ಹೊಸದಿಲ್ಲಿ: ನಿನ್ನೆ (ಬುಧವಾರ) ಭದ್ರತೆ ಲೋಪ ಎಸಗಿ ಲೋಕಸಭೆಗೆ ನುಗ್ಗಿ (Security Breach in Lok Sabha) ಕಲರ್ ಗ್ಯಾಸ್ ಸಿಡಿಸಿದ ಘಟನೆ ದೇಶಾದ್ಯಂತ ಕೋಲಾಹಲ ಎಬ್ಬಿಸಿದೆ. ಅಪರಾಧಿಗಳಾದ ಸಾಗರ್ ಶರ್ಮ, ನೀಲಂ ಆಜಾದ್, ಮನೋರಂಜನ್ ಡಿ., ಅಮೋಲ್ ಶಿಂಧೆ, ವಿಕ್ಕಿ ಶರ್ಮ ಮತ್ತು ಲಲಿತ್ ಝಾ ನಡುವೆ ಮೊದಲೇ ಪರಿಚಯ ಇತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅವರ ಹಿನ್ನಲೆ, ಉದ್ಯೋಗದ ಮಾಹಿತಿ ಹೊರ ಬಿದ್ದಿದೆ.
ಅವರೆಲ್ಲರೂ ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಸೋಷಿಯಲ್ ಮೀಡಿಯಾ ಗುಂಪಿನ ಸದಸ್ಯರು ಎನ್ನಲಾಗಿದೆ. ಈ ಪೈಕಿ ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಪದೇ ಪದೇ ಪ್ರಯತ್ನಿಸಿದರೂ ಬಯಸಿದ ಉದ್ಯೋಗ ಪಡೆಯಲು ವಿಫಲರಾಗಿ ಹತಾಶರಾಗಿದ್ದರು. ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದಲ್ಲಿನ ಹಿಂಸಾಚಾರದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಲು ಮತ್ತು ಅವುಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕೃತ್ಯಕ್ಕೆ ಮುಂದಾಗಿದ್ದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ರಿಕ್ಷಾ ಚಾಲಕ
ಲೋಕಸಭಾ ಕೊಠಡಿಯೊಳಗೆ ನುಗ್ಗಿದವರ ಪೈಕಿ ಒಬ್ಬರಾದ 27 ವರ್ಷದ ಸಾಗರ್ ಶರ್ಮ ಹೊಸದಿಲ್ಲಿಯಲ್ಲಿ ಜನಿಸಿ ಲಕ್ನೋದಲ್ಲಿ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ವರದಿಗಳ ಪ್ರಕಾರ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಕ್ರಾಂತಿಕಾರಿ ಚೆ ಗುವಾರ ಅವರನ್ನು ಉಲ್ಲೇಖಿಸಿದ್ದಾರೆ. ಶರ್ಮ ತಮ್ಮ ಶೂನಲ್ಲಿ ಅಡಗಿಸಿಟ್ಟಿದ್ದ ಹಳದಿ ಹೊಗೆಯ ಡಬ್ಬಿಯನ್ನು ಹೊರತೆಗೆದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಭಾನುವಾರ ಹೊಸದಿಲ್ಲಿಗೆ ತಲುಪುವ ಮೊದಲು ಶರ್ಮ ಅವರು ಪ್ರತಿಭಟನೆಯಲ್ಲಿ ಭಾಗವಹಿಸಲು ರಾಜಧಾನಿಗೆ ಹೋಗುತ್ತಿರುವುದಾಗಿ ಮನೆಯಲ್ಲಿ ತಿಳಿಸಿದ್ದರು.
ಎಂಜಿನಿಯರ್
ಮೈಸೂರಿನ ಮನೋರಂಜನ್ ಡಿ. ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. 34 ವರ್ಷದ ಅವರು ಸಂದರ್ಶಕರ ಗ್ಯಾಲರಿಗೆ ತೆರಳಲು ಪಾಸ್ ಪಡೆದಿದ್ದರು. ಸಾಗರ್ ಶರ್ಮ ಅವರ ನಂತರ ಲೋಕಸಭೆಯ ಕೊಠಡಿಗೆ ಜಿಗಿದಿದ್ದರು. ಮನೋರಂಜನ್ ಪದವಿ ಮುಗಿಸಿದ ನಂತರ ಉದ್ಯೋಗ ನಿರ್ವಹಿಸುತ್ತಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಮನೋರಂಜನ್ ಅವರ ತಂದೆ ದೇವರಾಜೇಗೌಡ ಮಗನ ಕೃತ್ಯವನ್ನು ಖಂಡಿಸಿ, ʼʼಆತ ತಪ್ಪು ಮಾಡಿದ್ದರೆ ಶಿಕ್ಷೆ ವಿಧಿಸಬೇಕುʼʼ ಎಂದು ಪ್ರತಿಕ್ರಿಯಿಸಿದ್ದಾರೆ. ʼʼನನ್ನ ಮಗನಾಗಿದ್ದರೂ ಸಂಸತ್‌ನಲ್ಲಿ ಈ ರೀತಿ ವರ್ತಿಸುವುದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ.
ಶಿಕ್ಷಕಿ
ಹರಿಯಾಣದ ಹಿಸಾರ್ ಮೂಲದ ನೀಲಂ ಆಜಾದ್ ಎಂ.ಫಿಲ್ ಪದವಿ ಪಡೆದಿದ್ದು, ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು. ಸಂಸತ್ತಿನ ಹೊರಗೆ “ಸರ್ವಾಧಿಕಾರ” ವನ್ನು ಖಂಡಿಸುವ ಘೋಷಣೆಗಳನ್ನು ಅವರು ಕೂಗಿದ್ದರು. ಇವರ ಜತೆ 37 ವರ್ಷದ ಮುಷರಫ್ ಕೂಡ ಇದ್ದರು. 2021ರ ಮೂರು ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಯಲ್ಲಿ ನೀಲಂ ಭಾಗವಹಿಸಿದ್ದರು. ಅಲ್ಲದೆ ಈ ವರ್ಷದ ಆರಂಭದಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯ ಪಾಲ್ಗೊಂಡಿದ್ದರು ಎಂದು ವರದಿಗಳು ತಿಳಿಸಿವೆ.
“ಅರ್ಹತೆ ಇದ್ದರೂ ಅವಳಿಗೆ ಉದ್ಯೋಗ ಸಿಗಲಿಲ್ಲ. ಈ ಕಾರಣದಿಂದಾಗಿ ಅವಳು ತುಂಬಾ ಒತ್ತಡಕ್ಕೊಳಗಾಗಿದ್ದಳು. ತುಂಬಾ ಅಧ್ಯಯನ ಮಾಡಿದರೂ ಸಂಪಾದಿಸಲು ಸಾಧ್ಯವಾಗದ ಕಾರಣ ಅವಳು ಚಿಂತೆಯಲ್ಲಿದ್ದಳುʼʼ ಎಂದು ನೀಲಂ ಅವರ ತಾಯಿ ಸರಸ್ವತಿ ಸುದ್ದಿಗಾರರಿಗೆ ತಿಳಿಸಿದ್ದಾರೆ. “ಅವಳು ಬಿಎ, ಎಂಎ ಮತ್ತು ಎಂಫಿಲ್ ಪೂರ್ಣಗೊಳಿಸಿದ್ದಳು ಮತ್ತು ನೆಟ್ ತೇರ್ಗಡೆಯಾಗಿದ್ದಳು. ಆದರೆ ಇನ್ನೂ ನಿರುದ್ಯೋಗಿಯಾಗಿದ್ದಳು” ಎಂದು ಅವರು ಹೇಳಿದ್ದಾರೆ.
ಸೇನಾ ಆಕಾಂಕ್ಷಿ
ಪರಿಶಿಷ್ಟ ಜಾತಿಗೆ ಸೇರಿದ ಅಮೋಲ್ ಶಿಂಧೆ ಅವರು ನೀಲಂ ಆಜಾದ್ ಅವರೊಂದಿಗೆ ಸಂಸತ್ತಿನ ಹೊರಗೆ ಘೋಷಣೆ ಕೂಗಿದ್ದರು. ಮಹಾರಾಷ್ಟ್ರದ ಲಾತೂರ್ನ ಹಳ್ಳಿಯೊಂದರ 25 ವರ್ಷದ ಈ ಯುವಕ ಕೃಷಿ ಕಾರ್ಮಿಕನ ಮಗನಾಗಿದ್ದು, ಪದೇ ಪದೇ ಪ್ರಯತ್ನಿಸಿದರೂ ಪೊಲೀಸ್ ಮತ್ತು ಸೇನಾ ನೇಮಕಾತಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ವಿಫಲವಾಗಿದ್ದರು ಎನ್ನಲಾಗಿದೆ. “ಡಿಸೆಂಬರ್ 9ರಂದು ಅಮೋಲ್ ಪೊಲೀಸ್ ನೇಮಕಾತಿ ಡ್ರೈವ್‌ಗಾಗಿ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದನು. ಅವನು ಸಂಸತ್ತಿನಲ್ಲಿ ಏನು ಮಾಡಿದ್ದಾರೆಂದು ನಮಗೆ ತಿಳಿದಿಲ್ಲ. ಪೊಲೀಸರು ಸಹ ನಮ್ಮೊಂದಿಗೆ ಮಾತನಾಡಿದ್ದಾರೆ. ನಮಗೆ ಏನೂ ತಿಳಿದಿಲ್ಲ ಎಂದು ನಾವು ಅವರಿಗೆ ಹೇಳಿದ್ದೇವೆʼʼ ಎಂದು ಅಮೋಲ್ ಅವರ ತಂದೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Security Breach in Lok Sabha: ದಾರಿ ತಪ್ಪಿದ ಕ್ರಾಂತಿಕಾರಿಗಳು? ಲೋಕಸಭೆಗೆ ನುಗ್ಗಿದವರ ಸೋಶಿಯಲ್ ಮೀಡಿಯಾದಲ್ಲಿ ಏನಿದೆ?
ಬುಧವಾರ ಸಂಸತ್ ದಾಳಿಗೆ ಮುನ್ನ ಅಪರಾಧಿಗಳಿಗೆ ಗುರ್‌ಗಾಂವ್‌ನ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವಿಕ್ಕಿ ಶರ್ಮಾ ಮತ್ತು ಅವರ ಪತ್ನಿ ರೇಖಾ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಕ್ಕಿ ವೃತ್ತಿಯಲ್ಲಿ ಚಾಲಕ. ಪರಾರಿಯಾಗಿರುವ ಏಕೈಕ ಆರೋಪಿ ಬಿಹಾರದ ಲಲಿತ್ ಝಾ ಎಂದು ಮೂಲಗಳು ತಿಳಿಸಿವೆ.