Site icon Vistara News

Security Breach in Lok Sabha: ಲೋಕಸಭೆ ದಾಳಿಯ ಹಿಂದಿತ್ತು 18 ತಿಂಗಳ ತಯಾರಿ! ಸಂಚು ರೂಪುಗೊಂಡಿದ್ದು ಹೇಗೆ?

security breach in lok sabha 1

ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ನಡೆದ ಅಭೂತಪೂರ್ವ ಭದ್ರತಾ ಲೋಪ (Security Breach in Lok Sabha) ಘಟನೆಯ ಹಿಂದೆ ಆರೋಪಿಗಳು ಕನಿಷ್ಠ 18 ತಿಂಗಳುಗಳ ನಿಖರವಾದ ಯೋಜನೆ ಹಾಗೂ ಸಂಚು ರೂಪಿಸಿದ್ದರು. ಹಲವಾರು ಮೀಟಿಂಗ್‌ ನಡೆಸಿದ್ದರು ಎಂದು ಗೊತ್ತಾಗಿದೆ.

ಆರು ರಾಜ್ಯಗಳ ಆರು ಆರೋಪಿಗಳು

ಆರೂ ಆರೋಪಿಗಳೂ ವಿಭಿನ್ನ ರಾಜ್ಯಗಳಿಂದ ಬಂದವರು. ಇವರು ಸಂಪರ್ಕಿಸಲು ʼಭಗತ್ ಸಿಂಗ್ ಫ್ಯಾನ್ಸ್‌ ಕ್ಲಬ್ʼ (Bhagat Singh fans club) ಎಂಬ ಸೋಶಿಯಲ್‌ ಮೀಡಿಯಾ ಪುಟವನ್ನು ಕಾಮನ್‌ ಲಿಂಕ್‌ ಆಗಿ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 2001ರಲ್ಲಿ ನಡೆದ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದಂದೇ ದಾಳಿ ಮಾಡುವುದಕ್ಕೆ ಆರೋಪಿಗಳು ಉದ್ದೇಶಿಸಿದ್ದರು.

ಅದರಂತೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದರು. ಇಬ್ಬರೂ ಹಳದಿ ಕಲರ್‌ ಗ್ಯಾಸ್‌ ಸಿಡಿಸಿದ್ದರು. ಇದೇ ವೇಳೆ ಸಂಸತ್ತಿನ ಹೊರಗೆ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಹಳದಿ ಮತ್ತು ಕೆಂಪು ಕಲರ್‌ ಗ್ಯಾಸ್‌ ಸಿಡಿಸಿದ್ದರು. ‘ಸರ್ವಾಧಿಕಾರಿ’ ವಿರುದ್ಧ ಘೋಷಣೆಗಳನ್ನು ಕೂಗಿದರು.

ಶರ್ಮಾ ಲಖನೌ ನಿವಾಸಿಯಾಗಿದ್ದರೆ, ಮನೋರಂಜನ್ ಮೈಸೂರಿನವನು. ನೀಲಂ ಹರಿಯಾಣದ ಜಿಂದ್ ಮತ್ತು ಶಿಂಧೆ ಮಹಾರಾಷ್ಟ್ರದವನು. ಇತರ ಇಬ್ಬರು ಆರೋಪಿಗಳಲ್ಲಿ ಒಬ್ಬ ಲಲಿತ್ ಝಾ, ಬಿಹಾರದವನು. ಆತ ಸಂಸತ್ತಿನ ಹೊರಗೆ ನೀಲಂ ಮತ್ತು ಶಿಂಧೆ ನಡೆಸಿದ ಪ್ರತಿಭಟನೆಯ ವೀಡಿಯೊ ಮಾಡಿಕೊಂಡು ಪರಾರಿಯಾಗಿದ್ದಾನೆ. ಮತ್ತೊಬ್ಬ ವಿಕ್ಕಿ ಶರ್ಮಾ, ಗುರಗಾಂವ್‌ನ ವ್ಯಕ್ತಿ. ದಾಳಿಯ ಮೊದಲು ಆರೋಪಿಗಳು ಇವನ ಮನೆಯಲ್ಲಿ ತಂಗಿದ್ದರು.

ಮೊದಲ ಮೀಟಿಂಗ್‌

ದೆಹಲಿ ಪೊಲೀಸರ ತನಿಖೆಯ ಪ್ರಕಾರ, ಆರೋಪಿಗಳ ಮೊದಲ ಸಭೆ ಸುಮಾರು 18 ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದಿತ್ತು. ಈ ಮೀಟಿಂಗ್‌ನಲ್ಲಿ ಆರೋಪಿಗಳು ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದ ಹಿಂಸಾಚಾರ ಸೇರಿದಂತೆ ಸಂಸತ್ತಿನ ಗಮನ ಸೆಳೆಯಬೇಕಾದ ಸಂಗತಿಗಳು ಹಾಗೂ ಅದನ್ನು ಹೈಲೈಟ್ ಮಾಡುವ ವಿವಿಧ ವಿಧಾನಗಳ ಕುರಿತು ಮಾತನಾಡಿಕೊಂಡಿದ್ದರು.

ಎರಡನೇ ಮೀಟಿಂಗ್‌

ಒಂಬತ್ತು ತಿಂಗಳ ಹಿಂದೆ, ಈ ವರ್ಷದ ಮಾರ್ಚ್‌ನಲ್ಲಿ ಮತ್ತೊಂದು ಮೀಟಿಂಗ್‌ ನಡೆಸಲಾಯಿತು. ವಿವರವಾದ ಯೋಜನೆ ಇಲ್ಲಿ ರೂಪುಗೊಂಡಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಗಢ ವಿಮಾನ ನಿಲ್ದಾಣದ ಬಳಿ ಈ ಸಭೆ ನಡೆದಿದ್ದು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಇವರು ಪಾಲ್ಗೊಂಡಿದ್ದರು.

ಇದರ ಸುಮಾರು ನಾಲ್ಕು ತಿಂಗಳ ನಂತರ, ಜುಲೈನಲ್ಲಿ, ಸಂಸತ್ತಿನ ಸಂಕೀರ್ಣವನ್ನು ಸುತ್ತಾಡಿ ಪರೀಕ್ಷಿಸಲು ವಿಕ್ಕಿ ಶರ್ಮಾ ಲಖನೌದಿಂದ ದಿಲ್ಲಿಗೆ ಬಂದಿದ್ದ. ಸೆಪ್ಟೆಂಬರ್‌ನಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಮೊದಲ ಅಧಿವೇಶನ ನಡೆಯುವುದಕ್ಕೂ ಮುನ್ನ ಶರ್ಮಾಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಆತ ಹೊರಗಿನಿಂದ ಕಟ್ಟಡವನ್ನು ಅವಲೋಕಿಸಿದ್ದ. ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಗಮನಿಸಿ ಗುಂಪಿನ ಉಳಿದವರಿಗೆ ವರದಿ ಮಾಡಿದ್ದ.

4 ಮಂದಿಗೆ ಸಿಗದ ಪಾಸ್‌

ಮನೋರಂಜನ್

ಸಂಸತ್ ದಾಳಿಯ ವಾರ್ಷಿಕೋತ್ಸವದ ದಿನ ದಾಳಿಗೆ ನಿರ್ಧರಿಸಿದ ನಂತರ ಶರ್ಮಾ, ಮನೋರಂಜನ್, ನೀಲಂ ಮತ್ತು ಶಿಂಧೆ ಡಿಸೆಂಬರ್ 10ರ ಭಾನುವಾರ ದೆಹಲಿಯನ್ನು ತಲುಪಿದರು ಮತ್ತು ಗುರ್ಗಾಂವ್‌ನಲ್ಲಿರುವ ವಿಕ್ಕಿ ಶರ್ಮಾ ಮನೆಗೆ ತೆರಳಿದರು. ಅಲ್ಲಿ ಬುಧವಾರದವರೆಗೆ ಇದ್ದರು. ಬುಧವಾರ ಆರೋಪಿಗಳು ಇಂಡಿಯಾ ಗೇಟ್‌ನಲ್ಲಿ ಜಮಾಯಿಸಿದರು. ಇಲ್ಲಿಯೇ ಶಿಂಧೆ ಉಳಿದ ಆರೋಪಿಗಳಿಗೆ ಕಲರ್‌ ಗ್ಯಾಸ್‌ ಡಬ್ಬಿಗಳನ್ನು ವಿತರಿಸಿದ. ಆತ ಮಹಾರಾಷ್ಟ್ರದ ತನ್ನ ಊರಿನಿಂದ ಡಬ್ಬಿಗಳನ್ನು ಖರೀದಿಸಿ ದೆಹಲಿಗೆ ತಂದಿದ್ದ.

ಆರಂಭಿಕ ಯೋಜನೆಯ ಪ್ರಕಾರ ಆರು ಮಂದಿಯೂ ಸಂಸತ್ತಿನ ಒಳಗೆ ಹೋಗಬೇಕಾಗಿತ್ತು. ಆದರೆ ಶರ್ಮಾ ಮತ್ತು ಮನೋರಂಜನ್‌ಗೆ ಮಾತ್ರ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗಿತ್ತು. ಹೀಗಾಗಿ ಆರು ಮಂದಿ ಸದನದೊಳಗೆ ಕೋಲಾಹಲ ಎಬ್ಬಿಸುವ ಪ್ಲಾನ್‌ ನಡೆಯಲಿಲ್ಲ.

ಸಾಗರ್‌ ಶರ್ಮಾ

ಭದ್ರತಾ ಕಾಳಜಿ

ಶರ್ಮಾ ಮತ್ತು ಮನೋರಂಜನ್ ಮಧ್ಯಾಹ್ನದ ಹೊತ್ತಿಗೆ ಸಂಸತ್ತಿನ ಸಂಕೀರ್ಣವನ್ನು ಪ್ರವೇಶಿಸಿದರು ಮತ್ತು ಸುಮಾರು ಒಂದು ಗಂಟೆಯ ಹೊತ್ತಿಗೆ ಗ್ಯಾಲರಿಯಿಂದ ಸದನದ ಒಳಗೆ ಜಿಗಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಬ್ಬರನ್ನೂ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಹಿಡಿದು ಥಳಿಸಿದರು. ಹೊರಗೆ ಗ್ಯಾಸ್‌ ಸಿಡಿಸಿದ ನೀಲಂ ಮತ್ತು ಶಿಂಧೆಯನ್ನು ಪೊಲೀಸರು ಬಂಧಿಸಿದರು. ಇವರಿಗೆ ಆಶ್ರಯ ನೀಡಿದ್ದ ವಿಕ್ಕಿ ಶರ್ಮಾ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದೆ. ಲಲಿತ್ ಝಾ ಇವರ ವಿಡಿಯೋ ಮಾಡಿ ಓಡಿಹೋಗಿದ್ದು, ಆತನನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.‌

ಇದನ್ನೂ ಓದಿ: Security Breach in Lok Sabha: ಲೋಕಸಭೆ ಭದ್ರತೆ ಲೋಪ ಆರೋಪಿಗಳ ಮೇಲೆ ಭಯೋತ್ಪಾದನೆ ತಡೆ ಕಾನೂನು

2001ರ ದಾಳಿಯ ಕರಾಳ ನೆನಪಿನ ದಿನದ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿಯಾದ ಭದ್ರತೆಯನ್ನು ಸಂಸತ್ತಿಗೆ ಹಾಕಲಾಗಿತ್ತು. ಆದರೂ ಅವರು ಕಲರ್‌ ಗ್ಯಾಸ್‌ ಒಳಗೆ ತರಲು ಸಾಧ್ಯವಾದ ಬಗ್ಗೆ ಹಲವಾರು ಸಂಸದರು ಗಂಭೀರ ಲೋಪದ ಪ್ರಶ್ನೆ ಎತ್ತಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಮುಖಂಡ ಗುರುಪತ್ವಂತ್ ಸಿಂಗ್ ಪನ್ನುನ್ ಕೂಡ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸದ್ಯ ಇವರಿಗೂ ಅವನಿಗೂ ಲಿಂಕ್‌ ಇರುವಂತೆ ಕಂಡುಬಂದಿಲ್ಲವಾದರೂ, ತನಿಖೆ ನಡೆದಿದೆ.

ಬಂಧಿತರಾಗಿರುವ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, ಭಾರತೀಯ ದಂಡ ಸಂಹಿತೆಯ ಅಪರಾಧ ಸಂಚು ಮತ್ತು ದ್ವೇಷವನ್ನು ಉತ್ತೇಜಿಸುವ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ. ಅವರೆಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Security Breach in Lok Sabha: ದಾರಿ ತಪ್ಪಿದ ಕ್ರಾಂತಿಕಾರಿಗಳು? ಲೋಕಸಭೆಗೆ ನುಗ್ಗಿದವರ ಸೋಶಿಯಲ್‌ ಮೀಡಿಯಾದಲ್ಲಿ ಏನಿದೆ?

Exit mobile version