Site icon Vistara News

Security Breach In Lok Sabha: ಜೀವಂತ ದಹನ, ರಾಜಕೀಯ ಪಕ್ಷ ಸ್ಥಾಪನೆ; ಆರೋಪಿಗಳ ಯೋಜನೆ!

sagar sharma parliament attack

ಹೊಸದಿಲ್ಲಿ: ಹೊಸದಿಲ್ಲಿಯ ಸಂಸತ್‌ ಭವನದಲ್ಲಿ ಲೋಕಸಭೆಯ ಭದ್ರತೆ ಉಲ್ಲಂಘಿಸಿ (Security Breach In Lok Sabha) ಒಳಗೆ ಪ್ರವೇಶಿಸಿ ಹಳದಿ ಹೊಗೆ ಎರಚಿದ ಆರೋಪಿಗಳು, ಇದಕ್ಕೂ ಮುನ್ನ ಸಂಸತ್ತಿನ ಹೊರಗೆ ತಮ್ಮನ್ನು ಸುಟ್ಟುಕೊಳ್ಳಲು (Set ablaze) ಯೋಜಿಸಿದ್ದರು ಹಾಗೂ ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಲು ಬಯಸಿದ್ದರು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ.

ಈ ಆರು ಮಂದಿ ಆರೋಪಿಗಳು ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿ ಮಾಧ್ಯಮದ ಹಾಗೂ ಆ ಮೂಲಕ ದೇಶದ ಗಮನವನ್ನು ಸೆಳೆಯಲು ಬಯಸಿದ್ದರು. ಬಳಿಕ ಒಂದು ರಾಜಕೀಯ ಪಕ್ಷವನ್ನು ರಚಿಸಲು ಬಯಸಿದ್ದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅದೊಂದೇ ಮಾರ್ಗವೆಂದು ಭಾವಿಸಿದ್ದರು ಎಂದು ತನಿಖಾಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಸಂಸದರ ತಾಣಕ್ಕೆ ಜಿಗಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನಾದ ಪ್ರಮುಖ ಆರೋಪಿ ಸಾಗರ್ ಶರ್ಮಾ ತನ್ನ ವಿಚಾರಣೆಯ ಸಮಯದಲ್ಲಿ, ತಮ್ಮನ್ನು ಸಂಸತ್ತಿನ ಹೊರಗೆ ಸುಟ್ಟುಕೊಳ್ಳಲು ಯೋಜನೆ ಹಾಕಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಅದಕ್ಕಾಗಿ ಬೆಂಕಿ ಸುಡದಂತೆ ಮೈಗೆ ಲೇಪಿಸಿಕೊಳ್ಳುವ ಜೆಲ್ ತರಹದ ವಸ್ತುವನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಯೋಚಿಸಿದ್ದರು. ಅದಕ್ಕಾಗಿ ಹಣವನ್ನೂ ಸಂಗ್ರಹಿಸಿದ್ದರು. ಆದರೆ ಅದನ್ನು ಪಡೆಯಲು ಸಾಧ್ಯವಾಗಲಿಲ್ಲ. ನಂತರ ಈ ಯೋಜನೆಯನ್ನು ಕೈಬಿಟ್ಟರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಒಂದು ರಾಜಕೀಯ ಪಕ್ಷವನ್ನು ರಚಿಸುವುದಕ್ಕಾಗಿ ಮಾಧ್ಯಮದ ಗಮನವನ್ನು ಸೆಳೆಯುವಂತಹ ದೊಡ್ಡ ಕೃತ್ಯವನ್ನು ಮಾಡಬೇಕು ಎಂಬುದು ಅವರ ಯೋಚನೆಯಾಗಿತ್ತು. ತಮ್ಮ ಸಿದ್ಧಾಂತಗಳು ಬೇರೆ ಯಾರೊಂದಿಗೂ ಹೊಂದಿಕೆಯಾಗದ ಕಾರಣ ಬೇರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಹೋಗಲು ಬಯಸಿರಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಇವರು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದರೂ ಪರಸ್ಪರ ಸಂಪರ್ಕ ಹೊಂದಿದಿದ್ದರು. ಬುಧವಾರ ಸಂಸತ್ತಿನಲ್ಲಿ ಇವರು ಏನು ಮಾಡಲಿದ್ದಾರೆ ಎಂಬುದು ಇವರ ಕುಟುಂಬ ಸದಸ್ಯರಿಗೆ ತಿಳಿದಿರಲಿಲ್ಲ. ಇವರೆಲ್ಲರೂ ನಿರುದ್ಯೋಗಿಗಳು.

ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ, ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗ ಸಮಸ್ಯೆಯ ಬಗ್ಗೆ ಇವರು ತೀವ್ರ ಆಕ್ರೋಶಗೊಂಡಿದ್ದರು ಎಂದು ತಿಳಿಸಿದ್ದಾರೆ. ನೀಲಂ ತಾನೂ ಎಂಎ, ಬಿಇಡಿ, ಎಂಇಡಿ, ಎಂಫಿಲ್ ಮತ್ತು ನೆಟ್ ತೇರ್ಗಡೆಯಾದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾಳೆ. ಅಮೋಲ್ ಮಹಾರಾಷ್ಟ್ರದ ಲಾತೂರ್ ನಿವಾಸಿ. ಮನೋರಂಜನ್ ಡಿ. ಎಂಜಿನಿಯರಿಂಗ್‌ ಓದಿದ್ದು, ಮೈಸೂರು ನಿವಾಸಿಯಾಗಿದ್ದಾನೆ. ಇವರೆಲ್ಲರೂ ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಪರಿಚಿತರು.

ಇದನ್ನೂ ಓದಿ: Security Breach in Lok Sabha‌: ಲೋಕಸಭೆ ಭದ್ರತಾ ವೈಫಲ್ಯ; ಮನೋರಂಜನ್‌ ರೂಂ ಸೀಜ್‌!

Exit mobile version