Site icon Vistara News

Scam 2003 trailer out: ನಕಲಿ ಛಾಪಾ ಕಾಗದ ಹಗರಣದ ಕಿಂಗ್‌ಪಿನ್ ತೆಲಗಿ ಕತೆಯೇ ‘ಸ್ಕ್ಯಾಮ್ 2003’

Scam 2003

ನವದೆಹಲಿ: ಷೇರು ಪೇಟೆ ಹಗರಣದ ರೂವಾರಿ ಹರ್ಷದ್ ಮೆಹ್ತಾ ಆಧರಿತ ‘ಸ್ಕ್ಯಾಮ್ 1992′(Scam 1992) ವೆಬ್‌ ಸಿರೀಸ್ ಸಕ್ಸೆಸ್ ಬೆನ್ನಲ್ಲೇ ‘ಸ್ಕ್ಯಾಮ್ 2003’ (Scam 2003) ಸ್ಟ್ರೀಮಿಂಗ್ ಆಗಲು ಸಿದ್ಧವಾಗಿದೆ. ಆಗಸ್ಟ್ 4ರಂದು ಟ್ರೈಲರ್ ಕೂಡ ರಿಲೀಸ್ ಆಗಿದೆ(Scam 2003 trailer out). ಅಂದ ಹಾಗೆ, ಸ್ಕ್ಯಾಮ್ 2003 ವೆಬ್‌ ಸಿರೀಸ್‌ಗೂ ಕರ್ನಾಟಕಕ್ಕೂ ಸಂಬಂಧವಿದೆ. ಯಾಕೆಂದರೆ, ಕರ್ನಾಟಕದ ವ್ಯಕ್ತಿಯೊಬ್ಬ ರಾಷ್ಟ್ರ ಮಟ್ಟದಲ್ಲಿ ಸ್ಕ್ಯಾಮ್ ಮಾಡಿ, ಕುಖ್ಯಾತನಾದ ಕತೆ ಇದು. ನಕಲಿ ಛಾಪಾ ಹಗರಣದ ರೂವಾರಿ (Abdul Karim Telgi) ಅಬ್ದುಲ್ ಕರೀಮ್ ತೆಲಗಿ (stamp scams) ಕುರಿತಾದ ವೆಬ್‌ ಸಿರೀಸ್ ಆಗಿ ತೆರೆ ಮೇಲೆ ಬರುತ್ತಿದೆ. ಸ್ಕ್ಯಾಮ್ 1992 ವೆಬ್ ಸಿರೀಸ್ ನಿರ್ಮಾಣ ಮಾಡಿದ ತಂಡವೇ ಸ್ಕ್ಯಾಮ್ 2003 ತೆರೆಗೆ ತರುತ್ತಿದೆ.

ಖಾನಾಪುರ ಮೂಲದ ತೆಲಗಿ, ನಕಲಿ ಛಾಪಾ ಕಾಗದ ಮಾರಾಟ ಮೂಲಕ ಸುಮಾರು 10 ಸಾವಿರ ಕೋಟಿ ರೂ. ಹಗರಣ ಮಾಡಿದ್ದ. ತೆಲಗಿ ಕುರಿತು ಹಿಂದಿ ಪತ್ರಕರ್ತ ಸಂಜಯ್ ಸಿಂಗ್ ಅವರು ಬರೆದ ರಿಪೋರ್ಟರ್ ಕಿ ಡೈರಿ ಪುಸ್ತಕವನ್ನಾಧರಿಸಿ ಈ ಸ್ಕ್ಯಾಮ್ 2003 ನಿರ್ಮಾಣ ಮಾಡಲಾಗಿದೆ.

ಯಾರು ಈ ಅಬ್ದುಲ್ ಕರೀಮ್ ತೆಲಗಿ?

ಖಾನಾಪುರ ಪಟ್ಟಣದಲ್ಲಿ 1961ರಲ್ಲಿ ಅಬ್ದುಲ್ ಕರೀಮ್ ತೆಲಗಿ ಜನಿಸಿದರು. ಇವರ ತಂದೆ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು. ಇವರದ್ದು ಕೆಳ ಮಧ್ಯಮ ವರ್ಗದ ಕುಟುಂಬವಾಗಿತ್ತು. ತಂದೆಯ ನಿಧನದ ಬಳಿಕ ತೆಲಗಿ, ರೈಲುಗಳಲ್ಲಿ ತಿಂಡಿ ಮಾರುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದ್ದರು.

ಹಣ ಗಳಿಸುವುದಕ್ಕಾಗಿ ತೆಲಗಿ ಸೌದಿ ಅರೆಬಿಯಾಗೆ ಹೋದರು. ಅಲ್ಲಿಂದ ಹಿಂದುರಿಗಿದ ಬಳಿಕ ತೆಲಗಿ, ನಕಲಿ ಪಾಸ್‌ಪೋರ್ಟ್ ಮತ್ತು ನಕಲಿ ಛಾಪಾ ಕಾಗದ ಪ್ರಿಂಟ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಭಾರತದಲ್ಲಿ ಕಾನೂನು ದಾಖಲೆಗಳನ್ನು ದೃಢೀಕರಿಸಲು ಸ್ಟಾಂಪ್ ಪೇಪರ್‌ಗಳನ್ನು ಬಳಸಲಾಗುತ್ತದೆ ಮತ್ತು ಸರ್ಕಾರವು ಅವುಗಳನ್ನು ನೋಂದಾಯಿತ ಮಾರಾಟಗಾರರ ಮೂಲಕ ಮಾರಾಟ ಮಾಡುತ್ತದೆ. 10, 100, 500 ರೂಪಾಯಿಗಳ ಮುಖ ಬೆಲೆ ಛಾಪಾ ಕಾಗದಗಳನ್ನು ಭೂಮಿ ಮಾರಾಟ, ಖರೀದಿ ಅಥವಾ ಕೆಲವು ನ್ಯಾಯಾಲಯದ ಉದ್ದೇಶಗಳಿಗಾಗಿ ಕೆಲವು ಒಪ್ಪಂದಗಳನ್ನು ಕೈಗೊಳ್ಳುವಾಗ ಈ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

ತೆಲಗಿ ಈ ಛಾಪಾ ಕಾಗದಗಳನ್ನು ಮುದ್ರಿಸಿ ತನ್ನ ಏಜೆಂಟರ ಮೂಲಕ ಮಾರಾಟ ಮಾಡುತ್ತಿದ್ದ. ಆ ಮೂಲಕ ಹಣವನ್ನು ಗಳಿಸುತ್ತಿದ್ದ. ತೆಲಗಿಯ ಛಾಪಾ ಕಾಗದ ದಂಧೆಯಿಂಯಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 10 ಸಾವಿರ ಕೋಟಿ ರೂ. ನಷ್ಟ ಉಂಟಾಯಿತು.

ಈ ಸುದ್ದಿಯನ್ನೂ ಓದಿ: Web series | ಛಾಪಾ ಹಗರಣ ಆರೋಪಿ ತೆಲಗಿ ಬದುಕಿನ ಕಥೆ ಹೇಳುವ ಸ್ಕ್ಯಾಮ್‌ 2003 ವೆಬ್‌ ಸೀರಿಸ್‌ ತಡೆಗೆ ಕೋರ್ಟ್‌ ನಕಾರ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಇಂಡಿಯನ್ ಸೆಕ್ಯುರಿಟಿ ಪ್ರೆಸ್‌ನ ಕೆಲವು ಅಧಿಕಾರಿಗಳೊಂದಿಗೆ ಶಾಮೀಲಾಗಿ, ಛಾಪಾ ಕಾಗದಗಳು ಕೊರತೆಯಾಗುವಂತೆ ಮಾಡುತ್ತಿದ್ದ. ಕೃತಕ ಕೊರತೆ ಮತ್ತು ವ್ಯವಸ್ಥೆಯೊಳಗಿನ ಅಧಿಕಾರಿಗಳ ನೆರವು ಮೂಲಕ ದೇಶಾದ್ಯಂತ ತನ್ನ ಅಕ್ರಮ ವ್ಯವಹಾರವನ್ನು ವಿಸ್ತರಿಸಿದ. ಸರ್ಕಾರಿ ಕಚೇರಿಗಳ ಕೆಲಸಕ್ಕೆ ಛಾಪಾ ಕಾಗದ ಅಗತ್ಯವಿರುವುದರಿಂದ ಅವುಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತಿತ್ತು. ಈ ಅವಕಾಶವನ್ನು ಬಳಸಿಕೊಂಡು ತೆಲಗಿ ನಕಲಿ ಛಾಪಾ ಕಾಗದ ಪ್ರಿಂಟ್ ಮಾಡುತ್ತಿದ್ದ ಮತ್ತು ಅವುಗಳನ್ನು ಏಜೆಂಟರ್ ಮೂಲಕ ಮಾರಾಟ ಮಾಡುತ್ತಿದ್ದ. ಇದರಿಂದ ಕೋಟ್ಯಂತರ ರೂಪಾಯಿ ಹಣವನ್ನು ಗಳಿಸುತ್ತಿದ್ದ. ಮಹಾರಾಷ್ಟ್ರ ಪೊಲೀಸರು ಮೊದಲಿಗೆ ನಕಲಿ ಛಾಪಾ ಕಾಗದ ಜಾಲವನ್ನು ಭೇದಿಸಿದರು. ಬಳಿಕ ಅದರ ಹಿಂದೆ ಇದ್ದ ತೆಲಗಿ ಕರಾಮತ್ತು ಹೊರ ಜಗತ್ತಿಗೆ ಗೊತ್ತಾಯಿತು. ತೆಲಗಿಯ ಈ ಒಟ್ಟು ಕತೆಯೇ ಸ್ಕ್ಯಾಮ್ 2003 ವೆಬ್‌ ಸಿರೀಸ್‌ಗೆ ಸ್ಫೂರ್ತಿಯಾಗಿದೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version