ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬೃಹತ್ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶುಕ್ರವಾರ ಆಯ್ದ ಅವಧಿಗಳ ಮೇಲಿನ ನಿಧಿ ಆಧಾರಿತ ಸಾಲ ದರವನ್ನು(ಎಂಸಿಎಲ್ಆರ್) 5ರಿಂದ 10 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಎಸ್ಬಿಐ ವೆಬ್ಸೈಟ್ ಪ್ರಕಾರ, ಡಿಸೆಂಬರ್ 15 ರಿಂದ, 1 ವರ್ಷದ ಅವಧಿಯ ಎಂಸಿಎಲ್ಆರ್ ಅನ್ನು ಹಿಂದಿನ 8.55% ರಿಂದ 8.65% ಕ್ಕೆ (SBI Interest Rate) ಏರಿಕೆ ಮಾಡಲಾಗಿದೆ.
ಈ ಬದಲಾವಣೆಯು ಓವರ್ನೈಟ್ ಅವಧಿಯನ್ನು (overnight tenure) ಹೊರತುಪಡಿಸಿ ಇತರ ಎಲ್ಲ ಅವಧಿಗಳ ಸಾಲದ ಮೇಲೂ ಪರಿಣಾಮ ಬೀರುತ್ತದೆ. ಓವರ್ನೈಟ್ ಅವಧಿಯ ಸಾಲದ ಬಡ್ಡಿ ಇದು 8.00% ನಲ್ಲಿ ಬದಲಾಗದೆ ಉಳಿದಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಡಿಸೆಂಬರ್ 8, 2023 ರಂದು ರೆಪೊ ದರವನ್ನು ಸತತ ಐದನೇ ಬಾರಿಗೆ 6.5% ಕ್ಕೆ ಉಳಿಸಿಕೊಳ್ಳಲು ನಿರ್ಧರಿಸಿತ್ತು. ಆದಾಗ್ಯೂ ಬಡ್ಡಿದರಗಳನ್ನು ಹೆಚ್ಚಿಸಲು ಸಾಲದಾತನಿಗೆ ಆಯ್ಕೆಯಿತ್ತು. ಅದಕ್ಕಿಂತ ಹಿಂದೆ ಸತತ ಆರು ಬಾರಿ 250 ಬೇಸಿಸ್ ಪಾಯಿಂಟ್ ಏರಿಕೆ ಮಾಡಿತ್ತು ಆರ್ಥಿಕ ಸಮಿತಿ.
ಎಂಸಿಎಲ್ಆರ್ ಹೆಚ್ಚಳದ ಪರಿಣಾಮವಾಗಿ, ಸಾಲಗಳ ಮೇಲಿನ ಸಮಾನ ಮಾಸಿಕ ಕಂತುಗಳು (ಇಎಂಐ) ಹೆಚ್ಚು ದುಬಾರಿಯಾಗುತ್ತವೆ. ಪ್ರಸ್ತುತ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಗ್ರಾಹಕರು ಹೊಸ, ಹೆಚ್ಚಿನ ದರದಲ್ಲಿ ಸಾಲವನ್ನು ಸ್ವೀಕರಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಈಗಾಗಲೇ ಸಾಲ ಪಡೆದ ಗ್ರಾಹಕರು ತಮ್ಮ ಭವಿಷ್ಯದ ಕಂತುಗಳನ್ನು ಈ ಹೆಚ್ಚಿದ ದರದಲ್ಲಿ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಎಂಸಿಎಲ್ಆರ್ ಆಧಾರಿತ ಸಾಲಗಳು ಮರುಹೊಂದಿಕೆ ಅವಧಿಯನ್ನು ಹೊಂದಿವೆ ಎಂಬುದು ಗಮನಾರ್ಹ ಸಂಗತಿ.
ಇದನ್ನೂ ಓದಿ : BSE Sensex: ಮೊದಲ ಬಾರಿಗೆ ಐತಿಹಾಸಿಕ 71,000 ಗಡಿ ದಾಟಿದ ಸೆನ್ಸೆಕ್ಸ್
ಯಾರ ಮೇಲೆ ಪರಿಣಾಮ ಬೀರುತ್ತದೆ?
ಎಂಸಿಎಲ್ಆರ್ ಪ್ರಕಾರ ಸಾಲ ತೆಗೆದುಕೊಂಡವರಿಗೆ ಇನ್ನು ಮುಂದೆ ಸಾಲದ ಇಎಂಐಗಳು ಹೆಚ್ಚಾಗಲಿವೆ. ಎಂಸಿಎಲ್ಆರ್ ಆಧಾರಿತ ಸಾಲಗಳಿಗೆ ಮರುಹೊಂದಿಕೆ ಅವಧಿ ಇದೆ. ಅದರ ನಂತರ ಸಾಲಗಾರನಿಗೆ ಬಡ್ಡಿ ದರಗಳನ್ನು ಪರಿಷ್ಕರಿಸಲಾಗುತ್ತದೆ.
ಹೊಸ ದರಗಳು 1 ತಿಂಗಳ ಅವಧಿಗೆ 8.20%, 3 ತಿಂಗಳ ಅವಧಿಗೆ 8.20%, 6 ತಿಂಗಳ ಅವಧಿಗೆ 8.55%, 1 ವರ್ಷದ ಅವಧಿಗೆ 8.65%, 2 ವರ್ಷಗಳ ಅವಧಿಗೆ 8.75% ಮತ್ತು 3 ವರ್ಷಗಳ ಅವಧಿಗೆ 8.85% ಎಂದು ಎಸ್ಬಿಐ ವೆಬ್ಸೈಟ್ ತಿಳಿಸಿದೆ.
ಈ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಬದಲಾವಣೆಯು ರಾತ್ರಿಯ ಅವಧಿಯನ್ನು ಹೊರತುಪಡಿಸಿ ಇತರ ಅವಧಿಗಳ ಮೇಲೂ ಪರಿಣಾಮ ಬೀರುತ್ತದೆ, ಇದು 8.00% ನಲ್ಲಿ ಬದಲಾಗದೆ ಉಳಿದಿದೆ.
ಎಷ್ಟು ಹೆಚ್ಚಳ ಎಂಬ ವಿವರ ಇಲ್ಲಿದೆ
ಅವಧಿ | ಪ್ರಸ್ತುತ ಬಡ್ಡಿ ದರ | ಪರಿಷ್ಕೃತ ಬಡ್ಡಿ ದರ |
ಓವರ್ನೈಟ್ | 8.00% | 8.00% |
ಒಂದು ತಿಂಗಳು | 8.15% | 8.20% |
ಮೂರು ತಿಂಗಳು | 8.15% | 8.20% |
ಆರು ತಿಂಗಳು | 8.45% | 8.55% |
ಒಂದು ವರ್ಷ | 8.55% | 8.65% |
ಎರಡು ವರ್ಷ | 8.65% | 8.75% |
ಮೂರು ವರ್ಷ | 8.75% | 8.85% |
ಬಡ್ಡಿ ದರ ಹೆಚ್ಚಳ ಯಾಕೆ?
ಎಸ್ಬಿಐ ಮಾತ್ರವಲ್ಲದೆ ಇತರ ಬ್ಯಾಂಕುಗಳು ಸಹ ಸಾಲದ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಎಸ್ಬಿಐ ಅಧ್ಯಕ್ಷ ದಿನೇಶ್ ಖರಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು. ಸಾಲದ ದರಗಳ ಇತ್ತೀಚಿನ ಹೆಚ್ಚಳದ ಹಿನ್ನೆಲೆಯಲ್ಲಿ ವೆಚ್ಚಗಳನ್ನು ಹೊಂದಿಸಲು ಬಡ್ಡಿ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಪ್ರಸ್ತುತ ಹೆಚ್ಚಳ ಮಾಡಿರುವ 5ರಿಂ 10 ಬೇಸಿಸ್ ಪಾಯಿಂಟ್ಗಳು ಏರಿಕೆಯಾಗಿರುವ ವೆಚ್ಚವನ್ನು ಭರಿಸಲಿದೆ ಎಂದು ಹೇಳಿದ್ದಾರೆ.
ಮುಂದೆಯೂ ಹೆಚ್ಚಾಬಹುದೇ?
ಸಾಲದ ಬಡ್ಡಿ ಹೆಚ್ಚಳದ ಕಳವಳಗಳ ಹೊರತಾಗಿಯೂ ಎಸ್ಬಿಐ ಅಧ್ಯಕ್ಷ ಇನ್ನು ಮಂದೆ ಈ ಬಡ್ಡಿ ದರ ಸ್ಥಿರವಾಗಲಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಬಡ್ಡಿ ದರಗಳು ಉತ್ತುಂಗದಲ್ಲಿವೆ. ಇದು ಮುಂದಿನ ದಿನಗಳಲ್ಲಿ ಸ್ಥಿರವಾಗಲಿದೆ ಎಂದಿದ್ದಾರೆ. ಇದೇ ವೇಲೆ ಠೇವಣಿ ಮೇಲಿನ ಬಡ್ಡಿಯನ್ನು ಹೆಚ್ಚಿಸುವ ಯಾವುದೇ ಯೋಜನೆಯನ್ನು ಎಸ್ಬಿಐ ಹೊಂದಿಲ್ಲ ಎಂದು ಖರಾ ಸ್ಪಷ್ಟಪಡಿಸಿದ್ದಾರೆ.