ನವದೆಹಲಿ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಆದಾಯ ಲಭಿಸಿರುವ ಚುನಾವಣಾ ಬಾಂಡ್‌ಗಳ (Electoral Bonds) ಕುರಿತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ನೀಡಿದ ಮಾಹಿತಿಯನ್ನು ಚುನಾವಣೆ ಆಯೋಗವು (Election Commission) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚುನಾವಣೆ ವೇಳೆಯೇ ಯಾವ ಪಕ್ಷಗಳು ಎಷ್ಟು ದೇಣಿಗೆ ಪಡೆದಿವೆ ಎಂಬ ಮಾಹಿತಿ ಬಹಿರಂಗವಾದ ಕಾರಣ ತೀವ್ರ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, “ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡುವುದಿಲ್ಲ” ಎಂಬುದಾಗಿ ಎಸ್‌ಬಿಐ ಸ್ಪಷ್ಟಪಡಿಸಿದೆ.
ಆರ್‌ಟಿಐ ಕಾರ್ಯಕರ್ತ ಲೋಕೇಶ್ ಬಾತ್ರಾ ಎಂಬುವರು ಆರ್‌ಟಿಐ ಅಡಿಯಲ್ಲಿ ಮಾರ್ಚ್ 13ರಂದು ಎಸ್‌ಬಿಐಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಬಾಂಡ್‌ಗಳ ಕುರಿತ ಎಲ್ಲ ದಾಖಲೆಯನ್ನು ಡಿಜಿಟಲ್ ಮಾದರಿಯಲ್ಲಿ ನೀಡಬೇಕು ಎಂಬುದಾಗಿ ಕೋರಿದ್ದರು. ಆದರೆ, ಇದನ್ನು ಎಸ್‌ಬಿಐ ತಿರಸ್ಕರಿಸಿದೆ. “ವಿಶ್ವಾಸಾರ್ಹದ ಸಾಮರ್ಥ್ಯದ ಮೇಲೆ ಚುನಾವಣಾ ಬಾಂಡ್‌ಗಳ ಮಾಹಿತಿ ಸಂಗ್ರಹಿಸಲಾಗಿದೆ. ಅದು ವೈಯಕ್ತಿಕ ಮಾಹಿತಿ ಆಗಿರುವ ಕಾರಣ ನೀಡಲು ಆಗಲ್ಲ” ಎಂದು ತಿಳಿಸಿದೆ.
“ಚುನಾವಣಾ ಬಾಂಡ್‌ಗಳ ಕುರಿತು ಎಸ್‌ಬಿಐ ನೀಡಿದ ಮಾಹಿತಿಯನ್ನು ಚುನಾವಣಾ ಆಯೋಗವು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಪಡಿಸಿದೆ. ಆದರೆ, ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) (e) ಅನ್ವಯ (ವಿಶ್ವಾಸಾರ್ಹ ಸಾಮರ್ಥ್ಯದ ದಾಖಲೆ) ಹಾಗೂ ಸೆಕ್ಷನ್ 8 (1) (j) (ವೈಯಕ್ತಿಕ ಮಾಹಿತಿ ಬಹಿರಂಗಪಡಿಸದಿರುವುದು) ಅನ್ವಯ ಮಾಹಿತಿ ನೀಡಲು ಆಗುವುದಿಲ್ಲ” ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.
ಎಸ್‌ಬಿಐ ನೀಡಿದ ಅಂಕಿ-ಅಂಶಗಳ ಪ್ರಕಾರ, ಆಡಳಿತಾರೂಢ ಬಿಜೆಪಿಯು 2018ರಲ್ಲಿ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದ ಒಟ್ಟಾರೆಯಾಗಿ 6,986.5 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ. ತೃಣಮೂಲ ಕಾಂಗ್ರೆಸ್ ಎರಡನೇ ಅತಿ ದೊಡ್ಡ ಸ್ವೀಕೃತದಾರ- ರೂ. 1,397 ಕೋಟಿ. ನಂತರ ಕಾಂಗ್ರೆಸ್- ರೂ. 1,334 ಕೋಟಿ. ಬಿಆರ್‌ಎಸ್- 1,322 ಕೋಟಿ ರೂ. ಮತ್ತು ಒಡಿಶಾದ ಆಡಳಿತ ಪಕ್ಷ ಬಿಜೆಡಿ ₹944.5 ಕೋಟಿ. ಡಿಎಂಕೆ ದೇಣಿಗೆ ಪಡೆದವರಲ್ಲಿ ಆರನೇ ಅತಿ ದೊಡ್ಡ ಪಕ್ಷವಾಗಿದೆ.
ಚುನಾವಣಾ ಬಾಂಡ್‌ಗಳ ಯುನಿಕ್ ನಂಬರ್ ಸೇರಿ ಎಲ್ಲ ಮಾಹಿತಿಯನ್ನೂ ಎಸ್‌ಬಿಐ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಚ್ 18ರಂದು ಆದೇಶಿಸಿತ್ತು. ಅದರಂತೆ, ಎಸ್‌ಬಿಐ ಎಲ್ಲ ಮಾಹಿತಿಯನ್ನೂ ಒದಗಿಸಿದ್ದು, ಚುನಾವಣಾ ಆಯೋಗವು ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಕುರಿತ ಮಾಹಿತಿಯನ್ನು ಅಪ್‌ಲೋಡ್ ಮಾಡಿದೆ.
ಯಾವ ಪಕ್ಷಗಳು ಪಡೆದಿಲ್ಲ?
ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು (BSP) ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿಲ್ಲ ಎಂದು ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಮೇಘಾಲಯದ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ, ಸಿಪಿಐ, ಸಿಪಿಐ (ಎಂ), ಸಿಪಿಐ-ಎಂಎಲ್, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್, ಎಐಎಂಐಎಂ, ಡಿಎಂಡಿಕೆ, ತಮಿಳ್ ಮಾನಿಲಾ ಕಾಂಗ್ರೆಸ್, ಈಎಯುಡಿಎಫ್ ಪಕ್ಷಗಳು ಕೂಡ ತಮ್ಮ ಪಕ್ಷಗಳು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಮಾಹಿತಿ ನೀಡಿವೆ.
ಇದನ್ನೂ ಓದಿ: Lok Sabha Election 2024: ಲೋಕಸಭಾ ಚುನಾವಣೆಯನ್ನು ಗಮನಿಸಲು ವಿದೇಶಗಳ 25 ಪಕ್ಷಗಳನ್ನು ಆಹ್ವಾನಿಸಿದ ಬಿಜೆಪಿ