Site icon Vistara News

MLAs Poaching Case | ಆಪರೇಷನ್‌ ಕಮಲ ಆರೋಪ, ಸಿಬಿಐ ತನಿಖೆಗೆ ಕೇಸ್‌ ವರ್ಗ, ತೆಲಂಗಾಣ ಸಿಎಂ ಕೆಸಿಆರ್‌ಗೆ ಹಿನ್ನಡೆ

brs poll manifesto, Free insurance, rss 400 lpg cylinder and many more scheme

ಹೈದರಾಬಾದ್:‌ ತೆಲಂಗಾಣದಲ್ಲಿ ಭಾರತ್‌ ರಾಷ್ಟ್ರ ಸಮಿತಿ (BRS) ಶಾಸಕರ ಖರೀದಿಗೆ ಬಿಜೆಪಿಯು ಆಪರೇಷನ್‌ ಕಮಲಕ್ಕೆ ಯತ್ನಿಸುತ್ತಿದೆ ಎಂಬ ಪ್ರಕರಣದಲ್ಲಿ (MLAs Poaching Case) ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಹಿನ್ನಡೆಯಾಗಿದೆ. ಆಪರೇಷನ್‌ ಕಮಲ ಪ್ರಕರಣವನ್ನು ತೆಲಂಗಾಣ ಹೈಕೋರ್ಟ್‌ ಸಿಬಿಐಗೆ ವಹಿಸಿದೆ. ಹಾಗೆಯೇ, ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ಕೋರ್ಟ್‌ ವಿಸರ್ಜಿಸಿದೆ. ಇದರಿಂದ ಕೆಸಿಆರ್‌ಗೆ ಭಾರಿ ಹಿನ್ನಡೆಯಾದಂತಾಗಿದೆ.

ತೀರ್ಪು ಸ್ವಾಗತಾರ್ಹ ಎಂದ ಬಿಜೆಪಿ
ಶಾಸಕರ ಖರೀದಿಗೆ ಯತ್ನ ಪ್ರಕರಣವನ್ನು ಸಿಬಿಐಗೆ ವಹಿಸಿರುವ ತೆಲಂಗಾಣ ಹೈಕೋರ್ಟ್‌ ತೀರ್ಮಾನವನ್ನು ಬಿಜೆಪಿ ನಾಯಕರೂ ಆದ ವಕೀಲ ರಾಮಚಂದ್ರ ರಾವ್‌ ಸ್ವಾಗತಿಸಿದ್ದಾರೆ. ಅತ್ತ, ಕೇಸ್‌ ವರ್ಗಾವಣೆ ಕುರಿತು ಬಿಆರ್‌ಎಸ್‌ ಸಾಮಾಜಿಕ ಜಾಲತಾಣಗಳ ಸಂಚಾಲಕ ಕೃಷಾಂಕ್‌ ಪ್ರತಿಕ್ರಿಯಿಸಿದ್ದು, “ಕೇಸ್‌ ವರ್ಗಾವಣೆ ವಿಚಾರದಲ್ಲಿ ಬಿಜೆಪಿ ನಡೆಸಿದ ಸತತ ಏಳು ಪ್ರಯತ್ನದ ಬಳಿಕ ವರ್ಗಾವಣೆಯಾಗಿದೆ. ಇದರಿಂದ, ಬಿಲದಲ್ಲಿರುವ ಇಲಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ” ಎಂದು ವ್ಯಂಗ್ಯ ಮಾಡಿದ್ದಾರೆ.

ಏನಿದು ಪ್ರಕರಣ?
ಬಿಆರ್‌ಎಸ್‌ನ ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸಲಾಗುತ್ತಿದೆ ಎಂಬ ಆರೋಪದಲ್ಲಿ ಹೈದರಾಬಾದ್‌ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರು ಬಿಜೆಪಿಯವರೇ ಆಗಿದ್ದು, ಕೆ.ಚಂದ್ರಶೇಖರ್‌ ರಾವ್‌ ಅವರ ಸರ್ಕಾರವನ್ನು ಕೆಡವಲು ಬಿಜೆಪಿಯು 100 ಕೋಟಿ ರೂ., ಉತ್ತಮ ಸ್ಥಾನಮಾನ ಹಾಗೂ ಗುತ್ತಿಗೆ ನೀಡಿಕೆ ಸೇರಿ ಹಲವು ಆಮಿಷ ಒಡ್ಡಿದೆ ಎಂದು ಬಿಆರ್‌ಎಸ್‌ ಆರೋಪಿಸಿತ್ತು. ಹಾಗೆಯೇ, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು.

ಎಸ್‌ಐಟಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೂ ನೋಟಿಸ್‌ ನೀಡಿತ್ತು. ಆದರೆ, ನೋಟಿಸ್‌ಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಈಗ ನ್ಯಾಯಾಲಯವು ಎಸ್‌ಐಟಿಯನ್ನೇ ವಿಸರ್ಜಿಸಿದ ಕಾರಣ ಬಿ.ಎಲ್‌.ಸಂತೋಷ್‌ ಅವರಿಗೂ ಪ್ರಕರಣದಲ್ಲಿ ರಿಲೀಫ್‌ ಸಿಕ್ಕಂತಾಗಿದೆ.

ಇದನ್ನೂ ಓದಿ | BL Santosh | SIT ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್‌ ತಡೆಯಾಜ್ಞೆ, ಸದ್ಯಕ್ಕಿಲ್ಲ ಬಿ.ಎಲ್. ಸಂತೋಷ್‌ ವಿಚಾರಣೆ

Exit mobile version