Site icon Vistara News

Sanjay Raut: ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ ಉದ್ಧವ್ ಬಣದ ಶಿವಸೇನಾ ನಾಯಕ!

Sanjay Raut

Sanjay Raut

ನವದೆಹಲಿ: 50 ವರ್ಷಗಳ ಹಿಂದೆ ಅಂದರೆ 1975ರಲ್ಲಿ ತುರ್ತು ಪರಿಸ್ಥಿತಿ (Emergency) ಹೇರಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ನಡೆಯನ್ನು ಶಿವಸೇನೆ (ಯುಬಿಟಿ) ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ (Sanjay Raut) ಶನಿವಾರ ಸಮರ್ಥಿಸಿಕೊಂಡಿದ್ದಾರೆ.

1975ರ ತುರ್ತು ಪರಿಸ್ಥಿತಿಯ ನೆನಪಿಗಾಗಿ ಜೂನ್ 25 ಅನ್ನು ಸಂವಿಧಾನ್ ಹತ್ಯ ದಿವಸ್ ಎಂದು ಆಚರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ರಾವತ್, ʼʼಆ ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೆ, ಅವರು ಕೂಡ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರುತ್ತಿದ್ದರುʼʼ ಎಂದು ಹೇಳಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಸಂಜಯ್ ರಾವತ್, “ಬಿಜೆಪಿಗೆ ಮಾಡಲು ಬೇರೆ ಕೆಲಸವಿಲ್ಲ. ತುರ್ತು ಪರಿಸ್ಥಿತಿಗೆ 50 ವರ್ಷಗಳು ಕಳೆದಿವೆ. ಜನರು ತುರ್ತು ಪರಿಸ್ಥಿತಿಯನ್ನು ಮರೆತಿದ್ದಾರೆ. ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಏಕೆ ಹೇರಲಾಯಿತು? ಎನ್ನುವುದನ್ನು ತಿಳಿದುಕೊಳ್ಳಬೇಕು. ಕೆಲವರು ಇನ್ನೂ ತುರ್ತು ಪರಿಸ್ಥಿತಿಯ ಹೆಸರು ಹೇಳಿಕೊಂಡು ಅರಾಜಕತೆಯನ್ನು ಹರಡಲು ಬಯಸುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರೆ, ಅವರೂ ತುರ್ತು ಪರಿಸ್ಥಿತಿ ಹೇರುತ್ತಿದ್ದರು” ಎಂದು ಅವರು ಹೇಳಿದ್ದಾರೆ.

“ಅದು ರಾಷ್ಟ್ರೀಯ ಭದ್ರತೆಯ ವಿಷಯವಾಗಿತ್ತು. ಕೆಲವರು ಬಾಂಬ್‌ಗಳನ್ನು ತಯಾರಿಸುತ್ತಿದ್ದರು ಮತ್ತು ಅವುಗಳನ್ನು ವಿವಿಧ ಸ್ಥಳಗಳಲ್ಲಿ ಸ್ಫೋಟಿಸುತ್ತಿದ್ದರು. ಆ ಸಮಯದಲ್ಲಿ ಬಾಳಾಸಾಹೇಬ್ ಠಾಕ್ರೆ ತುರ್ತು ಪರಿಸ್ಥಿತಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು ಮತ್ತು ಆರ್‌ಎಸ್‌ಎಸ್‌ ಕೂಡ ಅದನ್ನು ಬೆಂಬಲ ನೀಡಿತ್ತು” ಎಂದು ಅವರು ತಿಳಿಸಿದ್ದಾರೆ.

1975ರ ಜೂನ್‌ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಕಾರಣದಿಂದಾಗಿ ಜೂನ್‌ 25 ಅನ್ನು ಸಂವಿಧಾನ ಹತ್ಯಾ ದಿವಸ ಎಂದು ಕೇಂದ್ರ ಸರ್ಕಾರ (Central Government) ಘೋಷಿಸಿದೆ. ಪ್ರತಿವರ್ಷ ಜೂನ್‌ 25ರಂದು ದೇಶಾದ್ಯಂತ ಸಂವಿಧಾನ ಹತ್ಯಾ ದಿವಸ ಎಂದು ಆಚರಿಸಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ.

ಕೇಂದ್ರ ಸರ್ಕಾರದ ತೀರ್ಮಾನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರತಿವರ್ಷ ಜೂನ್‌ 25ರಂದು ಸಂವಿಧಾನ ಹತ್ಯಾ ದಿವಸ ಎಂಬುದಾಗಿ ಆಚರಿಸಲಾಗುತ್ತದೆ. ಆ ಮೂಲಕ ತುರ್ತು ಪರಿಸ್ಥಿತಿ ವೇಳೆ ಸಾವು-ನೋವು ಅನುಭವಿಸಿದ ಲಕ್ಷಾಂತರ ಜನರ ಹೋರಾಟ, ತ್ಯಾಗವನ್ನು ಸ್ಮರಿಸಲಾಗುತ್ತದೆ. ಅಲ್ಲದೆ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಕಾಂಗ್ರೆಸ್‌ ಹೇಗೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿತು ಎಂಬುದನ್ನು ಜನರಿಗೆ ತಿಳಿಸಲಾಗುತ್ತದೆ” ಎಂಬುದಾಗಿ ಮಾಹಿತಿ ನೀಡಿದರು.

ಇದನ್ನೂ ಓದಿ: Droupadi Murmu: ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದಿರುವ ಅತಿದೊಡ್ಡ ದಾಳಿ; ದ್ರೌಪದಿ ಮುರ್ಮು

ಏನಿದು ತುರ್ತು ಪರಿಸ್ಥಿತಿ?

ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಕುಪಿತಗೊಂಡಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್‌ 25ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. 21 ತಿಂಗಳು ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಇದೇ ವೇಳೆ ಲಕ್ಷಾಂತರ ಜನರನ್ನು ಜೈಲಿಗೆ ಕಳುಹಿಸಲಾಗಿತ್ತು. ಮಾಧ್ಯಮ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ತಮ್ಮ ವಿರುದ್ಧ ವರದಿ ಪ್ರಕಟಿಸುವ ಪತ್ರಿಕೆಗಳನ್ನು ಮುಚ್ಚಲು ಇಂದಿರಾ ಗಾಂಧಿ ಆದೇಶಿಸಿದ್ದರು. ಜನರ ಹಕ್ಕುಗಳನ್ನು ಕಸಿಯಲಾಗಿತ್ತು. ಹಾಗಾಗಿ, ತುರ್ತು ಪರಿಸ್ಥಿತಿಯು ದೇಶದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ ಎನಿಸಿದೆ.

Exit mobile version