ನವದೆಹಲಿ: ಅಮೆರಿಕ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾಡೆಳ್ಳಾ (Satya Nadella) ಅವರಿಗೆ ಭಾರತದ ಕಾನ್ಸುಲ್ ಜನರಲ್ ಡಾ. ಟಿ. ವಿ ನಾಗೇಂದ್ರ ಪ್ರಸಾದ್ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಸತ್ಯಾ ನಾಡೆಳ್ಳಾ ಅವರು, ಭಾರತದ ಮೂರನೇ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವುದು ಅತಿ ದೊಡ್ಡ ಗೌರವವಾಗಿದೆ. ತಾಂತ್ರಿಕವಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಭಾರತೀಯ ಜನರೊಂದಿಗೆ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
ಕಳೆದ ವರ್ಷ ಘೋಷಿಸಲಾದ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ 55 ವರ್ಷದ ಸತ್ಯಾ ನಾಡೆಳ್ಳಾ ಅವರಿಗೆ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ಹೆಸರಿಸಿದೆ. ಕಳೆದ ವಾರ ಪ್ರಶಸ್ತಿಯನ್ನು ಸ್ವೀಕರಿಸಿರುವ ಸತ್ಯಾ ನಾಡೆಳ್ಳಾ ಅವರು ಮುಂದಿನ ಜನವರಿ ತಿಂಗಳಲ್ಲಿ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ನನಗೆ ಈ ಪ್ರಶಸ್ತಿ ಸ್ವೀಕರಿಸಲು ಖುಷಿಯಾಗುತ್ತಿದೆ. ರಾಷ್ಟ್ರಪತಿ, ಪ್ರಧಾನಿ ಮತ್ತು ಭಾರತದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ತಾಂತ್ರಿಕವಾಗಿ ಇನ್ನೂ ಹೆಚ್ಚಿನದನ್ನು ಸಾಧಿಸುವುದಕ್ಕಾಗಿ ನಾನು ಭಾರತೀಯ ಜನರೊಂದಿಗೆ ಸೇರಿಕೊಂಡಲು ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಈ ವೇಳೆ ತಿಳಿಸಿದರು. ಜತೆಗೆ, ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಡಿಜಿಟಲ್ ಟೆಕ್ನಾಲಜಿಯ ಪಾತ್ರದ ಬಗ್ಗೆ ಕಾನ್ಸುಲ್ ಜನರಲ್ ನಾಗೇಂದ್ರ ಪ್ರಸಾದ್ ಅವರ ಜತೆಗೆ ಚರ್ಚಿಸಿದರು. ನಾವೀಗ ಐತಿಹಾಸಿಕ ಆರ್ಥಿಕೋ, ಸಮಾಜೋ ಮತ್ತು ತಾಂತ್ರಿಕ ಬದಲಾವಣೆಯ ಪರ್ವದಲ್ಲಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.
ಹೈದ್ರಾಬಾದ್ ಮೂಲದ ನಾಡೆಳ್ಳಾ ಅವರು 2014ರಿಂದ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. 2021ರಲ್ಲಿ ಅವರನ್ನು ಕಂಪನಿಯ ಚೇರ್ಮನ್ನರಾಗಿ ಕೂಡ ನೇಮಕ ಮಾಡಲಾಗಿದೆ. ಭಾರತ ಕೊಡ ಮಾಡುವ ಪದ್ಮ ಪ್ರಶಸ್ತಿಗಳ ಪೈಕಿ ಪದ್ಮಭೂಷಣವು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ಇದನ್ನೂ ಓದಿ | Padma Awards | ಪದ್ಮ ಪ್ರಶಸ್ತಿಗಳಿಗೆ ನೀವೂ ನಾಮನಿರ್ದೇಶನ ಮಾಡಿ, ಹೀಗಿದೆ ಪ್ರಕ್ರಿಯೆ!