Site icon Vistara News

Fali Nariman: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಪರ ನಿಂತಿದ್ದ ವಕೀಲ ಫಾಲಿ ನಾರಿಮನ್‌ ಇನ್ನಿಲ್ಲ

Fali Nariman

Senior Supreme Court Lawyer Fali S Nariman Dies At 95

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಹಿರಿಯ ವಕೀಲ, ಕಾನೂನು ಪಾಂಡಿತ್ಯ, ಪ್ರಖರ ವಾದದಿಂದಲೇ ದೇಶಾದ್ಯಂತ ಮನೆಮಾತಾಗಿದ್ದ, ಕರ್ನಾಟಕದ ಜಲವಿವಾದಗಳ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ (Karnataka) ಪರ ವಾದ ಮಂಡಿಸಿದ್ದ ಫಾಲಿ ಎಸ್.‌ ನಾರಿಮನ್‌ (Fali Nariman) (95) ಅವರು ಬುಧವಾರ (ಫೆಬ್ರವರಿ 21) ನಿಧನರಾಗಿದ್ದಾರೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಫಾಲಿ ನಾರಿಮನ್‌ ಅವರ ನಿಧನದ ಕುರಿತು ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಒಂದು ಯುಗದ ಅಂತ್ಯವಾಗಿದೆ. ಫಾಲಿ ನಾರಿಮನ್‌ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಜೀವಂತ ದಂತಕತೆಯಾಗಿದ್ದ ಅವರು ಕಾನೂನು ಕ್ಷೇತ್ರ ಹಾಗೂ ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿಯಾಗಿರುತ್ತಾರೆ. ಎಲ್ಲ ಸಾಧನೆ, ಖ್ಯಾತಿಯ ಹೊರತಾಗಿಯೂ ಅವರು ಇಡೀ ಜೀವನವನ್ನು ತಾವು ನಂಬಿದ ತತ್ವಗಳಿಗೆ ಮೀಸಲಿರಿಸಿದ್ದರು ಎಂಬುದು ಅವರ ಹೆಗ್ಗಳಿಕೆ” ಎಂದು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಪರ ವಾದ ಮಂಡನೆ

ಫಾಲಿ ಎಸ್‌ ನಾರಿಮನ್‌ ಅವರು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಇರುವ ಕಾವೇರಿ ನದಿ ನೀರು ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜ್ಯದ ಪರ ಹಲವು ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC), ಟಿಎಂಎ ಪೈ ಪ್ರಕರಣ, ಕೊಲಿಜಿಯಂ ವ್ಯವಸ್ಥೆ ಸೇರಿ ಹಲವು ಐತಿಹಾಸಿಕ ಪ್ರಕರಣಗಳಲ್ಲಿ ಫಾಲಿ ನಾರಿಮನ್‌ ಅವರು ವಾದ ಮಂಡಿಸಿ ಸೈ ಎನಿಸಿಕೊಂಡಿದ್ದರು. ಇವರ ಪುತ್ರ ರೋಹಿಂಗ್ಟನ್‌ ನಾರಿಮನ್‌ ಅವರು ಕೂಡ ವಕೀಲರಾಗಿದ್ದಾರೆ. ಫಾಲಿ ನಾರಿಮನ್‌ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: Sarekoppa Giddappa: ಶತಾಯುಷಿ ಗೆಂಡ್ಲದ ಗಿಡ್ಡಜ್ಜ ನಿಧನ

ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ 1929ರ ಜನವರಿ 10ರಂದು ಜನಿಸಿದ ಫಾಲಿ ನಾರಿಮನ್‌, 1971ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. 1991ರಿಂದ 2010ರವರೆಗೆ ಭಾರತೀಯ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರೂ ಆಗಿದ್ದರು. ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ (2007) ಹಾಗೂ ಪದ್ಮಭೂಷಣ (1991) ಪ್ರಶಸ್ತಿ ದೊರೆತಿವೆ.

ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ

ಫಾಲಿ ನಾರಿಮನ್‌ ಅವರು ಕಾನೂನು ಪಾಂಡಿತ್ಯದ ಜತೆಗೆ ವ್ಯವಸ್ಥೆ ವಿರುದ್ಧ ಹೋರಾಡುವ ಛಾತಿ ಹೊಂದಿದ್ದರು. 1975ರಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ, ಅದನ್ನು ಪ್ರತಿಭಟಿಸಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಹುದ್ದೆಗೆ ಫಾಲಿ ನಾರಿಮನ್‌ ಅವರು ಕೂಡಲೇ ರಾಜೀನಾಮೆ ನೀಡಿದ್ದರು. ಆ ಮೂಲಕ ಇಂದಿರಾ ಗಾಂಧಿ ಅವರ ವಿರುದ್ಧ ಪ್ರತಿಭಟನೆ ಸಾರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version