Site icon Vistara News

Kharge Congress President | ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವು

mallikarjun kharge

ನವ ದೆಹಲಿ: ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಶಶಿ ತರೂರ್ ಸೋಲು ಕಂಡಿದ್ದಾರೆ. ಈ ಮೂಲಕ ಕಳೆದ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಮನೆತನ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾದಂತಾಗಿದೆ. ಹಾಗೆಯೇ, ಈ ಸ್ಥಾನವನ್ನು ವಹಿಸಿಕೊಳ್ಳುತ್ತಿರುವ ಕರ್ನಾಟಕದ ಎರಡನೇ ವ್ಯಕ್ತಿಯಾಗಿದ್ದಾರೆ. ತರೂರ್ ಅವರಿಗೆ 1072 ಮತಗಳು ಲಭಿಸಿದ್ದರೆ, ಖರ್ಗೆ ಅವರು 7897 ಮತಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ, ೪೧೬ ಮತಗಳು ಅಸಿಂಧುಗೊಂಡಿವೆ.

ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋನಿಯಾ ಗಾಂಧಿ ಅಭಿನಂದನೆ.

ಎಐಸಿಸಿ ಅಧ್ಯಕ್ಷ ಹುದ್ದೆಗೆ ಅಕ್ಟೋಬರ್ 17ರಂದು ನಡೆದ ಚುನಾವಣೆಯಲ್ಲಿ ಶೇ.96ರಷ್ಟು ಮತದಾನವಾಗಿತ್ತು. ಮತ ಚಲಾಯಿಸಲು ಅರ್ಹರಾದವರ ಪೈಕಿ 9500 ಕಾಂಗ್ರೆಸ್ ಮತದಾರರು ಚಲಾಯಿಸಿದ್ದರು.

ಇಬ್ಬರೇ ಸ್ಪರ್ಧಿಗಳು
ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೆಗೆ ಮುಂಚೆಯೇ ಮಲ್ಲಿಕಾರ್ಜುನ ಖರ್ಗೆ ಗೆಲ್ಲಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿದೆ.

ಒಲ್ಲೆ ಎಂದ ರಾಜಸ್ಥಾನ ಸಿಎಂ
ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬುದು ಗಾಂಧಿ ಕುಟುಂಬದ ಇಚ್ಛೆಯಾಗಿತ್ತು. ಆದರೆ, ರಾಜಸ್ಥಾನ ಶಾಸಕರು ಈ ನಿರ್ಧಾರದ ವಿರುದ್ಧ ಬಂಡೆದ್ದ ಕೂಡಲೇ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ಆ ಬಳಿಕ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕೆ ಇಳಿಸಲಾಯಿತು. ಇದಕ್ಕೂ ಮೊದಲೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಶಶಿ ತರೂರ್ ಅವರು ಘೋಷಿಸಿದ್ದರು. ಈ ಮಧ್ಯೆ, ದಿಗ್ವಿಜಯ್ ಸಿಂಗ್ ಅವರೂ ಸ್ಫರ್ಧಿಸುವುದಾಗಿ ಘೋಷಿಸಿದ್ದರು. ಆದರೆ, ಖರ್ಗೆ ಸ್ಫರ್ಧಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅವರು ಸ್ಪರ್ಧೆಯಿಂದ ಹಿಂದೆ ಸರಿದ್ದರು.

ಇದನ್ನೂ ಓದಿ | Congress President | ಎಐಸಿಸಿ ಅಧ್ಯಕ್ಷ ಪಟ್ಟ: ಖರ್ಗೆ ನೆತ್ತಿಗೆ ಮುಳ್ಳಿನ ಕಿರೀಟ

Exit mobile version