ನವ ದೆಹಲಿ: ಬಿಎಸ್ಇ ಸೆನ್ಸೆಕ್ಸ್ 1,000 ಪಾಯಿಂಟ್ಸ್ ಏರಿಕೆಯಾಗಿದ್ದು (Sensex Jump) 73,574 ಅಂಕಗಳಿಗೆ ತಲುಪಿದೆ. ಎನ್ಎಸ್ಇ ನಿಫ್ಟಿ50 ಶುಕ್ರವಾರದ ವಹಿವಾಟಿನಲ್ಲಿ ಮೊದಲ ಬಾರಿಗೆ 22,300 ಅಂಕಗಳನ್ನು ತಲುಪಿ ಹೊಸ ಗರಿಷ್ಠ ಮಟ್ಟಕ್ಕೇರಿದೆ. ಬಿಎಸ್ಇಯಲ್ಲಿ ಎಲ್ಲಾ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು 3.23 ಲಕ್ಷ ಕೋಟಿ ರೂ.ಗಳಿಂದ 391.18 ಲಕ್ಷ ಕೋಟಿ ರೂ.ಗೆ ಏರಿದೆ. 2023-24ರ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಜಿಡಿಜಿ ನಿರೀಕ್ಷೆ ಮೀರಿ ಶೇಕಡಾ 8.3ರಷ್ಟು ದಾಖಲಾಗಿರುವ ಕಾರಣ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಚೈತನ್ಯ ಕಂಡಿದೆ.
ಸೆನ್ಸೆಕ್ಸ್ 30 ಷೇರುಗಳ ಪೈಕಿ ಟಾಟಾ ಸ್ಟೀಲ್, ಮಹೀಂದ್ರಾ & ಮಹೀಂದ್ರಾ ಮತ್ತು ಜೆಎಸ್ಡಬ್ಲ್ಯು ಸ್ಟೀಲ್ ತಲಾ 2 ಪ್ರತಿಶತದಷ್ಟು ಏರಿಕೆ ಕಂಡಿವೆ. ಟಾಟಾ ಮೋಟಾರ್ಸ್, ಮಾರುತಿ, ಎಲ್ಆ್ಯಂಡ್ಡಿ ಮತ್ತು ಪವರ್ ಗ್ರಿಡ್ ಇತರ ಪ್ರಮುಖ ಲಾಭ ಗಳಿಸಿದ ಸಂಸ್ಥೆಗಳು. ಸನ್ ಫಾರ್ಮಾ ಶೇಕಡಾ 0.8 ರಷ್ಟು ಕುಸಿದಿದೆ. ಬಿಎಸ್ಇ ಮಿಡ್ಕ್ಯಾಫ್ ಸೂಚ್ಯಂಕವು ಶೇಕಡಾ 0.7 ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಶೇಕಡಾ 1 ರಷ್ಟು ಏರಿಕೆಯಾಗಿದೆ.
ಮಾರುಕಟ್ಟೆ ಏರಿಕೆಗೆ ಪ್ರಮುಖ ಕಾರಣಗಳೇನು?
ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 8.4 ರಷ್ಟು ಬೆಳೆದಿದೆ. ಇದು ಆರು ತ್ರೈಮಾಸಿಕಗಳಲ್ಲಿ ಅತ್ಯಂತ ವೇಗದ ಬೆಳವಣಿಗೆಯಾಗಿದೆ. ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಯಿಂದಾಗಿ ಈ ಬೆಳವಣಿಗೆಯಾಗಿದೆ.
ಇದನ್ನೂ ಓದಿ : Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಉತ್ಸಾಹಭರಿತ ಜಾಗತಿಕ ಮಾರುಕಟ್ಟೆಗಳು
ಸಕಾರಾತ್ಮಕ ಜಾಗತಿಕ ಮಾರುಕಟ್ಟೆಯೂ ಷೇರು ಸೂಚ್ಯಂಕಗಳು ಏರಲು ಸಹಾಯ ಮಾಡಿದವು. ವಾಲ್ ಸ್ಟ್ರೀಟ್ ಷೇರುಗಳು ರಾತ್ರೋರಾತ್ರಿ ಭಾರೀ ಏರಿಕೆ ಕಂಡಿತ್ತು. ಜಪಾನ್ ನ ನಿಕೈ ಮಾರುಕಟ್ಟೆ ಹೊಸ ದಾಖಲೆಯ ಎತ್ತರವನ್ನು ಮುಟ್ಟಿದೆ. ಚೀನಾದ ಸಿಎಸ್ಐ 300 ಶೇಕಡಾ 0.2 ರಷ್ಟು ಏರಿಕೆಯಾಗಿದೆ.
ನಿರೀಕ್ಷೆಗೂ ಮೀರಿ ಭಾರತದ ಜಿಡಿಪಿ ಬೆಳವಣಿಗೆ
ನವದೆಹಲಿ : ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP Growth) ಶೇಕಡಾ 8.4 ಕ್ಕೆ ಏರಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಗುರುವಾರ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.4.3ರಷ್ಟಿತ್ತು. ಹೀಗಾಗಿ ನಿರೀಕ್ಷೆ ಮೀರಿದ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.
2023-24ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ದರಗಳಲ್ಲಿ ಜಿಡಿಪಿ 43.72 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದೆ. ಇದು 2022-23 ರ ಮೂರನೇ ತ್ರೈಮಾಸಿಕದಲ್ಲಿ 40.35 ಲಕ್ಷ ಕೋಟಿ ರೂ ಆಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ 8.4 ರಷ್ಟು ಬೆಳವಣಿಗೆಯ ದರವನ್ನು ತೋರಿಸುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ವಿಶ್ಲೇಷಕರು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರು. ಆದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶವು ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸಿದೆ.
ನಿರ್ಮಾಣ ಕ್ಷೇತ್ರದ ಎರಡಂಕಿ ಬೆಳವಣಿಗೆ ದರ (ಶೇ.10.7), ಉತ್ಪಾದನಾ ವಲಯದ ಬೆಳವಣಿಗೆ ದರ (ಶೇ.8.5) 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ಸರಕಾರ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣವೇ ಈ ಕ್ಷೇತ್ರಗಳಲ್ಲಿನ ಬೆಳವಣಿಗೆಯಾಗಿದೆ.