ಮಾಸ್ಕೋ: ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi Russia Visit) ಅವರು ಮಂಗಳವಾರ ಮಾಸ್ಕೋದಲ್ಲಿ ನೆಲೆಸಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಭಾರತ-ರಷ್ಯಾ ನಡುವಿನ ಹಲವು ವರ್ಷಗಳ ಬಾಂಧವ್ಯವನ್ನು ಸ್ಮರಿಸಿಕೊಂಡಲ್ಲದೆ, ಸಾಂಸ್ಕೃತಿಕ ಸಂಬಂಧಗಳನ್ನು ಶ್ಲಾಘಿಸಿದರು. ಎಲ್ಲದಕ್ಕಿಂತ ಪ್ರಮುಖವಾಗಿ ಜನಪ್ರಿಯವಾಗಿರುವ ಹಿಂದಿ ಹಾಡೊಂದನ್ನು ಹಾಡುವ ಮೂಲಕ ಅಲ್ಲಿ ನೆಲೆಸಿರುವ ಭಾರತೀಯ ನಿವಾಸಿಗಳ ಮನಗೆದ್ದರು.
#WATCH | Moscow, Russia: Prime Minister Narendra Modi says "The song was once sung in every household here, 'Sir pe lal topi Russi, phir bhi dil hai Hindustani.' This song may have become old, but the sentiments are ever-green. Artists like Raj Kapoor, Mithoon Da have… pic.twitter.com/0xkaly61sR
— ANI (@ANI) July 9, 2024
ಮೋದಿ ಭಾಷಣದ ಪ್ರಮುಖ ಹೈಲೈಟ್ ಬಾಲಿವುಡ್ನ ಒಂದು ಜನಪ್ರಿಯ ಹಾಡು. ‘ಸರ್ ಪೆ ಲಾಲ್ ಟೋಪಿ ರಸ್ಸಿ, ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ (ತಲೆಯ ಮೇಲೆ ಕೆಂಪು ರಷ್ಯನ್ ಟೋಪಿ, ಆದರೂ ಹೃದಯದಲ್ಲಿ ಹಿಂದೂಸ್ತಾನಿ). ಈ ಜನಪ್ರಿಯ ಹಾಡನ್ನು ಒಮ್ಮೆ ಇಲ್ಲಿನ ಪ್ರತಿ ಮನೆಯಲ್ಲೂ ಹಾಡಲಾಗುತ್ತಿತ್ತು ಎಂದು ಹೇಳಿದ ಅವರು, ಹಾಡು ಹಳೆಯದಾಗಿರಬಹುದು, ಆದರೆ ಭಾವನೆಗಳು ಸದಾ ಹಸಿರು ಎಂದರು. ರಾಜ್ ಕಪೂರ್ ಮತ್ತು ಮಿಥುನ್ ಚಕ್ರವರ್ತಿಯಂಥ ಮಹಾನ್ ಕಲಾವಿದರು ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಸಂಬಂಧಕ್ಕೆ ನೀರೆದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಮತ್ತು ರಷ್ಯಾ ನಡುವೆ ಬಲವಾದ ಸಂಬಂಧ ಬೆಳೆಸುವಲ್ಲಿ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪ್ರಯತ್ನಗಳನ್ನು ಪ್ರಧಾನಿ ಮೋದಿ ಹೊಗಳಿದರು. ಭಾರತದ ವಿಶ್ವಾಸಾರ್ಹ ಸ್ನೇಹಿತ ದೇಶ ರಷ್ಯಾ . ನಮ್ಮ ಸ್ನೇಹವು ಪರಸ್ಪರ ನಂಬಿಕೆ ಮತ್ತು ಗೌರವವಗಳಿಂದ ತುಂಬಿಕೊಂಡಿದೆ ಎಂದರು. ಉಭಯ ರಾಷ್ಟ್ರಗಳ ಪರಸ್ಪರ ಸಹಕಾರದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಜಾಗತಿಕ ಏಳಿಗೆಗಾಗಿ ಭಾರತ ಮತ್ತು ರಷ್ಯಾ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ರಷ್ಯಾ ನಿವಾಸಿಗಳ ಬಣ್ಣನೆ
ರಷ್ಯಾದಲ್ಲಿ ನೆಲೆಸಿರುವ ಭಾರತೀಯರು ಉಭಯ ರಾಷ್ಟ್ರಗಳ ಸಂಬಂಧಗಳಿಗೆ ಹೊಸ ಹೊಳಪು ನೀಡುತ್ತಿದ್ದಾರೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಮೂಲಕ ರಷ್ಯಾದ ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡುತ್ತಿದ್ದೀರಿ ಎಂದು ಮೋದಿ ಹೊಗಳಿದರು. ಪರಸ್ಪರ ಸ್ನೇಹದ ಬಗ್ಗೆ ಮಾತನಾಡಿದ ಮೋದಿ “ರಷ್ಯಾ ಎಂಬ ಪದ ಕೇಳಿದಾಗ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಬರುವ ಮೊದಲ ಪದವೆಂದರೆ ಸಂತೋಷ ಮತ್ತು ದುಃಖದಲ್ಲಿ ಭಾರತದ ಪಾಲುದಾರ ಎಂಬುದು. ನಾವು ಅದನ್ನು ‘ದೋಸ್ತಿ’ ಎಂದು ಕರೆಯುತ್ತೇವೆ. ರಷ್ಯಾದಲ್ಲಿ ಚಳಿಗಾಲದಲ್ಲಿ ತಾಪಮಾನವು ಮೈನಸ್ ಗೆ ಇಳಿದರೂ, ಭಾರತ-ರಷ್ಯಾ ಸ್ನೇಹವು ಯಾವಾಗಲೂ ಪ್ಲಸ್ ನಲ್ಲಿ ಇರುತ್ತದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: PM Modi Russia Visit: “ಕೊಲೆಗಡುಕನನ್ನು ಮೋದಿ ಅಪ್ಪಿಕೊಂಡಿದ್ದಾರೆ”- ರಷ್ಯಾ ಭೇಟಿಗೆ ಉಕ್ರೇನ್ ಅಸಮಾಧಾನ
ನಮ್ಮ ಸಂಬಂಧಗಳ ಕೊಂಡಿಯನ್ನು ಅನೇಕ ಬಾರಿ ಪರೀಕ್ಷಿಸಲಾಗಿದೆ. ಪ್ರತಿ ಬಾರಿಯೂ ನಮ್ಮ ಸ್ನೇಹವು ಬಲವಾಗಿ ಪ್ರದರ್ಶನಗೊಂಡಿದೆ. ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಪುಟಿನ್ ಅವರ ನಾಯಕತ್ವವನ್ನು ನಾನು ವಿಶೇಷವಾಗಿ ಪ್ರಶಂಸಿಸಲು ಬಯಸುತ್ತೇನೆ. ಎರಡು ದಶಕಗಳಿಗೂ ಹೆಚ್ಚು ಕಾಲ ಈ ಪಾಲುದಾರಿಕೆಯನ್ನು ಬಲಪಡಿಸುವ ಅದ್ಭುತ ಕೆಲಸವನ್ನು ಅವರು ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನಾನು ರಷ್ಯಾಕ್ಕೆ ಬರುತ್ತಿರುವುದು ಇದು ಆರನೇ ಬಾರಿ. ಈ ವರ್ಷಗಳಲ್ಲಿ, ನಾವು ಪರಸ್ಪರ 17 ಬಾರಿ ಭೇಟಿಯಾಗಿದ್ದೇವೆ ಎಂದು ಮೋದಿ ಸ್ಮರಿಸಿಕೊಂಡರು.