ಪಣಜಿ: ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯ ಪೂರ್ವಭಾವಿಯಾಗಿ ಇಂದು ಗೋವಾದಲ್ಲಿ ನಡೆಯುತ್ತಿರುವ ವಿದೇಶಾಂಗ ಸಚಿವರ ಸಭೆಯಲ್ಲಿ (SCO Meeting) ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್.ಜೈಶಂಕರ್ ಅವರು ಗಡಿಭಾಗಗಳಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಅತ್ಯಂತ ಕಠಿಣವಾಗಿ ಮಾತನಾಡಿದರು. ಹಾಗೇ, ಇಂಥ ಉಗ್ರ ಚಟುವಟಿಕೆಗಳಿಗೆ ಹಣ ಸಂದಾಯ ಆಗುತ್ತಿರುವ ಮಾರ್ಗಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಬೇಕು. ಉಗ್ರರಿಗೆ ನೆರವು ಹರಿದುಹೋಗುತ್ತಿರುವ ದಾರಿಗಳನ್ನೆಲ್ಲ ಮುಚ್ಚಬೇಕು ಎಂದು ಒತ್ತುಕೊಟ್ಟು ಹೇಳಿದರು. ಹಾಗೇ, ಕೊವಿಡ್ 19 ಸಾಂಕ್ರಾಮಿಕ ಮತ್ತು ಭೌಗೋಳಿಕ ರಾಜಕೀಯದಲ್ಲಾಗುತ್ತಿರುವ ವಿಪ್ಲವಗಳು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗುತ್ತಿರುವ ಅಡಚಣೆಗಳ ಬಗ್ಗೆ ಎಸ್.ಜೈಶಂಕರ್ ಮಾತನಾಡಿದರು. ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಅವರೆದುರೇ ಜೈಶಂಕರ್ ಭಯೋತ್ಪಾದನೆ ಬಗ್ಗೆ ತೀಕ್ಷ್ಣ, ಕಠೋರವಾಗಿ ಮಾತನಾಡಿದ್ದು ವಿಶೇಷವೆನ್ನಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಿದ್ದರ ಬಗ್ಗೆ ಮತ್ತು ಈಗ ಅಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಸ್.ಜೈಶಂಕರ್ ಅವರು ‘ಅಫ್ಘಾನ್ ಜನರ ಬಗ್ಗೆ ನಾವು ಗಮನಹರಿಸಬೇಕು. ಅವರ ಕಲ್ಯಾಣ, ಒಳಿತಿಗಾಗಿ ನಾವು ಕೆಲಸ ಮಾಡಬೇಕು. ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ನೀಡುವುದು, ಭಯೋತ್ಪಾದನೆ ವಿರುದ್ಧ ಹೋರಾಡುವುದು, ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯುವುದು, ಮಹಿಳೆ, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಬಗ್ಗೆ ಆದ್ಯತೆ ಕೊಡುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು’ ಎಂದು ಜೈಶಂಕರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: SCO Meet: ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ ಸಭೆಗೆ ಪಾಕ್ ರಕ್ಷಣಾ ಸಚಿವರನ್ನು ಆಹ್ವಾನಿಸಿದ ಭಾರತ
ಶಾಂಘೈ ಸಹಕಾರ ಸಂಘಟನೆಯ ಪ್ರಸಕ್ತ 2023ನೇ ವರ್ಷದ ಶೃಂಗಸಭೆಯ ಆತಿಥ್ಯ ವಹಿಸಿರುವ ಭಾರತ ಅದರ ಪೂರ್ವಭಾವಿಯಾಗಿ ಹಲವು ಸಭೆಗಳನ್ನು ಆಯೋಜಿಸುತ್ತಿದೆ. ಶಾಂಘೈ ಒಕ್ಕೂಟದಲ್ಲಿರುವ ಭಾರತ, ಚೀನಾ, ತಜಿಕಿಸ್ತಾನ್, ರಷ್ಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ ದೇಶಗಳಿದ್ದು, ಎಲ್ಲ ಸಭೆಗಳಲ್ಲೂ ಇವಿಷ್ಟೂ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ. ಅಂತೆಯೇ ಗೋವಾದಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ವಿದೇಶಾಂಗ ಇಲಾಖೆ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಮೇ 4ರಂದು ಗೋವಾಕ್ಕೆ ಬಂದಿಳಿದಿದ್ದಾರೆ. ಈ ಮೂಲಕ 11 ವರ್ಷಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಬಂದಂತಾಗಿದೆ.
ಇಂದು ಬೆಳಗ್ಗೆ ಬಿಲಾವಲ್ ಭುಟ್ಟೊ ಜರ್ದಾರಿಯವರನ್ನು ಎಸ್.ಜೈಶಂಕರ್ ಅವರು ಸ್ವಾಗತಿಸಿದರು. ಜೈಶಂಕರ್ ಅವರು ಜರ್ದಾರಿಗೆ ಶೇಕ್ ಹ್ಯಾಂಡ್ ಮಾಡಲಿಲ್ಲ. ಅದರ ಬದಲಿಗೆ ಭಾರತೀಯ ಸಂಪ್ರದಾಯದಂತೆ ನಮಸ್ತೆ ಎಂದು ಕೈಮುಗಿದರು. ಜರ್ದಾರಿ ಕೂಡ ಪ್ರತಿಯಾಗಿ ಕೈಮುಗಿದಿದ್ದಾರೆ. ನಿನ್ನೆ ಬರುವಾಗ ಪ್ಯಾಂಟ್-ಶರ್ಟ್, ಕೋಟ್ ಹಾಕಿಕೊಂಡು ಬಂದಿದ್ದ ಜರ್ದಾರಿ, ಇಂದು ಸಭೆಯ ವೇಳೆ ಪಾಕಿಸ್ತಾನಿ ಸಂಪ್ರದಾಯದ ಉಡುಪು ಧರಿಸಿದ್ದರು.