ಬೆಂಗಳೂರು: ಸಾರ್ವಜನಿಕ ಶೌಚಾಲಯಗಳನ್ನು ಉಪಯೋಗಿಸುವಾಗ ಅಲ್ಲಿನ ಸ್ವಚ್ಛತೆಯ ಬಗ್ಗೆ ಬಹಳಷ್ಟು ಜನರಿಗೆ ಆತಂಕ ಇರುವುದು ಸಹಜ. ಆದರೆ ಬರಿಗಣ್ಣಿಗೆ ಕಾಣುವುದಷ್ಟೇ ಸ್ವಚ್ಛತೆ ಎನ್ನುವುದಲ್ಲ. ಗೋಚರಿಸದೆಯೇ ಇರುವಂಥ ಸಮಸ್ಯೆಗಳೂ ಸ್ವಚ್ಛತೆಯ ಬಗ್ಗೆ ಕಳವಳ ಮೂಡಿಸುತ್ತವೆ. ಸಾರ್ವಜನಿಕ ಶೌಚಾಲಯವಾದರೆ ಏನಾಯಿತು? ಅಲ್ಲಿ ನಾವು ಕಳೆಯುವ ಎರಡು ನಿಮಿಷಕ್ಕೆ ಅಷ್ಟೇಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವವರೂ ಇದ್ದಾರೆ. ಆದರೆ ಕೊಲರಡೊ-ಬೌಲ್ಡರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಟಾಯ್ಲೆಟ್ ಫ್ಲಶ್ ಮಾಡಿದಾಗ ಏನಾಗುತ್ತದೆ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಈ ಬಗ್ಗೆ ಯಾಕಾಗಿ ಹೆಚ್ಚಿನ ಎಚ್ಚರ ವಹಿಸಬೇಕು ಎನ್ನುವುದನ್ನು ಪುರಾವೆ ಸಹಿತ ಬರಿಗಣ್ಣಿಗೆ ಕಾಣುವಂತೆ ತೋರಿಸಿದ್ದಾರೆ.
ಇದಕ್ಕಾಗಿ ಕಮೋಡ್ ಒಂದಕ್ಕೆ ಕಡು ಹಸಿರು ಬಣ್ಣದ ಲೇಸರ್ ಬೆಳಕನ್ನು ಅಳವಡಿಸಿ, ಅದಕ್ಕೆ ಕ್ಯಾಮರಾ ಅಂಟಿಸಿದ್ದಾರೆ. ಕಮೋಡ್‌ನ ಫ್ಲೆಶ್ ಗುಂಡಿಯನ್ನು ಒತ್ತುತ್ತಿದ್ದಂತೆ, ಅತ್ಯಂತ ಸಣ್ಣ ನೀರಿನ ಕಣಗಳು ಸುತ್ತಲಿನ ವಾತಾವರಣಕ್ಕೆಲ್ಲ ಸಿಂಪಡಿಸಿದಂತೆ ತೋರುತ್ತವೆ. ಈ ಕಣಗಳು ಬರಿಗಣ್ಣಿಗೆ ಕಾಣುವಂಥವಲ್ಲ. ಅದರಲ್ಲೂ ಮುಚ್ಚಳ ಇಲ್ಲದಿರುವಂಥ ಕಮೋಡ್‌ಗಳ ವಿಷಯದಲ್ಲಿ ಬಳಕೆದಾರರು ಎಷ್ಟು ಜಾಗ್ರತೆಯಿಂದ ಇರಬೇಕು ಎನ್ನುವುದನ್ನು ಈ ಸಣ್ಣ ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಕಣ್ಣಿಗೆ ಕಾಣುತ್ತಿಲ್ಲ ಎನ್ನುವುದನ್ನು ಇಲ್ಲವೇ ಇಲ್ಲ ಎನ್ನಲಾಗದು ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
ಸಾರ್ವಜನಿಕ ಶೌಚಾಲಯಗಳಲ್ಲಿ ರೋಗಾಣುಗಳು ಹೇಗೆ ಹರಡುತ್ತಿವೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. “ಕಣ್ಣಿಗೆ ಕಾಣದಿರುವುದು ಇಲ್ಲ ಎಂದು ತಿಳಿಯುವುದು ಸುಲಭ. ಆದರೆ ಈ ವೀಡಿಯೊ ನೀಡದಿ ಮೇಲೆ ಟಾಯ್ಲೆಟ್ ಫ್ಲಶ್‌ಅನ್ನು ಮೊದಲಿನಂತೆ ಗ್ರಹಿಸುವುದು ಕಷ್ಟ. ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಪ್ರಮುಖವಾದ ಸಂದೇಶವೊಂದು ಇದರಲ್ಲಿದೆ” ಎಂದು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜಾನ್ ಕ್ರಿಮಲ್ಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಏರೋಸೋಲ್ ಮಾದರಿಯ ಫ್ಲೆಶ್‌ಗಳ ಮೂಲಕ ಸುತ್ತಲಿನ ವಾತಾವರಣಕ್ಕೆ ರೋಗಾಣುಗಳು ಹರಡಬಹುದು. ಕೋವಿಡ್ ಮತ್ತು ವಿಷಮ ಶೀತಜ್ವರದ ವೈರಾಣುಗಳೂ ಈ ಮೂಲಕ ಹರಡಬಹುದು. ಫ್ಲಶ್ ಮಾಡಿದ ಎಂಟು ಸೆಕೆಂಡುಗಳಲ್ಲಿ ಸುಮಾರು ೧.೫ ಮೀ. ಎತ್ತರದವರೆಗೆ ನೀರಿನ ಕಣಗಳು ಚಿಮ್ಮುತ್ತವೆ ಎಂಬುದು ಈ ಪ್ರಯೋಗದಲ್ಲಿ ಸಾಬೀತಾಗಿದೆ.
ಇದಕ್ಕೆ ಹಲವಾರು ಮಂದಿ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಕೆಲವರು- ಲಾಗಾಯ್ತಿನಿಂದಲೂ ಬಳಕೆಯಲ್ಲಿರುವ ಸಾರ್ವಜನಿಕ ಶೌಚಾಲಯಗಳು ಈವರೆಗೂ ಅಂಥ ಅಪಾಯವನ್ನೇನೂ ತಂದೊಡ್ಡಿಲ್ಲ. ಹಾಗಾಗಿ ವಿಜ್ಞಾನಿಗಳ ಈ ಕಲ್ಪನೆಯೇ ಕೆಲಸಕ್ಕಿಲ್ಲದ್ದು ಎಂದು ಟೀಕಿಸಿದ್ದಾರೆ. ಇನ್ನು ಕೆಲವರು, ಟಾಯ್ಲೆಟ್‌ಗಳ ಸಮೀಪಕ್ಕೆಲ್ಲೂ ಹಲ್ಲುಜ್ಜುವ ಬ್ರಷ್ ಇರಿಸಬೇಡಿ, ಅವುಗಳನ್ನು ಡ್ರಾ ಅಥವಾ ಕಪಾಟುಗಳಲ್ಲಿ ಇಡಿ ಎಂದು ಎಚ್ಚರಿಸಿದ್ದಾರೆ. ಮತ್ತೊಬ್ಬರು ಫ್ಲಶ್ ಮಾಡಿದ ನಂತರ ಟಾಯ್ಲೆಟ್‌ನಿಂದ ಹೊರಗೆ ಹೋಗಿ, ಅಲ್ಲೇಕೆ ನಿಂತಿರುತ್ತೀರಿ? ಆದರೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ ಎಂದು ಟಿಪ್ಸ್ ನೀಡಿದ್ದಾರೆ. ಒಬ್ಬ ಬಳಕೆದಾರರಂತೂ, “ಇಂಥದ್ದನ್ನೆಲ್ಲ ತೋರಿಸುವ ಬದಲು ಈ ವಿಜ್ಞಾನಿಗಳು ಸ್ವಚ್ಛ ಟಾಯ್ಲೆಟ್‌ಗಳನ್ನು ನಿರ್ಮಿಸಬಹುದಾಗಿತ್ತು” ಎಂದು ಕಣ್ಣು ಕೆಂಪಾಗಿಸಿದ್ದಾರೆ.
ಇದನ್ನೂ ಓದಿ | Anushka Shetty | ಪುತ್ತೂರಲ್ಲಿ ಭೂತಕೋಲ ವೀಕ್ಷಿಸಿದ ನಟಿ ಅನುಷ್ಕಾ ಶೆಟ್ಟಿ; ವಿಡಿಯೊ ವೈರಲ್