Site icon Vistara News

Ladakh Hanle: ಲಡಾಖ್‌ನ ಹನ್ಲೆಯಲ್ಲಿ ನಕ್ಷತ್ರ ಪುಂಜಗಳನ್ನು ನೋಡಿ! ಏನು ಅದ್ಭುತ!

Ladakh Hanle

ನಮ್ಮ ನಿಮ್ಮಲ್ಲಿ (Ladakh Hanle) ಬಹುತೇಕರು ಹುಲಿಗಳಿಗೆ, ಇತರ ವನ್ಯಜೀವಿಗಳಿಗೆ, ಪಕ್ಷಿಗಳಿಗೆ ಪ್ರತ್ಯೇಕ ಸಂರಕ್ಷಿತಧಾಮಗಳಿರುವುದನ್ನು ಕೇಳಿದ್ದೀರಿ, ನೋಡಿದ್ದೀರಿ. ಸಫಾರಿ ಎಂದು ಅರಣ್ಯ ಇಲಾಖೆ ಕರೆದುಕೊಂಡು ಹೋಗುವ ವಾಹನದೊಳಗೆ ಕೂತು ವನ್ಯಜೀವಿಗಳು ಕಣ್ಣಿಗೆ ಬೀಳುತ್ತವಾ ಎಂಬ ಕುತೂಹಲದಿಂದ ಮೈಯೆಲ್ಲಾ ಕಣ್ಣಾಗಿ ಕಾಡಲ್ಲಿ ಹುಡುಕಾಡಿದ್ದೀರಿ. ಮರುಳುಗಾಡಿನ ಸಫಾರಿಗಳಿಗೂ ಅನೇಕರು ಹೋಗಿರಬಹುದು. ಆದರೆ, ರಾತ್ರಿಯಾಕಾಶ ನೋಡಲಿಕ್ಕೆಂದೇ ಯಾವುದಾದರೂ ಸಂರಕ್ಷಿತಧಾಮಕ್ಕೆ ಹೋಗಿದ್ದೀರಾ? ರಾತ್ರಿಯಾಕಾಶ ವೀಕ್ಷಣೆಗೆಂದೇ ಸಂರಕ್ಷಿಸಲ್ಪಟ್ಟ ಒಂದು ಜಾಗ ಇರುವುದು ಗೊತ್ತೇ? ಅದೂ ನಮ್ಮ ಭಾರತದಲ್ಲಿ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ.

ಕಗ್ಗತ್ತಲ ಆಕಾಶ ಸಂರಕ್ಷಿತಧಾಮ

ಲಡಾಕ್‌ನ ಹನ್ಲೆ ಎಂಬ ಪುಟ್ಟ ಹಳ್ಳಿ ಭಾರತದ ಮೊಟ್ಟ ಮೊದಲ ಕಗ್ಗತ್ತಲ ಆಕಾಶ ಸಂರಕ್ಷಿತಧಾಮ. ಅಷ್ಟೇ ಅಲ್ಲ, ಏಷ್ಯಾದ್ದೂ ಕೂಡಾ. ಕಳೆದ ವರ್ಷ ಈ ಪ್ರದೇಶವನ್ನು ದಿ ಹನ್ಲೆ ಡಾರ್ಕ್‌ ಸ್ಕೈ ರಿಸರ್ವ್‌ (ಹೆಚ್‌ಡಿಎಸ್‌ಆರ್‌) ಎಂದು ನಾಮಕರಣ ಮಾಡಲಾಗಿತ್ತು. ಪ್ರವಾಸೋದ್ಯಮವೂ ಕೂಡಾ ಈ ಪ್ರದೇಶವನ್ನು ವಿಶ್ವದ ಇತರ 15-20 ಇಂತಹ ತಾಣಗಳ ಮಾದರಿಯಲ್ಲಿ ಖಗೋಳ ಪ್ರವಾಸೋದ್ಯಮದ ಭಾಗವಾಗಿ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದೆಡೆ, ಇತ್ತೀಚೆಗಷ್ಟೇ, ಬೆಂಗಳೂರಿನ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಮಿಲ್ಕೀವೇಯ ಅಡಿಯಲ್ಲಿ ನಕ್ಷತ್ರ ಪಾರ್ಟಿ ಎಂಬ ವಿನೂತನ ಕಾರ್ಯಕ್ರಮವನ್ನೂ ಆಯೋಜಿಸಿತ್ತು. ಸುಮಾರು 30ಕ್ಕೂ ಹೆಚ್ಚು ಖಗೋಳ ವಿಜ್ಞಾನ ಆಸಕ್ತ ಪ್ರವಾಸಿಗರು ತಮ್ಮ ತಮ್ಮ ದೂರದರ್ಶಕ ಹಾಗೂ ಕ್ಯಾಮೆರಾಗಳೊಂದಿಗೆ ಭಾಗವಹಿಸಿ ಈ ಅದ್ಭುತ ಕಾರ್ಯಕ್ರಮದ ಭಾಗಿಯಾದರು.

ಛಾಯಾಗ್ರಾಹಕರಿಗೂ ಸುಗ್ಗಿ

ಹನ್ಲೆ ಎಂಬ ಈ ಹಳ್ಳಿ, ಭಾರತದ ಅತ್ಯಂತ ವಿಶೇಷವಾದ ಹಳ್ಳಿ. ಈ ಹಳ್ಳಿಯ ಸುತ್ತಮುತ್ತಲ ಸುಮಾರು 1,073 ಚದರ ಕಿಲೋಮೀಟರುಗಳಷ್ಟು ಪ್ರದೇಶವನ್ನು ಈ ಸಂರಕ್ಷಿತಧಾಮವಾಗಿ ಘೋಷಿಸಲಾಗಿದೆ. ಯಾವುದೇ, ಬೆಳಕು, ಶಬ್ದ ಹಾಗೂ ಇತರ ಮಾಲಿನ್ಯಗಳಿಲ್ಲದೆ, ಈ ಹಳ್ಳಿಯಲ್ಲಿ ಅತ್ಯಂತ ಸುಂದರವಾದ ರಾತ್ರಿಯಾಕಾಶದ ಕ್ಷಣವನ್ನು ಆನಂದಿಸಬಹುದಂತೆ. ರಾತ್ರಿಯ ಆಗಸದಲ್ಲಿ ಕಾಣುವ ಮಿಲ್ಕಿವೇ ಹಾಗೂ ನಕ್ಷತ್ರ ಪುಂಜಗಳ ಚಿತ್ರಗಳನ್ನು ಸೆರೆಹಿಡಿಯಲು ಬಯಸುವ ಛಾಯಾಗ್ರಾಹಕರಿಗೂ, ಸಾಹಸೀ ಪ್ರವೃತ್ತಿಯ ಪ್ರವಾಸಿಗರಿಗೂ ಈ ಹನ್ಲೆ ಹಳ್ಳಿಯು ಜೀವಮಾನದಲ್ಲಿ ಮರೆಯಲಾಗದ ಕ್ಷಣಗಳನ್ನು ಕಟ್ಟಿಕೊಡಬಲ್ಲುದು. ಛಾಯಾಗ್ರಾಹಕರುಗಳೂ ಕೂಡಾ ಅತ್ಯದ್ಭುತ ಛಾಯಾಚಿತ್ರಗಳನ್ನು ಈ ಹಳ್ಳಿಯಲ್ಲಿ ಕುಳಿತು ಸೆರೆ ಹಿಡಿಯಬಹುದು.
ಈ ನಕ್ಷತ್ರ ಪಾರ್ಟಿಯಲ್ಲಿ ಖಗೋಳಾಸಕ್ತರು ಹಾಗೂ ಛಾಯಾಗ್ರಾಹಕರು ಅಂತರಿಕ್ಷದ ಕೆಲವು ಅತ್ಯದ್ಭುತ ಕ್ಷಣಗಳನ್ನು ದಾಖಲಿಸುವಲ್ಲಿ ಹಾಗೂ ಕಾಣುವಲ್ಲಿ ಯಶಸ್ವಿಯಾಗಿದ್ದು, ಇಂತಹ ಅವಕಾಶಗಳು ಎಲ್ಲ ಸ್ಥಳದಲ್ಲಿ ಕಾಣಸಿಗುವಂಥದ್ದಲ್ಲ. ಮುಂದೆಯೂ ಇಂಥ ಕಾರ್ಯಕ್ರಗಳನ್ನು ಹಮ್ಮಿಕೊಂಡು ಇನ್ನಷ್ಟು ಆಸಕ್ತರನ್ನು, ಪ್ರವಾಸಿಗರನ್ನು ಸೆಳೆಯುವ ಯೋಜನೆಗಳೂ ಸಿದ್ಧಗೊಂಡಿವೆ.

ಇದಕ್ಕಿದೆ ಮಹತ್ವದ ಸ್ಥಾನ

ಜಗತ್ತಿನಲ್ಲಿ ಇಂಥ ಖಗೋಳ ವೀಕ್ಷಣೆಗೆಂದೇ ಮೀಸಲಿಟ್ಟ ಸುಮಾರು 15-16 ಇವೆ. ಹೀಗಾಗಿ ಭಾರತದ ಲಡಾಖ್‌ನ ಪೂರ್ವ ಭಾಗದಲ್ಲಿರುವ ಈ ಪ್ರದೇಶ ಈ ಪೈಕಿ ಮಹತ್ವದ ಸ್ಥಾನ ಪಡೆದಿದೆ. ಹನ್ಲೆ ಹಳ್ಳಿ ಹಾಗೂ ಪಾಂಗೋಂಗ್‌ ಸೋ ಸರೋವರದ ಬಳಿಯ ಮೇರಕ್‌ ಎಂಬ ಎರಡು ಜಾಗಗಳಲ್ಲಿ ಈಗಾಗಲೇ ಕೆಂಬಣ್ಣ ಅರೋರಾ ಕೂಡಾ ಇಲ್ಲಿನ ವೀಕ್ಷಣಾಲಯಗಳ ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಇನ್ನು ಮುಂದೆ ಆಕಾಶದ ಅತ್ಯಂತ ರಮಣೀಯ ದೃಶ್ಯವಾದ ಅರೋರಾ (ನಾರ್ದರ್ನ್‌ ಲೈಟ್ಸ್‌) ವೀಕ್ಷಣೆಗೆ ಬೇರೆ ದೇಶಗಳಾದ ಕೆನಡಾ, ಐಸ್‌ಲ್ಯಾಂಡ್‌, ನಾರ್ವೆ, ಸ್ವೀಡನ್‌, ಫಿನ್‌ಲ್ಯಾಂಡ್‌ಗಳಂಥ ಸ್ಥಳಗಳಿಗೇ ಪ್ರವಾಸ ಹೋಗಬೇಕಾಗಿಲ್ಲ. ಲಡಾಖ್‌ನಲ್ಲೂ ವೀಕ್ಷಿಸಲು ಸಾಧ್ಯವಿದೆ. ಆಕಾಶ ಅತ್ಯಂತ ಸುಂದರ ದೃಶ್ಯಾವಳಿಗಳನ್ನೂ, ಮಿಲ್ಕೀವೇ, ನಕ್ಷತ್ರ ಪುಂಜಗಳ್ನನೂ ಕಣ್ತುಂಬಿಕೊಂಡು ಬರಬೇಕಾದರೆ, ಎಲ್ಲ ಮಾಲಿನ್ಯಗಳಿಂದಲೂ ಬಹುದೂರ ಇರುವ ಲಡಾಖ್‌ನ ಈ ಹನ್ಲೆ ಹಳ್ಳಿಯ ಈ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿ, ಟೆಂಟ್‌ನಲ್ಲಿ ಉಳಿದುಕೊಂಡು ಈ ಅಪರೂಪದ, ಜೀವಮಾನದ ಅವಿಸ್ಮರಣೀಯ ಅನುಭವವನ್ನು ಪಡೆಯಬಹುದು.

ಇದನ್ನೂ ಓದಿ: Solar Storm: ಇಂದು ಬೀಸಲಿದೆ ಸೌರ ಬಿರುಗಾಳಿ! ರೇಡಿಯೋ, ಇಂಟರ್‌ನೆಟ್‌ ಸಿಗ್ನಲ್‌ ಮೇಲೆ ಪ್ರಭಾವ

Exit mobile version