Site icon Vistara News

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

SBI

SBI plans to open 400 new branches across country in FY25: Chairman Khara

ಮುಂಬೈ: ದೇಶದಲ್ಲೇ ಬೃಹತ್‌ ಬ್ಯಾಂಕ್‌ ಎನಿಸಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (SBI) ಹೊಸ ಶಾಖೆಗಳನ್ನು (SBI New Branches) ಇನ್ನು ನಿಮ್ಮೂರಿಗೂ ಬರುವ ದಿನಗಳು ದೂರವಿಲ್ಲ. ಹೌದು, 2024-25ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಗ್ರಾಮೀಣ ಭಾಗಗಳೂ ಸೇರಿ 400 ಹೊಸ ಶಾಖೆಗಳನ್ನು ತೆರೆಯಲು ಎಸ್‌ಬಿಐ ತೀರ್ಮಾನಿಸಿದೆ. ಇದರಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲೂ ಜನ ಬ್ಯಾಂಕ್‌ಗಳನ್ನು ಹೊಂದಬಹುದಾಗಿದೆ. ಹೊಸ ಶಾಖೆಗಳನ್ನು ತೆರೆಯುವ ಕುರಿತು ಎಸ್‌ಬಿಐ ಚೇರ್ಮನ್‌ ದಿನೇಶ್‌ ಕುಮಾರ್‌ ಖಾರಾ (Dinesh Kumar Khara) ಅವರು ಮಾಹಿತಿ ನೀಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, “ದೇಶದಲ್ಲಿ ಶೇ.89ರಷ್ಟು ವಹಿವಾಟುಗಳು ಡಿಜಿಟಲ್‌ ಮೂಲಕ ಹಾಗೂ ಶೇ.98ರಷ್ಟು ವಹಿವಾಟು ಬ್ಯಾಂಕ್‌ ಹೊರತಾಗಿ ನಡೆಯುತ್ತಿವೆ. ಹೀಗಿರುವಾಗ ಬ್ಯಾಂಕ್‌ಗಳ ಬ್ರ್ಯಾಂಚ್‌ಗಳು ಏಕೆ ಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ದೇಶದ ಪ್ರತಿಯೊಂದು ಭಾಗದಲ್ಲೂ, ಹೊಸ ಹೊಸ ಪಟ್ಟಣ, ಗ್ರಾಮಗಳಿಗೂ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಇದೇ ಕಾರಣಕ್ಕಾಗಿಯೇ 2024-25ನೇ ಹಣಕಾಸು ವರ್ಷದಲ್ಲಿ ದೇಶದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಬ್ರ್ಯಾಂಚ್‌ಗಳನ್ನು ತೆರೆಯಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

“ದೇಶಾದ್ಯಂತ ಹೊಸ ಹೊಸ ಪ್ರದೇಶಗಳಲ್ಲಿ ಬ್ಯಾಂಕ್‌ ಶಾಖೆಗಳನ್ನು ಸ್ಥಳಗಳ ಹುಡುಕಾಟ ನಡೆಯುತ್ತಿದೆ. ಜನರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್‌ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸ್ಥಳಗಳನ್ನು ನಿರ್ಧರಿಸುವ ಕೆಲಸ ನಡೆಯುತ್ತಿದೆ. ದೇಶದ ಜನರಿಗೆ ಬ್ಯಾಂಕ್‌ಗಳ ಅವಶ್ಯಕತೆ ಹೆಚ್ಚಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ದೇಶದ ಪ್ರತಿಯೊಂದು ಭಾಗದಲ್ಲಿ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಆ ಅವಶ್ಯಕತೆಯನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ” ಎಂದು ಪಿಟಿಐಗೆ ವಿವರಿಸಿದರು.

2023-24ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ 59 ಗ್ರಾಮಗಳು ಸೇರಿ 137 ಕಡೆ ಹೊಸ ಶಾಖೆಗಳನ್ನು ಎಸ್‌ಬಿಐ ತೆರೆದಿದೆ ಹಾಗೂ ಅವುಗಳಲ್ಲಿ ವಹಿವಾಟು ನಡೆಯುತ್ತಿದೆ. 2024ರ ಮಾರ್ಚ್‌ ಅಂತ್ಯಕ್ಕೆ ದೇಶಾದ್ಯಂತ ಎಸ್‌ಬಿಐ 22,542 ಬ್ರ್ಯಾಂಚ್‌ಗಳನ್ನು ಹೊಂದಿರುವ ಬೃಹತ್‌ ನೆಟ್‌ವರ್ಕ್‌ ಎನಿಸಿದೆ. ದೇಶದ ವಿಶ್ವಾಸಾರ್ಹ, ಗ್ರಾಹಕರನ್ನು ಸೆಳೆಯುವ ಬ್ಯಾಂಕ್‌ ಎಂಬ ಖ್ಯಾತಿಯನ್ನೂ ಎಸ್‌ಬಿಐ ಗಳಿಸಿದೆ.

ಇದನ್ನೂ ಓದಿ: SBI Rates: ಎಸ್‌ಬಿಐನಲ್ಲಿ ಎಫ್‌ಡಿ ಇಟ್ಟವರಿಗೆ ಬಂಪರ್‌ ನ್ಯೂಸ್;‌ ಭಾರಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

Exit mobile version