Site icon Vistara News

Security breach in Lok Sabha: ನಾಲ್ವರಲ್ಲ ಆರು ಜನರ ಬಂಧನ; ಎಲ್ಲರೂ ಪರಸ್ಪರ ಪರಿಚಯದವರೇ!

Vistara Editorial, Security breach in Lok Sabha and Safety should be given top priority

ನವದೆಹಲಿ: ಲೋಕಸಭೆ ಭದ್ರತೆಯನ್ನು ಭೇದಿಸಿ ಆತಂಕಕ್ಕೆ ಸೃಷ್ಟಿದ ಪ್ರಕರಣದಲ್ಲಿ ನಾಲ್ವರು ಎಂದು ಭಾವಿಸಲಾಗಿತ್ತು(Security breach in Lok Sabha). ಆದರೆ, ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ(Six People). ಮೈಸೂರಿನ ಡಿ. ಮನೋರಂಜನ್(D Manoranjan), ಉತ್ತರ ಪ್ರದೇಶದ ಸಾಗರ್ ಶರ್ಮಾ(Sagar Sharma), ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ (Amol Shinde) ಮತ್ತು ಹರ್ಯಾಣದ ಹಿಸಾರ್‌ನ ನೀಲಮ್ ದೇವಿ(Neelam Devi), ಗುರುಗ್ರಾಮದ ಲಲಿತ್ ಝಾ (Lalit Jha) ಮತ್ತು ವಿಕ್ಕಿ ಶರ್ಮಾ (Vicky Sharma) ಅವರನ್ನು ಬಂಧಿಸಲಾಗಿದೆ.

ಡಿ. ಮನೋರಂಜನ್ ಮತ್ತು ಸಾಗರ್ ಶರ್ಮಾ ಅವರು ಲೋಕಸಭೆ ಒಳಗೆ ಕಲರ್ ಸ್ಪ್ರೇ ಸಿಡಿಸಿದರೆ, ನೀಲಂದೇವಿ ಮತ್ತು ಅಮೋಲ್ ಶಿಂಧೆ ಅವರು ಸಂಸತ್ತಿನ ಹೊರಗೆ ಕೆಂಪು ಮತ್ತು ಹಳದಿ ಕಲರ್ ಗ್ಯಾಸ್ ಕ್ಯಾನಸ್ಟರ್‌ಗಳನ್ನು ಸಿಡಿಸಿದರು. ಈ ಕೃತ್ಯದ ಯೋಜನೆಯನ್ನು ರೂಪಿಸಿದವರ ಪೈಕಿ ಇನ್ನಿಬ್ಬರಾದ ಗುರುಗ್ರಾಮದ ಲಲಿತಾ ಝಾ ಮತ್ತು ವಿಕ್ಕಿ ಶರ್ಮಾ ಅವರು ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು.

ಕಲಾಪದಲ್ಲಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸುವ ಮೊದಲು ಲೋಕಸಭೆಯ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ ಅವರಿಗೆ, ಮೈಸೂರು-ಕೊಡಗಿನ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯ ವಿನಂತಿ ಮೇರೆಗೆ ಪಾಸ್‌ಗಳನ್ನು ನೀಡಲಾಗಿತ್ತು.

ನಾಲ್ಕು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯ

ಈ ಕೃತ್ಯವನ್ನು ನಡೆಸಿರುವ ಆರೂ ಜನರು ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಯದವರಾಗಿದ್ದಾರೆ. ಎಲ್ಲರೂ ಸೇರಿಯೇ ಈ ಸಂಚು ರೂಪಿಸಿದ್ದಾರೆ. ತಮ್ಮ ಯೋಜನೆಯ ಭಾಗವಾಗಿ ಸಂಸತ್ತಿನ ಸಂಕೀರ್ಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದರು. ವಾಸ್ತವದಲ್ಲಿ ಆರೂ ಜನರು ಲೋಕಸಭೆಗೆ ಹೋಗಲು ಪ್ರಯತ್ನಿಸಿದ್ದರು. ಆದರೆ, ಸಾಗರ್ ಶರ್ಮಾ ಮತ್ತು ಮನೋರಂಜನ್ ಪಾಸ್‌ಗಳನ್ನು ಪಡೆಯಲು ಯಶಸ್ವಿಯಾದರು. ಸದ್ಯದ ವಿಚಾರಣೆಯ ಪ್ರಕಾರ, ಈ ಆರೂ ಜನಕ್ಕೆ ಯಾವುದೇ ಭಯೋತ್ಪಾದನೆಯ ಸಂಘಟನೆಗಳೊಂದಿಗೆ ನಂಟಿರುವ ಪುರಾವೆಗಳಿಲ್ಲ.

ಉತ್ತರ ಪ್ರದೇಶದ ಸಾಗರ್ ಶರ್ಮಾ ಮತ್ತು ಕರ್ನಾಟಕದ ಡಿ ಮನೋರಂಜನ್ ಅವರ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. 42 ವರ್ಷದ ನೀಲಂ ದೇವಿ ಅವರು ಶಿಕ್ಷಕಿಯಾಗಿದ್ದು, ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ನೀಲಂ ಅವರ ಸಹೋದರನ ಪ್ರಕಾರ, 2020ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯಲ್ಲಿ ನೀಲಂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ, ಆಕೆ ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಲೋಕಸಭಾ ಸ್ಪೀಕರರನ್ನ ಭೇಟಿ ಮಾಡಿದ ಸಿಂಹ

ಇಂದಿನ ಘಟನೆಯ ಕುರಿತು ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ ಅವರು ಮಾಹಿತಿ ನೀಡಿದ್ದಾರೆ. ಆರೋಪಿ ಮನೋರಂಜನ್ ತಂದೆ ನಮ್ಮ ಕ್ಷೇತ್ರದ ನಿವಾಸಿಯಾಗಿದ್ದು, ಹೊಸ ಸಂಸತ್ ಭವನಕ್ಕೆ ಭೇಟಿ ನೀಡಲು ಪಾಸ್‌ಗೆ ಮನವಿ ಮಾಡಿದ್ದರು. ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ಅವರ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಅವರು ಹಂಚಿಕೊಂಡದ್ದನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಸಿಂಹ ಅವರು ಸ್ಪೀಕರ್ ‌ಅವರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Security Breach in Loksabha: ಪ್ರತಾಪ್‌ ಸಿಂಹ ಕಚೇರಿಗೆ ಕಾಂಗ್ರೆಸ್‌ ಮುತ್ತಿಗೆ ಯತ್ನ, ಗಲಾಟೆ

Exit mobile version