ಲಖನೌ: ಅಧಿಕಾರದ ಲಾಲಸೆಯು ರಾಜಕಾರಣಿಗಳನ್ನು ಹಲವು ಚಟುವಟಿಕೆಗಳಿಗೆ ದೂಡುತ್ತದೆ. ಎದುರಾಳಿಗಳ ವಿರುದ್ಧ ಟೀಕೆ, ವ್ಯಂಗ್ಯ, ಆರೋಪ, ಕೆಲವೊಮ್ಮೆ ಅವಾಚ್ಯ ಶಬ್ದಗಳನ್ನು ಬಳಸುವಂತೆ ಮಾಡುತ್ತದೆ. ಇನ್ನು, ರಾಜಕೀಯವು ಕುಟುಂಬಸ್ಥರ ಮಧ್ಯೆಯೇ ಒಡಕು ಮೂಡಿಸುತ್ತದೆ. ತಂದೆ-ಮಗ, ಅಣ್ಣ-ತಮ್ಮನೇ ಬೇರೆ ಬೇರೆ ಪಕ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಅಧಿಕಾರದ ಲಾಲಸೆಗೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ರಾಮ್‌ಪುರ ನಗರ ಪಾಲಿಕೆಯ ಅಧ್ಯಕ್ಷ ಸ್ಥಾನವು ಮಹಿಳೆಗೆ ಮೀಸಲಾದ ಕಾರಣ ಕಾಂಗ್ರೆಸ್ ನಾಯಕರೊಬ್ಬರು ಕೇವಲ 45 ಗಂಟೆಯಲ್ಲಿ ವಧುವನ್ನು ಹುಡುಕಿದ್ದು, ಮದುವೆಯಾಗಲು ತೀರ್ಮಾನಿಸಿದ್ದಾರೆ.
ಹೌದು, ಉತ್ತರ ಪ್ರದೇಶದ ರಾಮ್‌ಪುರ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರಾಗಿರುವ ಮಮುನ್ ಶಾ ಖಾನ್ ಅವರು ಇಂತಹ ಚಾಣಾಕ್ಷ ನಡೆ ಇಟ್ಟಿದ್ದಾರೆ. ರಾಮ್‌ಪುರ ನಗರ ಪಾಲಿಕೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಅಧ್ಯಕ್ಷ ಸ್ಥಾನವು ಮಹಿಳೆಗೆ ಮೀಸಲಾಗಿದೆ. ಹಾಗಾಗಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಲು ಇಚ್ಛಿಸದ 45 ವರ್ಷದ ಮಮುನ್ ಖಾನ್ ಅವರು ಮದುವೆಯಾಗಲು ತೀರ್ಮಾನಿಸಿದ್ದಾರೆ. ಹಾಗೆಯೇ, ಮೀಸಲಾತಿ ಘೋಷಿಸಿದ 45 ಗಂಟೆಯಲ್ಲಿಯೇ ವಧುವನ್ನು ಹುಡುಕಿದ್ದು, ಮದುವೆಯ ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ.
ರಾಮ್‌ಪುರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನವಾಗಿದೆ. ಹಾಗಾಗಿ, ಮಮುನ್ ಖಾನ್ ಅವರು ಏಪ್ರಿಲ್ 15ರಂದು ಮದುವೆಯಾಗಲಿದ್ದಾರೆ. ಇದಾದ ಬಳಿಕ ಅವರು ತಮ್ಮ ಪತ್ನಿಯನ್ನೇ ಚುನಾವಣೆಯಲ್ಲಿ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ. ಇದುವರೆಗೆ ಮಮುನ್ ಖಾನ್ ಅವರು ಮದುವೆಯಾಗಿರಲಿಲ್ಲ. ಮದುವೆಯಾಗುವ ಕುರಿತು ಚಿಂತನೆ ಕೂಡ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಆದರೆ, ಯಾವಾಗ ಮೀಸಲಾತಿ ಘೋಷಣೆಯಾಯಿತೋ, ಆಗ ಅವರು ಕೂಡಲೇ ವಧುವನ್ನು ಹುಡುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕ ವಯಸ್ಸಿನಲ್ಲಿಯೇ ಕಾಂಗ್ರೆಸ್ ಸೇರಿದ ಮಮುನ್ ಖಾನ್, ಕಳೆದ ಮೂರು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಇವರು ಇದುವರೆಗೆ ರಾಮ್‌ಪುರ ನಗರಸಭೆ ಅಧ್ಯಕ್ಷರಾಗಿದ್ದರು. ಆದರೆ, ರಾಜಕೀಯದಿಂದ, ಆಡಳಿತದಿಂದ ಸಂಪೂರ್ಣವಾಗಿ ದೂರ ಉಳಿಯಲು ಇಚ್ಛಿಸದ ಅವರು ಮದುವೆಯಾಗುವ ತೀರ್ಮಾನ ಮಾಡಿದ್ದಾರೆ. ಆ ಮೂಲಕ ತಮ್ಮ ಪತ್ನಿಯಾದರೂ ಅಧಿಕಾರದಲ್ಲಿರಲಿ ಎಂಬ ಆಸೆಯಿಂದಾಗಿ ಇಂತಹ ತೀರ್ಮಾನ ಕೈಗೊಂಡಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಪತ್ನಿಯ ಬದಲು ಇವರೇ ಪರೋಕ್ಷವಾಗಿ ಆಡಳಿತ ನಡೆಸಬಾರದು ಎಂಬುದು ಜನರ ಆಗ್ರಹವಾಗಿದೆ. ಒಟ್ಟಿನಲ್ಲಿ, ಅಧಿಕಾರವು ರಾಜಕಾರಣಿಗಳನ್ನು ಯಾವ ಯಾವ ತೀರ್ಮಾನ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂಬುದಕ್ಕೆ ಈ ಬೆಳವಣಿಗೆ ಉತ್ತಮ ನಿದರ್ಶನವಾಗಿದೆ.
ಇದನ್ನೂ ಓದಿ: ಮಣ್ಣಲ್ಲಿ ಹೂತು ಹಾಕುತ್ತೇನೆ; ಅತೀಕ್ ಅಹ್ಮದ್ ಪುತ್ರನ ಎನ್‌ಕೌಂಟರ್ ಬೆನ್ನಲ್ಲೇ ಯೋಗಿ ಆವಾಜ್ ವೈರಲ್