Site icon Vistara News

SardarVallabhabhaiPatel | ಸರ್ದಾರ್‌ ಪಟೇಲ್‌ ಜನ್ಮದಿನ | ದೇಶದ ಐಕ್ಯತೆಗೆ ಶ್ರಮಿಸಿದ ಉಕ್ಕಿನ ಮನುಷ್ಯ

sardar vallabhbhai patel jayanti

| ಅಲಕಾ ಕೆ

ಭಾರತದ ಐಕ್ಯತೆಗೆ ಶ್ರಮಿಸಿದ, ದೇಶದ ಸ್ವಾತಂತ್ರ್ಯಕ್ಕಾಗಿ ಸಕ್ರಿಯವಾಗಿ ಹೋರಾಡಿ, ತಮ್ಮ ಛಾತಿ ಮತ್ತು ವಿವೇಕದಿಂದ ದೇಶದ ಐಕ್ಯತೆ ಸಾಧಿಸಿದ ಭಾರತದ ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರದಾರ ವಲ್ಲಭಭಾಯಿ ಪಟೇಲ್‌ (SardarVallabhabhaiPatel) ಅವರ ಜನ್ಮ ದಿನವಿದು. ಈ ದಿನವನ್ನು ರಾಷ್ಟ್ರೀಯ ಏಕತಾ ದಿನವೆಂದೂ ಆಚರಿಸಲಾಗುತ್ತದೆ. ವಕೀಲರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಅವರು, ನಂತರ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಹಲವಾರು ಬಾರಿ ಜೈಲುವಾಸ ಅನುಭವಿಸಿದರೂ, ದೇಶ ಸ್ವತಂತ್ರವಾಗುವವರೆಗೆ ತಮ್ಮ ನಿಷ್ಠೆಯನ್ನು ಸಡಿಲಿಸಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ, ದೇಶದ ಎಲ್ಲಾ ಪ್ರಾಂತ್ಯಗಳೂ ಭಾರತದಲ್ಲಿ ವಿಲೀನವಾಗುವಲ್ಲಿ ಗುರುತರ ಪಾತ್ರ ವಹಿಸಿದರು.

ಗುಜರಾತ್ನ ಖೇಡ ಜಿಲ್ಲೆಯ ನಡಿಯಾದ್‌ನಲ್ಲಿ ಜನಿಸಿದ ಅವರು, ಹುಟ್ಟಿದ ದಿನ ಯಾವುದು ಎಂಬುದು ವಾಸ್ತವದಲ್ಲಿ ಎಲ್ಲೂ ದಾಖಲಾಗಿಲ್ಲ. ಮೆಟ್ರಿಕ್ಯುಲೇಷನ್‌ ಹೊತ್ತಿಗೆ ಅಧಿಕೃತ ದಾಖಲೆಗಾಗಿ ಪಟೇಲ್‌ ಅವರೇ ನೀಡಿದ ದಿನಾಂಕವಿದು. ಬಾಲ್ಯದಿಂದಲೂ ಬ್ಯಾರಿಸ್ಟರ್‌ ಆಗಬೇಕೆಂಬುದು ಅವರ ಕನಸಾಗಿತ್ತು. ಆದರೆ ಇದಕ್ಕಾಗಿ ಇಂಗ್ಲೆಂಡ್‌ಗೆ ಕಳುಹಿಸಿ ಓದಿಸುವಷ್ಟು ಆರ್ಥಿಕ ಚೈತನ್ಯ ಅವರ ಕುಟುಂಬಕ್ಕೆ ಇರಲಿಲ್ಲ. ಸ್ಥಳೀಯವಾಗಿ ಲಭ್ಯವಿದ್ದೆಡೆ ವಿದ್ಯಾಭ್ಯಾಸ ಮಾಡಿದ ಅವರು, ೨೨ನೇ ವರ್ಷಕ್ಕೆ ಮೆಟ್ರಿಕ್ಯುಲೇಷನ್‌ ಪೂರ್ಣಗೊಳಿಸಿದರು. ಆಗಿನ ಪದ್ಧತಿಯಂತೆ ೧೬ ವರ್ಷಕ್ಕೆ ಅವರಿಗೆ ಜಾವೇರ್‌ಬಾ ಅವರೊಂದಿಗೆ ವಿವಾಹವಾಗಿತ್ತು. ಸ್ವಂತ ಶ್ರಮದಿಂದ, ಬೇರೆಯವರಲ್ಲಿ ಎರವಲು ತಂದ ಪುಸ್ತಕಗಳಲ್ಲಿ ವ್ಯಾಸಂಗ ಮಾಡಿದ ಅವರು, ಕಾನೂನು ಪರೀಕ್ಷೆಗಳಲ್ಲಿ ಯಶಸ್ವಿಯಾದರು. ಗೋಧ್ರಾದಲ್ಲಿ ಮನೆ ಮಾಡಿ, ತಮ್ಮ ಪತ್ನಿಯನ್ನು ಕರೆತಂದರು. ಮಣಿಬೆನ್‌ ಮತ್ತು ದಹ್ಯಾಬಾಯ್‌ ಎಂಬ ಮಕ್ಕಳು ಈ ದಂಪತಿಗೆ ಜನಿಸಿದರು.

ಭಾರತದಲ್ಲಿ ವಕೀಲಿ ವೃತ್ತಿಯನ್ನು ಮಾಡುತ್ತಿದ್ದಾಗಲೂ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ಹೋಗುವ ಆಸೆಯನ್ನು ಅವರು ಜೀವಂತವಾಗಿ ಇರಿಸಿಕೊಂಡಿದ್ದರು. ಅಂದಿನ ದಿನಗಳಲ್ಲಿ ವ್ಯಾಪಕವಾಗಿ ಹರಡಿದ್ದ ಬ್ಯುಬೋನಿಕ್‌ ಪ್ಲೇಗ್‌ನಿಂದ ನರಳುತ್ತಿದ್ದ ತಮ್ಮ ಮಿತ್ರನ ದೇಖರೇಖಿ ಮಾಡುತ್ತಿದ್ದಾಗ, ಅವರಿಗೂ ಪ್ಲೇಗ್‌ ಅಂಟಿತು. ತಕ್ಷಣವೇ ತಮ್ಮ ಕುಟುಂಬವನ್ನು ಅಲ್ಲಿಂದ ಸುರಕ್ಷಿತ ತಾಣಕ್ಕೆ ಕಳಿಸಿದ ಅವರು, ವ್ಯಷ್ಟಿಯಲ್ಲಿದ್ದರು. ಈ ರೋಗದಿಂದ ಚೇತರಿಸಿಕೊಳ್ಳುವವರೆಗೆ ಅವರು ಹಾಳು ಮಂದಿರಲ್ಲಿ ಉಳಿದಿದ್ದರು ಎಂದೂ ಹೇಳಲಾಗುತ್ತದೆ.

ವೃತ್ತಿಯಲ್ಲಿ ಅವರಿಗಿದ್ದ ಬದ್ಧತೆಯನ್ನು ಉತ್ಕೃಷ್ಟ ಮಾನದಂಡವೆಂದೂ ಇಂದಿಗೂ ಪರಿಗಣಿಸಲಾಗುತ್ತದೆ. ೧೯೦೯ರಲ್ಲಿ, ಪಟೇಲ್‌ ಅವರ ಪತ್ನಿಯ ಆರೋಗ್ಯ ಹಠಾತ್‌ ಬಿಗಡಾಯಿಸಿತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ಸಂದರ್ಭದಲ್ಲಿ ಅವರು ಆಸ್ಪತ್ರೆಯಲ್ಲೇ ತೀರಿಕೊಂಡರು. ನ್ಯಾಯಾಲಯದಲ್ಲಿ ಪ್ರಕರಣವೊಂದರಲ್ಲಿ ಪಾಟೀ ಸವಾಲು ಮಾಡುತ್ತಿದ್ದ ಪಟೇಲ್‌ ಅವರಿಗೆ, ಪತ್ನಿ ತೀರಿಕೊಂಡ ಬಗ್ಗೆ ಸಣ್ಣ ಚೀಟಿಯೊಂದು ಬಂತು. ಅದನ್ನು ಓದಿ ಮೌನವಾಗಿ ಜೇಬಿಗಿಳಿಸಿ, ತಮ್ಮ ಕೆಲಸ ಮುಂದುವರಿಸಿದರು. ಅಂದಿನ ಕಲಾಪ ಪೂರ್ಣಗೊಂಡ ಮೇಲೆಯೇ ಅವರು ಮನೆಗೆ ತೆರಳಿದ್ದರು. ಕಿರಿಯ ವಯಸ್ಸಿನಲ್ಲೇ ಪತ್ನಿ ವಿಯೋಗವನ್ನು ಅನುಭವಿಸಿದರೂ, ಮತ್ತೊಂದು ವಿವಾಹವಾಗದೆ, ಮಕ್ಕಳನ್ನು ತಾವೇ ಬೆಳೆಸಿದರು.

ತಮ್ಮ ೩೬ನೇ ವಯಸ್ಸಿನಲ್ಲಿ, ಅವರು ಕಾನೂನಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದರು. ೩೬ ತಿಂಗಳ ಪದವಿಯನ್ನು ೩೦ ತಿಂಗಳುಗಳಲ್ಲಿ ಪೂರ್ಣಗೊಳಿಸಿ ಭಾರತಕ್ಕೆ ಹಿಂದಿರುಗಿದರು. ಅದಾಗಲೇ ಐರೋಪ್ಯ ಸಂಸ್ಕೃತಿ ಅವರನ್ನು ಸೆಳೆದಿತ್ತು. ಅವರ ಉಡುಗೆ-ತೊಡುಗೆ ಜೀವನಶೈಲಿಯೂ ಆಧುನಿಕ ರೀತಿಯಲ್ಲೇ ಇತ್ತು. ಬ್ರಿಜ್‌ ಆಟದಲ್ಲಿ ನಿಪುಣರಾಗಿದ್ದರು. ಗುಜರಾತ್‌ನ ಪ್ರಸಿದ್ಧ ವಕೀಲರಾಗಿ ಗುರುತಿಸಿಕೊಂಡಿದ್ದರು. ಈ ದಿನಗಳಲ್ಲಿ ಅವರಿಗೆ ಗಾಂಧೀಜಿಯ ತತ್ವಗಳೊಂದಿಗೆ ಸಹಮತವಿರಲಿಲ್ಲ.‌

ಇದನ್ನೂ ಓದಿ | Engineer’s Day | ಇವು ಸ್ವತಂತ್ರ ಭಾರತದ ಅದ್ಭುತ ನಿರ್ಮಾಣಗಳು!

೧೯೧೭ರ ಹೊತ್ತಿಗೆ ಭಾರತದ ಸ್ವಾಯತ್ತೆಗಾಗಿ ಹೋರಾಡುವತ್ತ ಅವರ ಮನಸ್ಸು ಸೆಳೆದಿತ್ತು. ಅದೇ ಮೊದಲ ಬಾರಿಗೆ ಗಾಂಧೀಜಿಯನ್ನು ಮುಖತಃ ಭೇಟಿ ಮಾಡಿದ ಅವರು, ಮಹಾತ್ಮರ ತತ್ವಗಳಿಂದ ಪ್ರಭಾವಿತರಾದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದರು. ೧೯೧೯ರಲ್ಲಿ ನಡೆದ ಜಲಿಯನ್‌ವಾಲ ಭಾಗ್‌ ಹತ್ಯಾಕಾಂಡದ ನಂತರ, ಗಾಂಧೀಜಿ ಅವರು ಅಸಹಕಾರ ಚಳುವಳಿಗೆ ಕರೆ ನೀಡಿದ್ದರು. ಈ ಚಳುವಳಿಯನ್ನು ಪ್ರಬಲವಾಗಿ ಬೆಂಬಲಿಸಿದ ಪಟೇಲ್‌, ವಿದೇಶಿ ವಸ್ತುಗಳನ್ನು ಸುಡುವ ಕರೆಗೆ ಓಗೊಟ್ಟು, ಆನಂತರದಿಂದ ಖಾದಿ ವಸ್ತ್ರದಲ್ಲೇ ಕಡೆಯವರೆಗೂ ಉಳಿದರು. ಅಸಹಕಾರ ಚಳುವಳಿಯ ಭಾಗವಾಗಿ, ಸರಕಾರಕ್ಕೆ ತೆರಿಗೆ ಕಟ್ಟದಿರುವಂತೆ ಜನರಿಗೆ ತಿಳಿಸಲು ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ಅವರು ಮನೆಮನೆಗೆ ತೆರಳಿ ಪ್ರಚಾರ ನಡೆಸಿದರು. ಚಳುವಳಿಗೆ ಕಾಲಿಟ್ಟ ಮೇಲೆ, ಅವರ ವಕೀಲಿ ವೃತ್ತಿ, ಅದರಿಂದ ಸಂಪಾದಿಸಿದ್ದ ಹಣ ಎಲ್ಲವೂ ಹಿಂದಾಯಿತು. ಆನಂತರದ ವರ್ಷಗಳೆಲ್ಲಾ ಸಕ್ರಿಯ ಚಳುವಳಿಯಲ್ಲೇ ಕಳೆಯಿತು. ೧೯೩೨ರಲ್ಲಿ ಪಟೇಲ್‌ ಮತ್ತು ಗಾಂಧೀಜಿಯನ್ನು ಬಂಧಿಸಿ ಯರವಾಡ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಪಟೇಲರು ಗಾಂಧೀಜಿ ಅವರಿಂದ ಸಂಸ್ಕೃತ ಪಾಠ ಹೇಳಿಸಿಕೊಂಡಿದ್ದರಂತೆ. ೧೯೪೨ರಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಗೆ ಗಾಂಧೀಜಿ ಕರೆ ನೀಡಿದಾಗ, ಅದನ್ನು ಸಂಪೂರ್ಣವಾಗಿ ಪಟೇಲ್‌ ಬೆಂಬಲಿಸಿದ್ದರು. ಆದರೆ ಆಂತರಿಕವಾಗಿ ಕಾಂಗ್ರೆಸ್‌ನಲ್ಲೇ ಈ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಈ ಚಳುವಳಿಯ ಸಂದರ್ಭದಲ್ಲಿ ಸಾಲು ಸಾಲು ಭಾಷಣಗಳನ್ನು ಮಾಡಿದ್ದ ಪಟೇಲ್‌, ಜನತೆಯ ದೇಶಪ್ರೇಮದ ಭಾವನೆಗಳಿಗೆ ತೀವ್ರ ಪ್ರಚೋದನೆ ನೀಡಿದ್ದರು.

ಸ್ವಾತಂತ್ರ್ಯಾ ನಂತರ ದೇಶದ ಮೊದಲ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು ಸರದಾರ ಪಟೇಲ್.‌ ಈ ಸಂದರ್ಭದಲ್ಲಿ, ಚೆದುರಿ ಹೋಗಬಹುದಾಗಿದ್ದ ಎಲ್ಲಾ ಚಿಕ್ಕಪುಟ್ಟ ರಾಜ್ಯಗಳನ್ನು ಒಗ್ಗೂಡಿಸಿ ಭಾರತದಲ್ಲಿ ವಿಲೀನಗೊಳಿಸಿದರು. ಈ ರಾಜ್ಯಗಳು ಬೇರೆ ಬೇರೆ ರಾಜರುಗಳ ಅಧೀನದಲ್ಲೇ ಇದ್ದವು. ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಕಾರಣರಾಗಿದ್ದಕ್ಕೆ ವಲ್ಲಭಬಾಯಿ ಪಟೇಲ್‌ ಅವರಿಗೆ ಇಂದಿಗೂ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಹಾಗಾಗಿಯೇ ಪಟೇಲ್‌ ಅವರ ನೆನಪಿನಲ್ಲಿ ಪ್ರತಿ ವರ್ಷ ಅಕ್ಟೋಬರ್‌ ೩೧ರಂದು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಅಂತಿಮ ದಿನಗಳಲ್ಲಿ ಹೃದ್ರೋಗದಿಂದ ಬಳಲುತ್ತಿದ್ದ ಅವರು, ೧೯೫೦ರ ಡಿಸೆಂಬರ್‌ ೧೫ರಂದು ಹೃದಯಾಘಾತದಿಂದ ನಿಧನರಾದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ| 565 ದೇಶೀಯ ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸಿದ್ದು ಸಣ್ಣ ಸಾಧನೆಯಾ?

Exit mobile version