ನವದೆಹಲಿ: ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ‘ಮಹಿಳಾ ಮೀಸಲಾತಿ ವಿಧೇಯಕ’ (Women’s Reservation Bill) ಮಂಡನೆ ಕುರಿತ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ಎಂಟು ವರ್ಷಗಳ ಹಿಂದೆ ಲೋಕಸಭೆಯಲ್ಲಿ ಅಸ್ತಿತ್ವ ಕಳೆದುಕೊಂಡ ಮಸೂದೆಯನ್ನು ಮತ್ತೆ ಮಂಡಿಸಬೇಕು ಎಂದು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೂದೆ ಮಂಡನೆ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
“ಪಿತೃಪ್ರಧಾನ ವ್ಯವಸ್ಥೆ ಹಾಗೂ ಮನಸ್ಥಿತಿಯು ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ದಬ್ಬಾಳಿಕೆಗೆ ಕಾರಣವಾಗಿದೆ. ಅದರಲ್ಲೂ, ಮಹಿಳಾ ಮೀಸಲಾತಿ ಕುರಿತು ರಚನೆಯಾದ ಮಸೂದೆಯನ್ನು ಮಂಡಿಸದಿರುವುದು ಕಾನೂನುಬಾಹಿರವಾಗಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಸಹಭಾಗಿತ್ವವು ಶೇ.50ರಷ್ಟಿದೆ. ಆದರೆ, ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯವು ಕೇವಲ ಶೇ.14ರಷ್ಟಿದೆ. ಹಾಗಾಗಿ, ಮಸೂದೆಯ ಮಂಡನೆ ಅತ್ಯವಶ್ಯವಾಗಿದೆ” ಎಂದು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್ ಪಿಐಎಲ್ ಸಲ್ಲಿಸಿದೆ.
ಮಸೂದೆ ಮಂಡನೆ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ನಿರ್ದೇಶನ ನೀಡಿದೆ. ಹಾಗೆಯೇ, ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವಾಲಯ ಸಲ್ಲಿಸುವ ಅಫಿಡವಿಟ್‌ಗೆ ಪ್ರತಿಕ್ರಿಯಿಸಲು ಅರ್ಜಿದಾರರಿಗೆ ಹೆಚ್ಚುವರಿ ಮೂರು ವಾರಗಳ ಕಾಲಾವಕಾಶ ನೀಡಿದೆ.
ಏನಿದು ಮಹಿಳಾ ಮೀಸಲು ಮಸೂದೆ?
ಸಾರ್ವತ್ರಿಕ ಚುನಾವಣೆಗಳಲ್ಲಿ ಹೆಣ್ಣುಮಕ್ಕಳಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಇದಾಗಿದೆ. ‘ಮಹಿಳಾ ಮೀಸಲಾತಿ ಮಸೂದೆ’ ಎಂದೇ ಖ್ಯಾತಿಯಾಗಿರುವ ‘ಸಾಂವಿಧಾನಿಕ (118ನೇ ತಿದ್ದುಪಡಿ) ವಿಧೇಯಕ-2008’ಕ್ಕೆ ರಾಜ್ಯಸಭೆಯಲ್ಲಿ 2010ರಲ್ಲಿಯೇ ಅಂಗೀಕಾರ ದೊರೆತಿದೆ. ಇದರ ಕುರಿತು ಲೋಕಸಭೆಯಲ್ಲಿ ಚರ್ಚೆಯಾಗುವ ಮೊದಲೇ ಅಂದರೆ, 2014ರಲ್ಲಿ 15ನೇ ಲೋಕಸಭೆ ವಿಸರ್ಜನೆಯಾದ ಕಾರಣ ವಿಧೇಯಕ ಅಸ್ತಿತ್ವ ಕಳೆದುಕೊಂಡಂತಾಗಿದೆ.
ಇದನ್ನೂ ಓದಿ | BBMP ಮೀಸಲಾತಿ ಎಡವಟ್ಟು: ಕಾಂಗ್ರೆಸ್ ಕ್ಷೇತ್ರದಲ್ಲಿ 72%, BJP ಕ್ಷೇತ್ರದಲ್ಲಿ 34% ಮಹಿಳಾ ಮೀಸಲು