Site icon Vistara News

Seat Belt: ಕಾರಿನ ಮುಂಭಾಗ ಮಾತ್ರವಲ್ಲ ಹಿಂಬದಿ ಪ್ರಯಾಣಿಕರಿಗೂ ಸೀಟ್‌ ಬೆಲ್ಟ್‌ ಕಡ್ಡಾಯ; ಇಲ್ಲದಿದ್ದರೆ ಬೀಳುತ್ತೆ ದಂಡ

seat belt

seat belt

ನವದೆಹಲಿ: ಕಾರಿನಲ್ಲಿ ಪ್ರಯಾಣಿಸುವವರೆಲ್ಲರೂ ಸೀಟ್‌ ಬೆಲ್ಟ್‌ (Seat Belt) ಧರಿಸುವುದು ಕಡ್ಡಾಯ. ಈಗಾಗಲೇ ಜಾರಿಯಲ್ಲಿರುವ ಈ ನಿಯಮ 2025ರ ಏಪ್ರಿಲ್ 1ರಿಂದ ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಕಾರಿನ ಮುಂಭಾಗ ಮಾತ್ರವಲ್ಲ ಹಿಂಬದಿ ಕುಳಿತವರು ಸೀಟ್‌ ಬೆಲ್ಟ್‌ ಧರಿಸದಿದ್ದರೆ ಸುಮಾರು 1,000 ರೂ. ದಂಡ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜತೆಗೆ ಎಲ್ಲ ಕಾರುಗಳಲ್ಲಿ ‘ರಿಯರ್ ಸೀಟ್ ಬೆಲ್ಟ್ ಅಲಾರಂ’ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಅಧಿಸೂಚನೆ ಏನು ಹೇಳುತ್ತದೆ ?

ಇತ್ತೀಚೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ತಯಾರಕ ಕಂಪೆನಿಗಳಿಗೆ ಕರಡು ಅಧಿಸೂಚನೆಯನ್ನು ಹೊರಡಿಸಿ, 2025 ಏಪ್ರಿಲ್ 1ರಿಂದ ದೇಶದಲ್ಲಿ ಮಾರಾಟವಾಗುವ ಎಲ್ಲ ಕಾರುಗಳಲ್ಲಿ ‘ರಿಯರ್ ಸೀಟ್ ಬೆಲ್ಟ್ ಅಲಾರಂ’ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸೂಚಿಸಿದೆ.

ಏನಿದು ರಿಯರ್ ಸೀಟ್ ಬೆಲ್ಟ್ ಅಲಾರಂ ?

ಸೀಟ್ ಬೆಲ್ಟ್ ಅಲಾರಂ ಯಾಕೆ ಅತ್ಯಗತ್ಯ ಎಂದರೆ ಇದು ಕಾರಿನಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಸೀಟ್‌ ಬೆಲ್ಟ್‌ ಧರಿಸುವಂತೆ ಎಚ್ಚರಿಸುತ್ತದೆ. ಸೀಟ್ ಬೆಲ್ಟ್ ಧರಿಸದಿದ್ದರೆ ಬೀಪಿಂಗ್ ಶಬ್ದ ಮೊಳಗುತ್ತದೆ ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವವರೆಗೂ ಈ ಶಬ್ದ ನಿಲ್ಲುವುದಿಲ್ಲ. ಸರ್ಕಾರಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ʼʼಅಧಿಸೂಚನೆಯು ಹಿಂಭಾಗದ ಸೀಟ್ ಬೆಲ್ಟ್ ಅಲಾರಂಗಳಿಗೆ ಮಾತ್ರ ಅನ್ವಯವಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಹೊಸ ನಿಬಂಧನೆಗಳನ್ನು ಅಳವಡಿಸಿಲ್ಲʼʼ ಎಂದು ತಿಳಿಸಿದ್ದಾರೆ. ಹೊಸ ನಿಯಮದ ಪ್ರಕಾರ, ಸೀಟ್ ಬೆಲ್ಟ್ ಧರಿಸದ ಹಿಂಭಾಗದ ಸೀಟ್ ಪ್ರಯಾಣಿಕರಿಗೆ ಕೇಂದ್ರ ಮೋಟಾರು ವಾಹನ ನಿಯಮಗಳ (ಸಿಎಂವಿಆರ್) ನಿಯಮ 138 (3)ರ ಅಡಿಯಲ್ಲಿ 1,000 ರೂ. ದಂಡ ವಿಧಿಸಲಾಗುತ್ತದೆ.

ಯಾಕಾಗಿ ಈ ನಿಯಮ ?

2022ರಲ್ಲಿ ದೇಶದ ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಮಿಸ್ತ್ರಿ ಅವರು ಹಿಂದಿನ ಸೀಟ್‌ನಲ್ಲಿ ಕುಳಿತಿದ್ದರು. ಈ ವೇಳೆ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಈ ಘಟನೆಯಿಂದ ಎಚ್ಚೆತ್ತ ಸರ್ಕಾರ ಹಿಂಬದಿ ಸೀಟ್‌ ಬೆಲ್ಟ್‌ ಕಡ್ಡಾಯಗೊಳಿಸಲು ಮುಂದಾಗಿತ್ತು.

“ಈಗಾಗಲೇ ಹಿಂದಿನ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಆದರೆ ಜನರು ಅದನ್ನು ಅನುಸರಿಸುತ್ತಿಲ್ಲ. ಹಿಂದಿನ ಸೀಟಿನಲ್ಲಿರುವವರು ಮುಂಭಾಗದ ಸೀಟಿನಲ್ಲಿರುವಂತೆ ಬೆಲ್ಟ್‌ಗಳನ್ನು ಧರಿಸದಿದ್ದರೆ ಸೈರನ್ ಹೊರಡಿಸುವ ವ್ಯವಸ್ಥೆ ಇರಲಿದೆ. ಅಷ್ಟಾಗಿಯೂ ಬೆಲ್ಟ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆʼʼ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆಯೇ ತಿಳಿಸಿದ್ದರು.

ಇದನ್ನೂ ಓದಿ: Rishi Sunak | ಚಲಿಸುವ ಕಾರಿನಲ್ಲಿ ಸೀಟ್‌ ಬೆಲ್ಟ್‌ ಹಾಕದ ಬ್ರಿಟನ್‌ ಪ್ರಧಾನಿ ರಿಷಿಗೆ ದಂಡ!

“ಹಿಂಬದಿ ಸೀಟಿನಲ್ಲಿ ಸೀಟ್ ಬೆಲ್ಟ್‌ಗಳನ್ನು ಹಾಕಿಕೊಳ್ಳುವ ಅಭ್ಯಾಸವು ದೊಡ್ಡ ನಗರಗಳು ಮತ್ತು ಮಹಾನಗರಗಳಲ್ಲಿ ತುಂಬಾ ಕಡಿಮೆಯಾಗಿದೆ. ಇನ್ನು ಭಾರತದ ಸಣ್ಣ ನಗರಗಳಲ್ಲಿ ಇದು ಶೂನ್ಯ . ಇನ್ನೂ ಕೆಟ್ಟದೆಂದರೆ, ಸೀಟ್ ಬೆಲ್ಟ್ ಇಲ್ಲದೆ ಏರ್‌ಬ್ಯಾಗ್ ನಿಯೋಜಿಸಿದರೆ, ಅದು ಹಾನಿಕರ ಅಥವಾ ಮಾರಣಾಂತಿಕವಾಗಬಹುದು ಎಂಬ ಅರಿವು ಭಾರತದಲ್ಲಿ ತುಂಬ ಕಡಿಮೆಯಾಗಿದೆ” ಎಂದು ಇಂಟರ್‌ನ್ಯಾಷನಲ್‌ ರೋಡ್ ಫೆಡರೇಶನ್ ಅಧ್ಯಕ್ಷ ಕೆ.ಕೆ.ಕಪಿಲಾ ಕಳವಳ ವ್ಯಕ್ಪಡಿಸಿದ್ದರು. ಹೀಗಾಗಿ ಜನರಿಗೆ ಸೀಟ್‌ ಬೆಲ್ಟ್‌ ಧರಿಸುವಂತೆ ಮನವರಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2020ರಲ್ಲಿ ಸೀಟ್ ಬೆಲ್ಟ್ ಧರಿಸದೇ 15,146 ಮಂದಿ ಮೃತಪಟ್ಟಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version