ಹೊಸದಿಲ್ಲಿ: ಸಂಸತ್ತಿನ ಭದ್ರತಾ ಉಲ್ಲಂಘನೆಯ (Security Breach In Lok Sabha) ಮಾಸ್ಟರ್ ಮೈಂಡ್ ಎಂದು ಆರೋಪಿಸಲಾದ ಲಲಿತ್ ಝಾ, ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರೊಂದಿಗೆ ಇರುವ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
ಈ ಫೋಟೋವನ್ನು ಮುಂದಿಟ್ಟಿರುವ ಬಿಜೆಪಿ, ಭದ್ರತೆ ಉಲ್ಲಂಘನೆ ಪ್ರಕರಣದಲ್ಲಿ ತೃಣಮೂಲ ಮತ್ತು ಇಡೀ ʼಇಂಡಿಯಾ ಬ್ಲಾಕ್ʼ ಭಾಗಿಯಾಗಿದೆ ಎಂದು ಆರೋಪಿಸಿದೆ. ಬಿಜೆಪಿಯ ಮೈಸೂರು ಸಂಸದ ಪ್ರತಾಪಸಿಂಹ ಇಬ್ಬರು ಅತಿಕ್ರಮಣದಾರರಿಗೆ ಪಾಸ್ ನೀಡಿದ್ದಾರೆ ಎಂಬುದನ್ನು ಎತ್ತಿ ಗದ್ದಲ ಎಬ್ಬಿಸಿರುವ ತೃಣಮೂಲ ಪಕ್ಷವನ್ನು ಹಣಿಯಲು ಬಿಜೆಪಿ ಈ ಫೋಟೋದ ಅಸ್ತ್ರವನ್ನು ಹಿಡಿದುಕೊಂಡಿದೆ.
ಸಂಸತ್ತಿನ ಸಂದರ್ಶಕರ ಗ್ಯಾಲರಿಗೆ ಹೊಗೆ ಬಾಂಬ್‌ಗಳನ್ನು ಕದ್ದೊಯ್ದು ನಂತರ ಸದನದೊಳಗೆ ಸಿಡಿಸಿದ ಸಾಗರ್ ಶರ್ಮಾ ಮತ್ತು ಮನೋರಂಜನ್‌ಗೆ ತಮ್ಮ ಕಚೇರಿಯ ಮೂಲಕ ಪಾಸ್ ಕೊಡಿಸಿದ್ದ ಪ್ರತಾಪಸಿಂಹ ಮೊನ್ನೆಯಿಂದ ಸುದ್ದಿಯಲ್ಲಿದ್ದಾರೆ. ಆಪಾದಿತ ಮಾಸ್ಟರ್ ಮೈಂಡ್, ಬಂಗಾಳದ ಶಿಕ್ಷಕ ಲಲಿತ್ ಝಾ ನಿನ್ನೆ ಪೊಲೀಸರಿಗೆ ಶರಣಾಗಿದ್ದಾನೆ.
Lalit Jha, the mastermind of the attack on our Temple of Democracy, had been in close association with TMC's Tapas Roy for a long time… Isn't this proof enough for investigation into the connivance of the leader? @AITCofficial @TapasRoyAITC @abhishekaitc #shameontmc pic.twitter.com/1PIVnnbGx9
— Dr. Sukanta Majumdar (@DrSukantaBJP) December 14, 2023
ಬಂಗಾಳದ ಬಿಜೆಪಿ ಮುಖ್ಯಸ್ಥ ಡಾ.ಸುಕಾಂತೋ ಮಜುಂದಾರ್ ಅವರು, ಹಿರಿಯ ತೃಣಮೂಲ ನಾಯಕ ತಪಸ್ ರಾಯ್ ಅವರೊಂದಿಗೆ ಲಲಿತ್ ಝಾ ಇರುವ ಫೋಟೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಮ್ಮ ಸಂಸತ್ತಿನ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ ಟಿಎಂಸಿಯ ತಪಸ್ ರಾಯ್ ಅವರೊಂದಿಗೆ ಬಹಳ ಹಿಂದಿನಿಂದಲೂ ನಿಕಟ ಒಡನಾಟ ಹೊಂದಿದ್ದರು. ನಾಯಕನ ಕುತಂತ್ರದ ತನಿಖೆಗೆ ಈ ಪುರಾವೆ ಸಾಕಾಗುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ತಕ್ಷಣ ಹೆಕ್ಕಿಕೊಂಡಿದ್ದಾರೆ. “ಇಡೀ ಸಂಚಿನಲ್ಲಿ ಭಾಗಿಯಾಗಿರುವ ಆರೋಪಿಗಳು ಕಾಂಗ್ರೆಸ್, ಸಿಪಿಐ (ಮಾವೋವಾದಿ) ಮತ್ತು ಈಗ ಟಿಎಂಸಿಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಕಂಡುಬಂದಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Security Breach in Lok Sabha: ಸಂಸತ್ತಿಗೆ ಭೇಟಿ ನೀಡಿ ಭದ್ರತಾ ಲೋಪ ಪತ್ತೆ ಹಚ್ಚಿದ್ದ ಮನೋರಂಜನ್