ನವದೆಹಲಿ: ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ (Freedom Of Speech) ನಿಯಂತ್ರಣ ಕುರಿತು ನಿಬಂಧನೆಗಳನ್ನು ವಿಧಿಸುವ ಬಗೆಗಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಕು ಎಂದು ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ.
ಸರ್ಕಾರದ ನೀತಿ ಹಾಗೂ ನಿಬಂಧನೆಗಳ ವಿರುದ್ಧವಾಗಿ, ಬೇರೊಬ್ಬರಿಗೆ ಮಾನಹಾನಿಯುಂಟಾಗುವ ರೀತಿ ಮಾತನಾಡುವ ಜನಪ್ರತಿನಿಧಿಗಳು ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಪಡೆಯಬಹುದೇ ಎಂಬುದು ಪ್ರಕರಣದಲ್ಲಿ ಉದ್ಭವವಾಗಿರುವ ಪ್ರಶ್ನೆಯಾಗಿದೆ. ಅರ್ಜಿದಾರರ ಪರ ವಕೀಲ ಕಾಳೀಶ್ವರಂ ರಾಜ್, “ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಜನಪ್ರತಿನಿಧಿಗಳ ಸ್ವಾತಂತ್ರ್ಯವೂ ಬೇರೆ ಪ್ರಕರಣಗಳಂತೆಯೇ ನಿರ್ಲಕ್ಷ್ಯಕ್ಕೀಡಾಗುತ್ತಿದೆ” ಎಂದು ನ್ಯಾ.ಎಸ್.ನಜೀರ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠದ ಎದುರು ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, “ಶಾಸಕಾಂಗ ಹಾಗೂ ಕಾರ್ಯಾಂಗದ ವಿಚಾರದಲ್ಲಿ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ನಾವು ಹೇಗೆ ಮಧ್ಯಪ್ರವೇಶಿಸಲು ಸಾಧ್ಯ? ಅಷ್ಟಕ್ಕೂ, ಜನಪ್ರತಿನಿಧಿಗಳಿಗೆ ನಾವು ಹೇಗೆ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಾಗುತ್ತದೆ” ಎಂದು ಪ್ರಶ್ನಿಸಿತು. “ಸಾರ್ವಜನಿಕ ಜೀವನದಲ್ಲಿ ಇರುವವರು, ಉನ್ನತ ಜವಾಬ್ದಾರಿ ಹೊತ್ತವರು ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು” ಎಂದು ನ್ಯಾ.ಬಿ.ವಿ.ನಾಗರತ್ನ ಹೇಳಿದರು.
ಸಚಿವರು, ಸಂಸದರು ಹಾಗೂ ಶಾಸಕರು ಸೇರಿ ವಿವಿಧ ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸುವ ಕುರಿತು 2016ರಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯು ಅರ್ಜಿ ಸಲ್ಲಿಸಿದ್ದರು. ಇದನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿದೆ. ಈಗ ತೀರ್ಪು ಕಾಯ್ದಿರಿಸಲಾಗಿದೆ.
ಇದನ್ನೂ ಓದಿ | Bharat Jodo | ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ: ರಾಹುಲ್ ಗಾಂಧಿ ಆರೋಪ