ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸುವ ಬಹುತೇಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಟೀಕಿಸುತ್ತಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯಲು ಮೋದಿ ಕಾರಣ, ಪ್ರಧಾನಿಯು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸೇರಿ ಹಲವು ರೀತಿಯಲ್ಲಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿರುವ ಬಹುತೇಕ ಕಾರ್ಯಕ್ರಮಗಳಲ್ಲಿ ಅವರ ಜತೆಗಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮಾತ್ರ ನರೇಂದ್ರ ಮೋದಿ ಅವರನ್ನು ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸಿದ್ದಾರೆ.
ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುವ ಕೆಲವು ದಿನಗಳು ಬಾಕಿ ಇರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಪ್ರಧಾನಿಯನ್ನು ಹೊಗಳಿದ್ದಾರೆ. “ಜಗತ್ತಿನ ಜನಪ್ರಿಯ ದೇಶವಾದ ಭಾರತದ ಪ್ರಧಾನಿಗೆ ಜಗತ್ತಿನಾದ್ಯಂತ ಗೌರವ ಸಿಗುತ್ತಿರುವುದು ನನಗೆ ಹೆಮ್ಮೆಯ ವಿಚಾರ. ಅವರಿಗೆ ಗೌರವ ಸಿಗುತ್ತಿರುವುದಕ್ಕೆ ನನಗೆ ಹಮ್ಮೆ ಎನಿಸುತ್ತದೆ” ಎಂದು ಹೇಳಿದ್ದಾರೆ.
“ಭಾರತ ಯಾವ ವಿಷಯದಲ್ಲಿ ಸರಿಯಾದ ರೀತಿಯಲ್ಲಿ ಸಾಗುತ್ತಿದೆ ಎಂಬುದು ರಾಹುಲ್ ಗಾಂಧಿ ಅವರಿಗೆ ಗೊತ್ತು. ನಮಗೂ ಅದು ಗೊತ್ತಿದೆ. ಮೋದಿ ಅವರಿಗೆ ಹೆಚ್ಚಿನ ಗೌರವ ಸಿಗುತ್ತಿದೆ ಎಂದು ಯಾರೋ ಒಬ್ಬರು ಹೇಳಿದರು. ಇದು ನನಗೆ ಹೆಮ್ಮೆಯ ವಿಚಾರ ಎಂದು ನಾನು ಹೇಳಿದೆ. ನರೇಂದ್ರ ಮೋದಿ ಅವರು ಕೂಡ ನನಗೆ ಪ್ರಧಾನಿ. ಹಾಗೆಯೇ, ಅವರು ಭಾರತದ ಪ್ರಧಾನಿಯಾಗಿರುವುದಕ್ಕೆ ಗೌರವ ಸಿಗುತ್ತಿದೆಯೇ ಹೊರತು, ಬಿಜೆಪಿ ಪ್ರಧಾನಿ ಅಲ್ಲ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.
“150 ಕೋಟಿ ಜನರಿರುವ ದೇಶದ ಪ್ರಧಾನಿಯೊಬ್ಬರಿಗೆ ವಿಶ್ವದೆಲ್ಲೆಡೆ ಮನ್ನಣೆ ಸಿಗುತ್ತಿರುವುದು ನನಗೆ ಖುಷಿಯ ವಿಚಾರವೇ ಆಗಿದೆ. ಇದರಲ್ಲಿ ನನಗೆ ಯಾವುದೇ ನಕಾರಾತ್ಮಕ ಅಂಶ ಕಾಣಿಸುವುದಿಲ್ಲ. ನಾನು ಸಕಾರಾತ್ಮಕವಾಗಿಯೇ ಇದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ: Rahul Gandhi: ಮುಸ್ಲಿಂ ಲೀಗ್ ಜಾತ್ಯತೀತ ಎಂದ ರಾಹುಲ್ ಗಾಂಧಿ; ಬಿಜೆಪಿ- ಕಾಂಗ್ರೆಸ್ ಮಧ್ಯೆ ವಾಕ್ಸಮರ
ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕದ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನ ಉಭಯಪಕ್ಷೀಯ ನಾಯಕತ್ವದ ಪರವಾಗಿ ಜೂನ್ 22ರ ಗುರುವಾರ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿಯನ್ನು ಆಹ್ವಾನಿಸುವುದು ನಮ್ಮ ಗೌರವವಾಗಿದೆ ಎಂದು ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ, ಸೆನೆಟ್ ನಾಯಕ ಚಕ್ ಶುಮರ್, ಸೆನೆಟ್ ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ ಮತ್ತು ಹೌಸ್ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್ ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಜೋ ಬೈಡೆನ್ ಅವರು ಆತಿಥ್ಯವನ್ನು ನೀಡಲಿದ್ದಾರೆ. ಇದರಲ್ಲಿ ಔತಣಕೂಟ ಕೂಡ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಅಮೆರಿಕದ ಸಂಸತ್ತು ಉದ್ದೇಶಿಸಿ ಮಾತನಾಡಲಿದ್ದಾರೆ.