ಹೊಸದಿಲ್ಲಿ: ಲೋಕಸಭೆಯಲ್ಲಿ ಗ್ಯಾಲರಿಯಿಂದ ಜಿಗಿದು ಸಂಸದರ ಮಧ್ಯೆ ಓಡಾಡಿ ಕಲರ್ ಬಾಂಬ್ ಸಿಡಿಸಿದ ದುಷ್ಕರ್ಮಿಗಳನ್ನು (Security Breach in Lok Sabha) ಬಂಧಿಸಲಾಗಿದ್ದು, ಇವರಿಬ್ಬರೂ ಮೈಸೂರು ಸಂಸದ ಪ್ರತಾಪ್ ಸಿಂಹ (BJP MP Pratap Simha) ಅವರ ಕಚೇರಿಯಿಂದ ಪಾಸ್ ಪಡೆದಿದ್ದರು ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳು ತೆಲಂಗಾಣ ಮೂಲದವರು ಎಂದು ತಿಳಿದುಬಂದಿದೆ. ಒಬ್ಬಾತನ ಹೆಸರು ಸಾಗರ್ ಎನ್ನಲಾಗಿದೆ. ಸುಳ್ಳು ಹೇಳಿ ಮೈಸೂರ ಸಂಸದರ ಕಚೇರಿಯಿಂದ ಪಾಸ್ಗಳನ್ನು ಪಡೆದಿದ್ದರು. “ತುಂಬಾ ಒತ್ತಾಯಿಸಿ ನಮ್ಮ ಕಚೇರಿಯಿಂದ ಪಾಸ್ ಪಡೆದಿದ್ದರು” ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇತಿಹಾಸದಲ್ಲೇ ಭಾರಿ ಭದ್ರತಾ ಲೋಪ ಎನಿಸಿಕೊಂಡ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಕ್ಯಾನಿಸ್ಟರ್ಗಳನ್ನು ಹೊತ್ತಿದ್ದ ಒಬ್ಬಾತ ಲೋಕಸಭೆಯ ಒಳಗೆ ಕಲರ್ ಬಾಂಬ್ ಸಿಡಿಸಿದ್ದಾನೆ. ಇನ್ನಿಬ್ಬರು ಲೋಕಸಭೆಯ ಹೊರಗೆ ಕಲರ್ ಬಾಂಬ್ ಸಿಡಿಸಿದ್ದಾರೆ. ಮೂವರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ದುಷ್ಕರ್ಮಿಗಳು ಲೋಕಸಭೆಯ ಸಭಾಂಗಣಕ್ಕೆ ಜಿಗಿದ ಕ್ಷಣದ ಸಂಸದರ ನಡುವೆ ಕೋಲಾಹಲ ಉಂಟಾಗಿದ್ದು, ಕೆಲವು ಸಂಸದರು ಹಾಗೂ ಲೋಕಸಭೆ ಸಿಬ್ಬಂದಿ ಆತನನ್ನು ಹಿಡಿದರು. ಕೂಡಲೇ ಸ್ಪೀಕರ್ ಸದನವನ್ನು ಮುಂದೂಡಿದರು.
ಇದುವರೆಗೆ ತಿಳಿದುಬಂದ ವಿಚಾರಗಳು:
- ಲೋಕಸಭೆಯ ನೇರ ಕಲಾಪದ ವಿಡಿಯೋಲ್ಲಿ, ಒಬ್ಬ ವ್ಯಕ್ತಿ ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಕಾಣಬಹುದು ಮತ್ತು ಇನ್ನೊಬ್ಬ ಸಂದರ್ಶಕರ ಗ್ಯಾಲರಿಯಿಂದ ತೂಗಾಡುತ್ತಾ ಹೊಗೆಯನ್ನು ಸಿಂಪಡಿಸಿದ. ನಂತರ ಲೋಕಸಭಾ ಸದಸ್ಯರು ಹಾಗೂ ಸಿಬ್ಬಂದಿ ಇವರನ್ನು ಹಿಡಿದು ಥಳಿಸಿದರು.
- ಇಬ್ಬರೂ ಶೂಗಳ ಒಳಗೆ ಗ್ಯಾಸ್ ಕ್ಯಾನಿಸ್ಟರ್ಗಳನ್ನು ಇಟ್ಟುಕೊಂಡು ಒಳಗೆ ಕೊಂಡೊಯ್ದಿದ್ದಾರೆ. ಅವರು ಬಿಟ್ಟದ್ದು ಹಳದಿ ಹೊಗೆಯಾಗಿದೆ.
- ಸಂದರ್ಶಕರ ಗ್ಯಾಲರಿಯಿಂದ ಯಾರೋ ಕೆಳಗೆ ಬಿದ್ದಿದ್ದಾರೆ ಎಂದು ಆರಂಭದಲ್ಲಿ ಭಾವಿಸಿದ್ದೆ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ. “ಎರಡನೇ ವ್ಯಕ್ತಿ ಜಿಗಿದ ನಂತರವೇ ಅದು ಭದ್ರತಾ ಲೋಪ ಎಂದು ನಾನು ಅರಿತುಕೊಂಡೆ. ಅನಿಲವು ವಿಷಕಾರಿಯಾಗಿದ್ದಿರಬಹುದು” ಎಂದು ಅವರು ಹೇಳಿದ್ದು, ಸಂಪೂರ್ಣ ತನಿಖೆಗೆ ಕರೆ ನೀಡಿದರು.
- ಸಂಸತ್ತಿನ ಶೂನ್ಯ ವೇಳೆಯಲ್ಲಿ ಈ ಘಟನೆ ನಡೆದಿದೆ.
- ಇಬ್ಬರು ವ್ಯಕ್ತಿಗಳು ಒಳನುಗ್ಗಿದಾಗ ಸದನದಲ್ಲಿದ್ದ ಸಮಾಜವಾದಿ ಪಕ್ಷದ ಸಂಸದ ಡಿಂಪಲ್ ಯಾದವ್, “ಇಲ್ಲಿಗೆ ಬರುವವರೆಲ್ಲರೂ- ಸಂದರ್ಶಕರಾಗಲಿ ಅಥವಾ ವರದಿಗಾರರಾಗಲಿ- ಟ್ಯಾಗ್ಗಳನ್ನು ಧರಿಸುವುದಿಲ್ಲ. ಆ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಇದು ಸಂಪೂರ್ಣ ಭದ್ರತಾ ಲೋಪ ಎಂದು ನಾನು ಭಾವಿಸುತ್ತೇನೆ. ಲೋಕಸಭೆಯೊಳಗೆ ಏನು ಬೇಕಾದರೂ ನಡೆದಿರಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
- ಇತರ ಇಬ್ಬರು ವ್ಯಕ್ತಿಗಳು – ಒಬ್ಬ ಪುರುಷ ಮತ್ತು ಮಹಿಳೆ – ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್ಗಳನ್ನು ಸಂಸತ್ತಿನ ಕಟ್ಟಡದ ಹೊರಗೆ ಸಿಡಿಸಿ ಪ್ರತಿಭಟಿಸಿದರು. ಅವರನ್ನು ಬಂಧಿಸಲಾಗಿದೆ.
- ಹೊರಗಡೆಯ ಬಂಧಿತರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದೆ.
- ಡಿ.13ರ ಸಂಸತ್ ಭವನದ ಮೇಲಿನ ದಾಳಿಯ ನೆನಪಿನಲ್ಲಿ, ಸಂಸತ್ ಮೇಲೆ ಮತ್ತೊಮ್ಮೆ ದಾಳಿ ನಡೆಸುವುದಾಗಿ ಖಲಿಸ್ತಾನ್ ಉಗ್ರ ಸತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದ. ಆತನಿಗೂ ಈ ಘಟನೆಗೂ ಇರಬಹುದಾದ ಲಿಂಕ್ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Security Breach In Parliament: ಲೋಕಸಭೆ ಸದನದೊಳಗೆ ನುಗ್ಗಿ ಕಲರ್ ಬಾಂಬ್ ಸಿಡಿಸಿದ ದುಷ್ಕರ್ಮಿಗಳು!