ನವದೆಹಲಿ: ಮಧ್ಯಪ್ರಾಚ್ಯದಲ್ಲಿ (Middle East) ಹೆಚ್ಚುತ್ತಿರುವ ಸಂಘರ್ಷದ ಪರಿಸ್ಥಿತಿಯು ಭಾರತೀಯ ಷೇರುಪೇಟೆ (Indian Stock Market) ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಗುರುವಾರವೂ ಷೇರಪೇಟೆ ಋಣಾತ್ಮಕವಾಗಿ ಅಂತ್ಯ ಕಂಡಿದೆ. ಇದರೊಂದಿಗೆ ಸತತವಾಗಿ 6ನೇ ದಿನವು ಷೇರು ಪೇಟೆ ಕುಸಿತವನ್ನು ದಾಖಲಿಸಿದಂತಾಗಿದೆ. ಗುರುವಾರ ಸೆನ್ಸೆಕ್ (Sensex) ಸುಮಾರು 900 ಪಾಯಿಂಟ್ ಕುಸಿದು 64,000ರಲ್ಲಿ ಅಂತ್ಯವಾಗಿದೆ. ಅದೇ ರೀತಿ, ನಿಫ್ಟಿ (Nifty) ಕೂಡ ಋಣಾತ್ಮವಾಗಿ ವ್ಯವಹಾರ ಮುಗಿಸಿದ್ದು, 18,857 ಪಾಯಿಂಟ್‌ಗಳಲ್ಲಿ ಸೆಟಲ್ ಆಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ನಿಧಾನಗತಿಯ ಪ್ರವೃತ್ತಿಗಳ ಜೊತೆಗೆ, ಆಟೋ, ಹಣಕಾಸು ಮತ್ತು ಇಂಧನ ಕಂಪನಿಗಳ ನಷ್ಟ ಮತ್ತು ವಿದೇಶಿ ಹೂಡಿಕೆದಾರರ ತಾಜಾ ಮಾರಾಟವು ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಬಿಎಸ್‌ಇ ಸೆನ್ಸೆಕ್ಸ್ 900.91 ಪಾಯಿಂಟ್‌ಗಳು ಅಥವಾ ಶೇಕಡಾ 1.41 ರಷ್ಟು ಕುಸಿದು 63,148.15 ಅಂಕಗಳಿಗೆ ಸ್ಥಿರವಾಯಿತು. ದಿನದ ಅವಧಿಯಲ್ಲಿ, ಇದು 956.08 ಪಾಯಿಂಟ್‌ಗಳು ಅಥವಾ 1.49 ಶೇಕಡಾ 63,092.98 ಕ್ಕೆ ಕುಸಿದಿದೆ. ನಿಫ್ಟಿ ಕೂಡ ಶೇ.1.39 ಅಥವಾ 263 ಅಂಕ ಕುಸಿದು, 18,857.25 ಅಂಕಗಳಿಗೆ ಸ್ಥಿರವಾಯಿತು.
ಸೆನ್ಸೆಕ್ಸ್ ಕುಸಿತದಲ್ಲಿ ಮಹೀಂದ್ರಾ ಮಹೀಂದ್ರಾ ಷೇರುಗಳು ಹೆಚ್ಚು ಮೌಲ್ಯವನ್ನು ಕಳೆದುಕೊಂಡವು. ನಂತರದ ಸ್ಥಾನದಲ್ಲಿರುವ ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ನೆಸ್ಲೆ, ಜೆಎಸ್‌ಡಬ್ಲ್ಯೂ ಸ್ಟೀಲ್, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಲಾರ್ಸೆನ್ ಆ್ಯಂಡ್ ಟುಬ್ರೋ ಷೇರುಗಳು ನೆಲಕಚ್ಚಿದವು.
ಈ ಸುದ್ದಿಯನ್ನೂ ಓದಿ: Stock Market : ಷೇರುಪೇಟೆಗೆ ಪ್ರವೇಶಿಸಿದ ಬೆಂಗಳೂರಿನ ಗ್ರೀನ್‌ಷೆಫ್ ಅಪ್ಲೈಯನ್ಸಸ್, ಷೇರು ದರ ಎಷ್ಟು?
ಇದಕ್ಕೆ ವಿರುದ್ಧವಾಗಿ ಆ್ಯಕ್ಸಿಸ್ ಬ್ಯಾಂಕ್, ಐಟಿಸಿ, ಎಚ್‌ಸಿಎಲ್ ಟೆಕ್ನಾಲಜಿ, ಎನ್‌ಪಿಟಿಸಿ ಮತ್ತು ಇಂಡಸ್‌ಲ್ಯಾಂಡ್ ಷೇರುಗಳ ಏರಿಕೆ ಕಂಡಿವೆ. ಏಷ್ಯನ್ ಮಾರುಕಟ್ಟೆಗಳಾದ ಸೋಲ್, ಟೋಕಿಯೋ ಮತ್ತು ಹಾಂಕಾಂಗ್ ಕೂಡ ಋಣಾತ್ಮಕವಾಗಿ ತಮ್ಮ ವ್ಯವಹಾರ ಕೊನೆಗೊಗಳಿಸಿದರೆ, ಶಾಂಘೈ ಮಾತ್ರ ಷೇರು ಪೇಟೆ ಏರಿಕೆಯನ್ನು ದಾಖಲಿಸಿದೆ.
ಮತ್ತೊಂದೆಡೆ ಯುರೋಪಿಯನ್ ಮಾರುಕಟ್ಟೆಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ. ಬುಧವಾರ ಅಮೆರಿಕ ಮಾರುಕಟ್ಟೆ ಕೂಡ ಋಣಾತ್ಮಕಾವಾಗಿ ಅಂತ್ಯ ಕಂಡಿದೆ. ಇದೇ ವೇಳೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್ ಬೆಲೆ 89.54 ಡಾಲರ್‌ನಿಂದ ಶೇ.0.65ರಷ್ಟು ಕಡಿಮೆಯಾಗಿದೆ. ವಿನಿಮಯ ಮಾಹಿತಿ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 4236 ಕೋಟಿ ರೂ. ಮಾರುಕಟ್ಟೆಯಿಂದ ವಾಪಸ್ ತೆಗೆದುಕೊಂಡಿದ್ದಾರೆ.