ಹೊಸದಿಲ್ಲಿ: ಭಾರತದಲ್ಲಿ ಪ್ರಿಯಕರನೊಂದಿಗೆ ಅಕ್ರಮವಾಗಿ ವಾಸಿಸಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಗುಲಾಮ್ ಹೈದರ್ (Seema Ghulam Haider) ಬಳಿಯಿಂದ ಎರಡು ವಿಡಿಯೋ ಕ್ಯಾಸೆಟ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು, ಪಾಕಿಸ್ತಾನದ ಐದು ಅಧಿಕೃತ ಪಾಸ್‌ಪೋರ್ಟ್‌ಗಳು, ಅಪೂರ್ಣ ಹೆಸರು ವಿಳಾಸ ಹೊಂದಿರುವ ಬಳಕೆಯಾಗದ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು ವಶಪಡಿಸಿಕೊಂಡಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಬುಧವಾರ ತಿಳಿಸಿದ್ದಾರೆ.
ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಪ್ರಿಯಕರ ಸಚಿನ್ ಮೀನಾ ಜೊತೆ ಸೀಮಾ ಹೈದರ್ ವಾಸಿಸಿದ್ದಳು. ಹೈದರ್ ಮತ್ತು ಆಕೆಯ ಸಂಗಾತಿ ಸಚಿನ್ ಮೀನಾರನ್ನು ಯುಪಿ ಎಟಿಎಸ್ ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿದೆ. ಗುಪ್ತಚರ ಬ್ಯೂರೋ ಅಧಿಕಾರಿಗಳು ಸಹ ಹಾಜರಿದ್ದರು. ಭಯೋತ್ಪಾದನಾ ನಿಗ್ರಹ ದಳ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದು, ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿಯು ಈ ವಿವರಗಳನ್ನು ಬಹಿರಂಗಪಡಿಸಿದೆ. ಸೀಮಾ ಹೈದರ್ (Seema Haider) ಪ್ರಕರಣದಲ್ಲಿ ಆಕೆ ಅಮಾಯಕ ಮಹಿಳೆಯೋ ಅಥವಾ ಗೂಢಚಾರ ಕೃತ್ಯಕ್ಕಾಗಿ ಭಾರತ ಪ್ರವೇಶಿಸಿದಾಕೆಯೋ ಎಂಬ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಹಲವು ಆಯಾಮಗಳಲ್ಲಿ ನಡೆಸಲಾಗುತ್ತಿದೆ.
ಯುಪಿ ಎಟಿಎಸ್ ಪ್ರಕಾರ, ಸೀಮಾಳ ಪತಿ ಕೆಲಸಕ್ಕಾಗಿ 2019ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿದ್ದ. ಮನೆಯ ಖರ್ಚುವೆಚ್ಚಗಳನ್ನು ನಿರ್ವಹಿಸಲು ಹೆಂಡತಿಗೆ ತಿಂಗಳಿಗೆ 70-80,000 ಪಾಕಿಸ್ತಾನಿ ರೂಪಾಯಿಗಳನ್ನು ಕಳುಹಿಸುತ್ತಿದ್ದ. ಸೀಮಾ ಅದರಲ್ಲಿ ಸ್ವಲ್ಪ ಹಣ ಉಳಿಸಿ 12 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದಳು. ಖರೀದಿಸಿದ ಮೂರು ತಿಂಗಳ ನಂತರ ಮನೆಯನ್ನು ಮಾರಿ, ತನ್ನ ಪ್ರೇಮಿಯೊಂದಿಗೆ ಭಾರತಕ್ಕೆ ಬಂದು ಇರಲು ಅಗತ್ಯವಾದ ಹಣವನ್ನು ಒಟ್ಟುಹಾಕಿದ್ದಳು.
ಮಾರ್ಚ್ 10ರಂದು ಸೀಮಾ ಕರಾಚಿ ವಿಮಾನ ನಿಲ್ದಾಣದಿಂದ ಶಾರ್ಜಾ ವಿಮಾನ ನಿಲ್ದಾಣಕ್ಕೆ ಮತ್ತು ನಂತರ ಪ್ರವಾಸಿ ವೀಸಾದಲ್ಲಿ ಕಠ್ಮಂಡುವಿಗೆ ಹಾರಿದ್ದಳು. ಈ ಮಧ್ಯೆ, ಸಚಿನ್ ಮೀನಾ ಮಾರ್ಚ್ 8ರಂದು ಗೋರಖ್‌ಪುರ ತಲುಪಿದ. ಎರಡು ದಿನಗಳ ನಂತರ ಕಠ್ಮಂಡುವಿಗೆ ಬಂದ. ಅಲ್ಲಿಯ ಹೋಟೆಲ್ ಒಂದರಲ್ಲಿ ರೂಮ್ ಬುಕ್ ಮಾಡಿದ. ಸೀಮಾಳನ್ನು ವಿಮಾನ ನಿಲ್ದಾಣದಿಂದ ಬರಮಾಡಿಕೊಂಡು, ಇಬ್ಬರೂ ಏಳು ದಿನ ಅಲ್ಲಿಯೇ ಕಳೆದರು. ಎರಡು ತಿಂಗಳ ನಂತರ ಸೀಮಾ ಪ್ರವಾಸಿ ವೀಸಾ ಪಡೆದು ತನ್ನ ನಾಲ್ಕು ಮಕ್ಕಳೊಂದಿಗೆ ದುಬೈ ತಲುಪಿದಳು. ಒಂದು ದಿನದ ನಂತರ ಮತ್ತೆ ಕಠ್ಮಂಡುವಿಗೆ ಬಂದು, ಮೇ 11ರಂದು ಹಿಮಾಲಯ ದೇಶದ ಪೋಖ್ರಾವನ್ನು ತಲುಪಿದಳು. ಪೋಖ್ರಾದಿಂದ ಉತ್ತರ ಪ್ರದೇಶದ ಸಿದ್ಧಾರ್ಥನಗರದ ಖುನ್ವಾ ಗಡಿಗೆ ಸೀಮಾ ಬಸ್ ಮೂಲಕ ಆಗಮಿಸಿದ್ದಳು.
ಇದನ್ನೂ ಓದಿ: ಸೋದರ, ಚಿಕ್ಕಪ್ಪ ಇರುವುದು ಪಾಕ್ ಸೇನೆಯಲ್ಲಿ; ಸೀಮಾ ಹೈದರ್ ಬಂದಿದ್ದು ಪ್ರೀತಿಗಾಗೋ, ಗೂಢಚಾರಿಣಿಯೋ?