Site icon Vistara News

Security breach in Loksabha : ಸಾಗರ್‌ ಶರ್ಮಾಗೆ ಪಾಸ್‌ ಕೊಟ್ಟಿದ್ದೇಕೆ?: ಇಲ್ಲಿದೆ ಪ್ರತಾಪ್‌ಸಿಂಹ ವಿವರಣೆ

Pratap simha and Sagar Sharma

ನವದೆಹಲಿ: ಎಲ್ಲಿಯ ಉತ್ತರ ಪ್ರದೇಶದ ಸಾಗರ್‌ ಶರ್ಮಾ? (Sagar Sharma) ಎಲ್ಲಿಯ ಮೈಸೂರಿನ ಸಂಸದ ಪ್ರತಾಪ್‌ಸಿಂಹ? (MP Pratap simha) ಬುಧವಾರ ನೂತನ ಸಂಸತ್‌ ಭವನದ ಒಳಗೆ ನಡೆಯುತ್ತಿದ್ದ ಲೋಕಸಭಾ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೇಜುಗಳ ಮೂಲಕವೇ (Security breach in Loksabha) ಸ್ಪೀಕರ್‌ ಅವರತ್ತ ಧಾವಿಸಿದ ಸಾಗರ್‌ ಶರ್ಮನಿಗೆ ಪ್ರತಾಪ್‌ ಸಿಂಹ ವಿಸಿಟರ್ಸ್‌ ಪಾಸ್‌ (Visitors Pass) ಕೊಟ್ಟಿದ್ದು ಹೇಗೆ? ಮತ್ತು ಯಾಕೆ ಎಂಬ ಪ್ರಶ್ನೆ ಈಗ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ.

ಅದಕ್ಕೆ ಉತ್ತರವನ್ನು ಸ್ವತಃ ಸಂಸದ ಪ್ರತಾಪ್‌ಸಿಂಹ ಅವರೇ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿಯಾಗಿ ವಿವರಣೆ ನೀಡಿರುವ ಪ್ರತಾಪ್‌ ಸಿಂಹ ಅವರು ತಾನು ಪಾಸ್‌ ನೀಡಿದ್ದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ನಿಜವೆಂದರೆ ಆರಂಭದಲ್ಲಿ ಪ್ರತಾಪ್‌ ಸಿಂಹಗೂ ಇದೇ ಪ್ರಕರಣದಲ್ಲಿ ಸಾಗರ್‌ ಶರ್ಮ ಜತೆ ಗ್ಯಾಲರಿಗೆ ಬಂದು ಸಿಕ್ಕಿಬಿದ್ದ ಮೈಸೂರಿನ ಮನೋರಂಜನ್‌ಗೂ ಪರಿಚಯ ಇರಬಹುದು ಎಂದು ಭಾವಿಸಲಾಗಿತ್ತು. ಅದೇ ಪರಿಚಯದಲ್ಲಿ ಮನೋರಂಜನ್‌, ಸಾಗರ್‌ ಶರ್ಮ ಪಾಸ್‌ ಪಡೆದಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಪ್ರತಾಪ್‌ಸಿಂಹ ಹೇಳುವ ಪ್ರಕಾರ, ಅವರ ಕಚೇರಿಯಿಂದ ಪಾಸ್‌ ಇಶ್ಯೂ ಆಗಿದ್ದು ಸಾಗರ್‌ ಶರ್ಮಗೆನೆ. ಅದನ್ನು ತೆಗೆಸಿಕೊಟ್ಟಿದ್ದು ಸ್ವತಃ ಸಾಗರ್‌ ಶರ್ಮನ ತಂದೆ ಶಂಕರ್‌ಲಾಲ್‌ ಶರ್ಮ!

ಇದು ಹೇಗೆಂದರೆ ಸಾಗರ್‌ ಶರ್ಮಾ ಅವರ ತಂದೆ ಶಂಕರ್‌ ಲಾಲ್‌ ಶರ್ಮ ಅವರು ಉತ್ತರ ಪ್ರದೇಶದವರಾದರೂ ಈಗ ಇರುವುದು ಮೈಸೂರಿನಲ್ಲಿ! ಆರೋಪಿ ಸಾಗರ್​ ಶರ್ಮಾ ಅವರ ತಂದೆ ಶಂಕರ್​ ಲಾಲ್​ ಶರ್ಮಾ ನಮ್ಮ ಕ್ಷೇತ್ರ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೊಸ ಸಂಸತ್​ ಭವನವನ್ನು ನೋಡಬೇಕೆಂದು ಅನೇಕ ಬಾರಿ ವಿಸಿಟರ್​ ಪಾಸ್​ಗಾಗಿ ಮನವಿ ಮಾಡಿದ್ದರು. ಸಾಗರ್ ಶರ್ಮಾ ಅವರು ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ತಮ್ಮ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ಪ್ರತಾಪ್‌ ಸಿಂಹ ಅವರು ವಿವರಣೆ ನೀಡಿದ್ದಾರೆ. ವಿಸಿಟರ್‌ ಪಾಸ್‌ ಹೊರತುಪಡಿಸಿ ಬೇರೆ ರೀತಿಯ ಪರಿಚಯವಿಲ್ಲ. ಹೆಚ್ಚುವರಿ ಮಾಹಿತಿಯೂ ಇಲ್ಲ ಎಂದು ಪ್ರತಾಪ್‌ಸಿಂಹ ತಿಳಿಸಿದ್ದಾರೆ ಎನ್ನಲಾಗಿದೆ.

ಸಾಗರ್‌ ಶರ್ಮ ಮತ್ತು ಮನೋರಂಜನ್‌ ಸದನದ ಒಳಗೆ ಗದ್ದಲವೆಬ್ಬಿಸುತ್ತಿದ್ದಂತೆಯೇ ಸಂಸದರು ಮತ್ತು ಗ್ಯಾಲರಿಯಲ್ಲಿದ್ದವರು ಅವರಿಬ್ಬರನ್ನು ಹಿಡಿದುಕೊಂಡರು. ಈ ನಡುವೆ ಬಿಎಸ್‌ಪಿಯ ಉಚ್ಚಾಟಿತ ಸಂಸದ ಡ್ಯಾನಿಷ್‌ ಅಲಿ ಅವರು ಸಾಗರ್‌ ಶರ್ಮಾನ ಬಳಿ ಇರುವ ವಿಸಿಟಿಂಗ್‌ ಪಾಸ್‌ ಪ್ರತಾಪ್‌ಸಿಂಹ ಅವರ ಕಚೇರಿಯಿಂದ ಇಶ್ಯೂ ಆಗಿರುವುದು ಎನ್ನುವುದನ್ನು ಗಮನಕ್ಕೆ ತಂದರು. ಹೀಗಾಗಿ ಪ್ರತಾಪ್‌ ಸಿಂಹ ಅವರ ವಿರುದ್ಧ ಆಕ್ರೋಶ ಕೇಳಿಬಂತು.

ಈ ಕೃತ್ಯಕ್ಕೆ ಸಂಸದರೇ ನೇರ ಹೊಣೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಹಲವು ಕಡೆ ಪ್ರತಿಭಟನೆಗಳು ನಡೆದಿವೆ.

Exit mobile version