ಚಂಡೀಗಢ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತಪತ್ರಗಳನ್ನು ವಿರೂಪಗೊಳಿಸಿರುವುದು ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court ) ಸೋಮವಾರ ಹೇಳಿದೆ. ಇಂಥ ಕೃತ್ಯಗಳ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಬಿಡುವುದಿಲ್ಲ ಎಂಬುದಾಗಿಯೂ ಕೋರ್ಟ್ ಹೇಳಿದೆ.
ಚಂಡೀಗಢದಲ್ಲಿ ಹೊಸ ಮೇಯರ್ ಚುನಾವಣೆ ವಿಚಾರದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಎಪಿ ಕೌನ್ಸಿಲರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಮೇಲಿನ ಹೇಳಿಕೆಗಳನ್ನು ನೀಡಿತು. ಚುನಾವಣಾಧಿಕಾರಿಗಳು ಚುನಾವಣೆಗಳನ್ನು ನಡೆಸುವ ರೀತಿ ಇದೇನಾ? ಇದು ಪ್ರಜಾಪ್ರಭುತ್ವದ ಅಣಕ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ವಿಡಿಯೊ ನೋಡಿ ದಿಗ್ಭ್ರಮೆಗೊಂಡಿದ್ದೇವೆ. ಈ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬೇಕು. ಇದು ಚುನಾವಣಾಧಿಕಾರಿಯ ಅಧಿಕಾರಿಯ ವರ್ತನೆಯೇ” ಎಂದು ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮೂಲಕ ಮತಪತ್ರಗಳು, ವಿಡಿಯೋಗ್ರಫಿ ಮತ್ತು ಇತರ ವಸ್ತುಗಳು ಸೇರಿದಂತೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ದಾಖಲೆಗಳನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್ ಇದೇ ವೇಳೆ ಆದೇಶಿಸಿದೆ.
ಚಂಡೀಗಢ ನಗರಸಭೆಯ ಮುಂಬರುವ ಸಭೆಯನ್ನು ಮುಂದಿನ ವಿಚಾರಣೆಯವರೆಗೆ ಮುಂದೂಡಬೇಕು ಎಂದು ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿದೆ. “ಸಂಪೂರ್ಣ ದಾಖಲೆಯನ್ನು ಕೇಂದ್ರಾಡಳಿ ಚಂಡೀಗಢದ ಉಪ ಆಯುಕ್ತರಿಗೆ ಹಸ್ತಾಂತರಿಸಬೇಕು. ಜಿಲ್ಲಾಧಿಕಾರಿಗಳು ಅದನ್ನು ರಿಜಿಸ್ಟ್ರಾರ್ ಜನರಲ್ ಹೈಕೋರ್ಟ್ ಗೆ ಹಸ್ತಾಂತರಿಸಬೇಕು. ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ನ ಮುಂಬರುವ ಸಭೆಯನ್ನು ಮುಂದಿನ ದಿನಾಂಕದವರೆಗೆ ಮುಂದೂಡಲಾಗುವುದು. ಇಂದು ಸಂಜೆ 5:00 ಗಂಟೆಯೊಳಗೆ ದಾಖಲೆಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಹಸ್ತಾಂತರಿಸಲಿ” ಎಂದು ನ್ಯಾಯಮೂರ್ತಿಗಳು ಹೇಳಿದರು.
ಇದನ್ನೂ ಓದಿ : Narendra Modi : ಲೂಟಿ ಮಾಡಿದ್ದನ್ನು ವಾಪಸ್ ವಸೂಲು ಮಾಡುತ್ತೇವೆ; ಇಡಿ ದಾಳಿ ಸಮರ್ಥಿಸಿದ ಮೋದಿ
ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಮೂರು ಸ್ಥಾನಗಳನ್ನು ಉಳಿಸಿಕೊಂಡಿದೆ. ಬಿಜೆಪಿಯ ಭರ್ಜರಿ ವಿಜಯದ ನಂತರ, ಕಾಂಗ್ರೆಸ್-ಎಎಪಿ ಮೈತ್ರಿಕೂಟವು ಚುನಾವಣಾಧಿಕಾರಿ ಮತಪತ್ರಗಳನ್ನು ತಿರುಚಿದ್ದಾರೆ ಎಂದು ಆರೋಪಿಸಿತ್ತು. ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಕೋರಿತ್ತು.
ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ಹರ್ಷ್ ಬಂಗರ್ ಅವರ ವಿಭಾಗೀಯ ಪೀಠ ಬುಧವಾರ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು.