿಲರ್ ಖರೀದಿಗೆ 1 ಕೋಟಿ ರೂ. ಬಿಡ್ ಮಾಡುವ ಸರ್ಕಾರ, ನಮ್ಮ ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಖರೀದಿಸಲು ಅವರು ಎಷ್ಟು ವೆಚ್ಚ ಮಾಡಿರಬಹುದು ಎಂದು ಊಹಿಸಿ. ನನಗೆ ಗೊತ್ತಿರುವ ಮಾಹಿತಿಯ ಪ್ರಕಾರಕ್ಕೆ ಇದಕ್ಕಾಗಿ 2 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ರಾವತ್ ಆರೋಪಿಸಿದ್ದಾರೆ. ಆದರೆ, ಏಕನಾಥ ಶಿಂಧೆಯ ಶಿವಸೇನೆ ಬಣದ ಶಾಸಕ ಸದಾ ಸರ್ವಾಂಕರ್ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ, ಕ್ಯಾಶಿಯರ್ ಸಂಜಯ್ ರಾವತ್ ಆಗಿದ್ರಾ ಎಂದು ಪ್ರಶ್ನಿಸಿದ್ದಾರೆ.