ಹೊಸದಿಲ್ಲಿ: ನಿನ್ನೆ ಸಂಸತ್ತಿನಲ್ಲಿ ನಡೆದ ಭಾರೀ ಭದ್ರತಾ ಲೋಪಕ್ಕೆ (Security Breach in Lok Sabha) ಸಂಬಂಧಿಸಿದಂತೆ ಬಂಧಿತರಾದ ಆರು ಜನರ ಮೇಲೆ ಭಯೋತ್ಪಾದನೆ ತಡೆ ಕಾನೂನು (Anti-Terror Law), ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ.
ಭದ್ರತೆ ಲೋಪಕ್ಕೆ ಸಂಬಂಧಿಸಿ ಇದುವರೆಗೆ ನಡೆದಿರುವ ಬೆಳವಣಿಗೆಗಳು ಇಲ್ಲಿವೆ:
- ಆರು ಆರೋಪಿಗಳಲ್ಲಿ ಲೋಕಸಭೆಯ ಒಳಗೆ ಹಳದಿ ಹೊಗೆ ಡಬ್ಬಿಗಳನ್ನು ಬಳಸಿದ ಸಾಗರ್ ಶರ್ಮಾ, ಡಿ.ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಕೆಂಪು ಮತ್ತು ಹಳದಿ ಡಬ್ಬಿಗಳನ್ನು ಸಿಡಿಸಿದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಸೇರಿದ್ದಾರೆ.
- ಗುರ್ಗಾಂವ್ ಮೂಲದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಇನ್ನಿಬ್ಬರು ಬಂಧಿತ ಆರೋಪಿಗಳು. ಮತ್ತಿಬ್ಬರು ಆರೋಪಿಗಳು ಹೊಗೆ ಡಬ್ಬಿಗಳನ್ನು ಸಿಡಿಸುತ್ತಿರುವ ವಿಡಿಯೋಗಳನ್ನು ಚಿತ್ರೀಕರಿಸಿ ತಮ್ಮ ಸೆಲ್ಫೋನ್ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ವಿಕ್ಕಿ ಶರ್ಮಾ ಇತರ ಆರೋಪಿಗಳಿಗೆ ಆಶ್ರಯ ನೀಡಿದ್ದಾನೆ.
- ದೆಹಲಿ ಪೊಲೀಸರ ಈವರೆಗಿನ ತನಿಖೆಯಲ್ಲಿ ಎಲ್ಲಾ ಆರೋಪಿಗಳು ಭಗತ್ ಸಿಂಗ್ ಫ್ಯಾನ್ ಕ್ಲಬ್ ಎಂಬ ಸಾಮಾಜಿಕ ಮಾಧ್ಯಮ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಕಂಡುಹಿಡಿಯಲಾಗಿದೆ.
- ಆರೋಪಿಗಳು ಒಂದೂವರೆ ವರ್ಷಗಳ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದರು. ಆರೋಪಿಗಳು ತಮ್ಮ ನಡೆಯನ್ನು ಯೋಜಿಸಲು ಒಂಬತ್ತು ತಿಂಗಳ ಹಿಂದೆ ಮತ್ತೊಂದು ಮೀಟಿಂಗ್ ನಡೆಸಿದ್ದರು.
- ಸಾಗರ್ ಶರ್ಮಾ, ಈ ಜುಲೈನಲ್ಲಿ ಲಖನೌದಿಂದ ದೆಹಲಿಗೆ ಬಂದಿದ್ದ. ಆ ಭೇಟಿಯ ಸಮಯದಲ್ಲಿ ಆತ ಸಂಸತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ ಭದ್ರತಾ ತಪಾಸಣೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಮರಳಿ ಹೋಗಿದ್ದಾನೆ. ನಿನ್ನೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಆರೋಪಿಗಳು ಇದೇ ಭಾನುವಾರ ದೆಹಲಿ ತಲುಪಿದ್ದರು. ಗುರುಗ್ರಾಮ್ನಲ್ಲಿರುವ ವಿಕ್ಕಿಯ ಮನೆಯಲ್ಲಿ ತಂಗಿದ್ದರು.
- ಅಮೋಲ್ ಶಿಂಧೆ ಮಹಾರಾಷ್ಟ್ರದ ತನ್ನ ಸ್ವಂತ ಊರಿನಿಂದ ಹೊಗೆ ಡಬ್ಬಿಗಳನ್ನು ತಂದಿದ್ದಾನೆ. ಇಂಡಿಯಾ ಗೇಟ್ನಲ್ಲಿ ಇವರೆಲ್ಲ ಸೇರಿ ಹೊಗೆ ಡಬ್ಬಿಗಳನ್ನು ಹಂಚಿಕೊಂಡಿದ್ದರು.
- ಆರು ಮಂದಿಯೂ ಸಂಸತ್ತಿನ ಒಳಗೆ ಹೋಗಲು ಬಯಸಿದ್ದರು. ಆದರೆ ಸಾಗರ್ ಶರ್ಮಾ ಮತ್ತು ಮನೋರಂಜನ್ ಮಾತ್ರ ಪಾಸ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದದರು. ನಿನ್ನೆ ಮಧ್ಯಾಹ್ನ ಇವರಿಬ್ಬರು ಸಂಸತ್ ಪ್ರವೇಶಿಸಿದ್ದರು.
- ನಿನ್ನೆ ಲೋಕಸಭೆಯ ಶೂನ್ಯ ವೇಳೆಯಲ್ಲಿ ಸಾಗರ್ ಶರ್ಮಾ ಸಂದರ್ಶಕರ ಗ್ಯಾಲರಿಯಿಂದ ಚೇಂಬರ್ಗೆ ಜಿಗಿದ. ಆತ ಹಳದಿ ಹೊಗೆ ಡಬ್ಬಿಯನ್ನು ತೆರೆದು ಸ್ಪೀಕರ್ ಕುರ್ಚಿಯನ್ನು ತಲುಪುವ ಪ್ರಯತ್ನದಲ್ಲಿ ಡೆಸ್ಕ್ನಿಂದ ಡೆಸ್ಕ್ಗೆ ಜಿಗಿದ.
- ಸಂಸದರು ಆತನನ್ನು ಹಿಡಿದು ಥಳಿಸುತ್ತಿದ್ದಂತೆ ಮನೋರಂಜನ್ ಕೂಡ ಹೊಗೆ ಡಬ್ಬಿ ತೆರೆದ. ಅವನನ್ನು ಕೂಡ ಹಿಡಿಯಲಾಯಿತು. ಲೋಕಸಭೆಯೊಳಗೆ ಈ ಘಟನೆ ನಡೆಯುವ ಕೆಲವೇ ಕ್ಷಣಗಳ ಮುನ್ನ ನೀಲಂ ಮತ್ತು ಅಮೋಲ್ ಹೊರಗೆ ಡಬ್ಬಿಗಳನ್ನು ಸಿಡಿಸಿದರು. “ಸರ್ವಾಧಿಕಾರ”ದ ವಿರುದ್ಧ ಘೋಷಣೆಗಳನ್ನು ಕೂಗಿದರು.
- ದೆಹಲಿ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಆರು ಆರೋಪಿಗಳ ವಿಚಾರಣೆ ನಡೆಸುತ್ತಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Security Breach in Lok Sabha: ಲೋಕಸಭೆಯಲ್ಲಿ ಭದ್ರತೆ ಲೋಪ ಆಗಿದ್ದು ಹೇಗೆ?