Site icon Vistara News

Security breach in Loksabha : ದುಷ್ಕರ್ಮಿಯನ್ನು ಹಿಡಿದದ್ದು ಸಂಸದ ಮುನಿಸ್ವಾಮಿ ಎಂಡ್‌ ಟೀಮ್

MP Muniswamy Kolara

ನವದೆಹಲಿ: ಬಿಗಿ ಭದ್ರತೆಯ ಸಂಸತ್‌ ಭವನಕ್ಕೆ ದಾಳಿ (Attack on parliament) ಮಾಡಿದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಸೆರೆ ಹಿಡಿದು ಭದ್ರತಾ ಸಿಬ್ಬಂದಿಯ ಕೈಗೆ ಒಪ್ಪಿಸಿದ್ದು ಕೋಲಾರ ಸಂಸದ ಮುನಿಸ್ವಾಮಿ ಮತ್ತು ಇತರರು ಎಂದು ತಿಳಿದುಬಂದಿದೆ. ಬುಧವಾರ ಮಧ್ಯಾಹ್ನ ಲೋಕಸಭಾ ಅಧಿವೇಶನ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಿಂದ (Security breach in Loksabha) ಜಿಗಿದ ಸಾಗರ್‌ ಶರ್ಮಾ (Sagar Sharma) ಮೇಜಿನಿಂದ ಮೇಜಿಗೆ ಹಾರುತ್ತಿದ್ದಂತೆಯೇ ಕೋಲಾರ ಸಂಸದ ಮುನಿಸ್ವಾಮಿ (Kolara MP Muniswami) ಮತ್ತು ಇತರರು ಹಿಡಿದುಕೊಂಡರು ಎನ್ನಲಾಗಿದೆ.

ಈ ಮಾಹಿತಿಯನ್ನು ಸ್ವತಃ ಸಂಸದ ಮುನಿಸ್ವಾಮಿ ಅವರೇ ಹಂಚಿಕೊಂಡಿದ್ದಾರೆ.

ನಾವು ನಮ್ಮ ಜಾಗದಲ್ಲಿ ಕುಳಿತುಕೊಂಡಿದ್ದಾಗ ಒಬ್ಬ ವ್ಯಕ್ತಿ ಸುಮಾರು 10 ಮೀಟರ್‌ ಎತ್ತರದ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಜಿಗಿದು ಮೇಜಿನಿಂದ ಮೇಜಿಗೆ ಹಾರಿ ಸಾಗುತ್ತಿದ್ದ. ಆಗ ನಾನು ಸೇರಿದಂತೆ ಕೆಲವರು ಸೇರಿ ಹಿಡಿದು ಭದ್ರತಾ ಸಿಬ್ಬಂದಿ ಕೈಗೆ ಒಪ್ಪಿಸಿದೆವು. ನಾವು ಹಿಡಿದ ಮೇಲೆಯೇ ಅವನು ತನ್ನ ಕಾಲಿನಲ್ಲಿದ್ದ ಕಲರ್‌ ಬಾಂಬ್‌ ಅನ್ನು ಸ್ಫೋಟಿಸಿದ್ದಾನೆ ಎಂದು ಮುನಿಸ್ವಾಮಿ ತಿಳಿಸಿದ್ದಾರೆ.

ನಮಗೆ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಆದರೆ ಒಮ್ಮೆಗೇ ಜಾಗೃತರಾಗಿ ನಾವು ಆತನನ್ನು ಹಿಡಿದುಕೊಂಡೆವು. ನಮ್ಮ ಜತೆಗೆ ಸಂಸದರಾದ ಡಿ.ವಿ. ಸದಾನಂದ ಗೌಡರು, ನಳಿನ್‌ ಕುಮಾರ್‌ ಕಟೀಲ್‌ ಕೂಡಾ ಇದ್ದರು ಎಂದು ಅವರು ತಿಳಿಸಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದೇನು?

ಈ ಘಟನೆ ನಡೆದ ಜಾಗದಲ್ಲೇ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೂಡಾ ಇದ್ದರು. ʻʻಒಮ್ಮೆಗೇ ಏನಾಯಿತು ಎಂದು ತಿಳಿಯದಾಯಿತು. ಬಳಿಕ ದುಷ್ಕರ್ಮಿಯನ್ನು ಹಿಡಿಯಲಾಯಿತು. ಬಾಂಬ್‌ ಸ್ಫೋಟವಾದಾಗ ನಮಗೆ ಒಮ್ಮೆಗೆ ಭಯವಾಯಿತು. ಕೆಲವರಿಗೆ ಉಸಿರುಗಟ್ಟಿದ ಹಾಗಾಯಿತು. ನಾವು ಹಿರಿಯ ಸಂಸದರನ್ನು ಹೊರಗೆ ಕಳುಹಿಸಿದೆವುʼʼ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಇದು ಪಕ್ಕಾ ಭದ್ರತಾ ವೈಫಲ್ಯ ಎಂದ ಡಿವಿಎಸ್‌

ಸಾಗರ್‌ ಶರ್ಮಾ ದಾಟಿಕೊಂಡು ಓಡಿದ ಜಾಗದಲ್ಲೇ ಇದ್ದ ಡಿ.ವಿ ಸದಾನಂದ ಗೌಡರ ಪ್ರಕಾರ ಇದು ಪಕ್ಕಾ ಭದ್ರತಾ ವೈಫಲ್ಯ. ಒಮ್ಮೆಗೆ ಸಂಸತ್‌ ಭವನ ಪ್ರವೇಶಿಸಬೇಕಾದರೆ ಹಲವು ಸುತ್ತಿನ ವಿಚಾರಣೆ ತಪಾಸಣೆ ಎದುರಿಸಬೇಕು. ಹಾಗಿದ್ದರೂ ಆತ ಇಲ್ಲಿಗೆ ಹೇಗೆ ಬಂದ ಎನ್ನುವುದೇ ಪ್ರಶ್ನೆ. ಇಲ್ಲಿ ಬರಬೇಕಾದರೆ ಸಂಸದರೇ ಪಾಸ್‌ ಕೊಡಬೇಕು. ಬೇರೆ ಯಾವ ದಾರಿಯೂ ಇಲ್ಲ. ಹಾಗಿರುವಾಗ ಇದೊಂದು ಭಯಾನಕ ಘಟನೆ ಎಂದು ಅವರು ಹೇಳಿದ್ದಾರೆ.

22 ವರ್ಷಗಳ ಬಳಿಕ ಅದೇ ದಿನ ದಾಳಿ

2001ರಲ್ಲಿ ಸಂಸದ್‌ ಭವನಕ್ಕೆ ನಡೆದ ದಾಳಿ ಭಾರಿ ಸುದ್ದಿ ಮಾಡಿತ್ತು. 2001ರ ಡಿಸೆಂಬರ್‌ 13ರಂದು ಐದು ಉಗ್ರರು ಭದ್ರತಾ ಸಿಬ್ಬಂದಿಗಳನ್ನು ಹೊಡೆದು ಹಾಕಿ ಒಳ ನುಗ್ಗಿದ್ದರು. ಆಗ ಎಂಟು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರು. ಅವರು ಸಂಸತ್‌ ಭವನ ಪ್ರವೇಶಿಸುವ ಮೊದಲೇ ಕೊಂದು ಹಾಕಲಾಗಿತ್ತು.

Exit mobile version