Site icon Vistara News

ಬುದ್ಧಿಗೇಡಿತನ; ತಮ್ಮನ್ನು ಟಿಎಂಸಿ ಎಂಪಿ ಅಣಕಿಸಿದ್ದನ್ನು ವಿಡಿಯೊ ಮಾಡಿದ ರಾಹುಲ್ ಗಾಂಧಿಗೆ ಉಪ ರಾಷ್ಟ್ರಪತಿ ತರಾಟೆ

rahul gandhi recording tmc mp

ಹೊಸದಿಲ್ಲಿ: ಸಂಸತ್ತಿನ ಹೊರಗೆ ತಮ್ಮನ್ನು ಅಣಕಿಸಿದ ಟಿಎಂಸಿ ಸಂಸದನ ಕೃತ್ಯವನ್ನು ತಮ್ಮ ಫೋನ್ ಕ್ಯಾಮೆರಾದಲ್ಲಿ ರೆಕಾರ್ಡ್‌ ಮಾಡಿಕೊಂಡ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ನಡತೆಯನ್ನು ಉಪ ರಾಷ್ಟ್ರಪತಿ, ರಾಜ್ಯಸಭೆಯ ಅಧ್ಯಕ್ಷ ಜಗದೀಪ್‌ ಧನ್‌ಕರ್‌ (Jagdeep Dhankhar) ಕಟುವಾಗಿ ಟೀಕಿಸಿದ್ದು, ʼನಾಚಿಕೆಗೇಡಿನ ಕೃತ್ಯʼ ಎಂದು ಕರೆದಿದ್ದಾರೆ.

ಲೋಕಸಭೆ ಭದ್ರತೆ ಲೋಪದ ಕುರಿತು ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಆಗ್ರಹಿಸಿ ವಿಪಕ್ಷ ಸದಸ್ಯರು ಎಬ್ಬಿಸಿದ ಗದ್ದಲದ ಸಂದರ್ಭ ಅಶಿಸ್ತಿನ ವರ್ತನೆಗಾಗಿ ಸಂಸತ್ತಿನಿಂದ 49 ಸದಸ್ಯರನ್ನು ಹೊರಹಾಕಲಾಗಿತ್ತು. ಇದನ್ನು ವಿರೋಧಿಸಿ ಸಂಸತ್ತಿನ ಹೊರಗೆ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷ ಸದಸ್ಯರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭೆ ಅಧ್ಯಕ್ಷರನ್ನು ಅಣಕಿಸಿ ತೋರಿಸಿದ್ದು, ಇದನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್‌ನ ಇನ್‌ಸ್ಟಗ್ರಾಂ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಬಳಿಕ ಅದನ್ನು ಡಿಲೀಟ್‌ ಮಾಡಲಾಗಿದೆ.

ಸಂಸತ್ತಿನ ಹೊರಗೆ ತಮ್ಮನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ತಾವು ಅನುಭವಿಸಿದ ನೋವನ್ನು ಉಪ ರಾಷ್ಟ್ರಪತಿ ಸದನದಲ್ಲಿ ಬುಧವಾಋ ಹಂಚಿಕೊಂಡರು. ಇದು ರಾಜ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದರು. “ಸಂಸತ್ತಿನ ಹಿರಿಯ ಸದಸ್ಯರೊಬ್ಬರು ತಮ್ಮನ್ನು ಅಣಕವಾಡಿ, ಅದನ್ನು ಇನ್ನೊಬ್ಬ ಸದಸ್ಯರನ್ನು ವೀಡಿಯೊಗ್ರಾಫ್ ಮಾಡುತ್ತಾರೆ. ಏಕೆ? ನಾನು ತುಂಬಾ ನೋವನ್ನು ಅನುಭವಿಸಿದ್ದೇನೆ. ಈ ಸದನದ ಬಗ್ಗೆ ಜನ ಯಾವ ರೀತಿಯ ಭಾವನೆ ಹೊಂದಿದ್ದಾರೆಂದು ನಿಮಗೆ ತಿಳಿದಿಲ್ಲ. ಇಂದು ನಾವು ಅದರ ಅತ್ಯಂತ ಕೆಳಮಟ್ಟವನ್ನು ನೋಡುತ್ತಿದ್ದೇವೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಸಂಸದ ಪಿ ಚಿದಂಬರಂ ಅವರನ್ನು ಉದ್ದೇಶಿಸಿ ಧನ್‌ಕರ್‌ ಮಾತನಾಡಿದರು. “ಮಿಸ್ಟರ್ ಚಿದಂಬರಂ, ನೀವು ತುಂಬಾ ಹಿರಿಯ ಸದಸ್ಯರು. ನಿಮ್ಮ ಪಕ್ಷದ ಹಿರಿಯ ಸಂಸದರೊಬ್ಬರು ಸ್ಪೀಕರ್‌ ಆದ ನನ್ನನ್ನು ಗೇಲಿ ಮಾಡುವ ವೀಡಿಯೊ ಮಾಡಿದರು. ನನ್ನ ಹೃದಯದಲ್ಲಿ ಏನಾಗುತ್ತಿದೆ ಎಂದು ಊಹಿಸಿ. ಇದು ವೈಯಕ್ತಿಕ ದಾಳಿ. ಇದು ಕೇವಲ ರೈತ ಸಮುದಾಯಕ್ಕೆ ಮಾಡಿದ ಅವಮಾನವಲ್ಲ; ರಾಜ್ಯಸಭಾ ಅಧ್ಯಕ್ಷ ಸ್ಥಾನಕ್ಕೆ ಮಾಡಿದ ಅವಮಾನ. ಅದೂ ಕೂಡ ಇಷ್ಟು ದಿನ ಆಡಳಿತ ನಡೆಸಿದ ರಾಜಕೀಯ ಪಕ್ಷದ ಸದಸ್ಯರಿಂದ ನಡೆದಿದೆ ಎಂಬುದು ನಂಬಲಾಗುತ್ತಿಲ್ಲ” ಎಂದು ಆಕ್ಷೇಪಿಸಿದರು.

ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಕಾಂಗ್ರೆಸ್ ಪಕ್ಷದ ಕ್ರಮವನ್ನು ಅವರು “ನಾಚಿಕೆಗೇಡಿನ ಕೃತ್ಯ” ಎಂದು ಕರೆದಿದ್ದಾರೆ. “ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪಕ್ಷವು ವೀಡಿಯೊವನ್ನು ಪೋಸ್ಟ್ ಮಾಡಿತ್ತು. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ನೀವು ಪಕ್ಷದ ಅಧಿಕೃತ ವಕ್ತಾರರನ್ನು ಬಳಸಿಕೊಂಡು ನನ್ನನ್ನು, ನನ್ನ ರೈತನ ಹಿನ್ನೆಲೆಯನ್ನು, ಜಾಟ್‌ ಹಿನ್ನೆಲೆಯನ್ನು, ರಾಜ್ಯಸಭೆ ಅಧ್ಯಕ್ಷ ಸ್ಥಾನವನ್ನು ಅವಮಾನಿಸಿದ್ದೀರಿ” ಎಂದು ಅವರು ಹೇಳಿದರು.

ಅಮಾನತುಗೊಂಡ ವಿರೋಧ ಪಕ್ಷದ ಸಂಸದರಲ್ಲಿ ಒಬ್ಬರಾದ ಬ್ಯಾನರ್ಜಿ ಅವರು ಸಂಸತ್ತಿನ ಮಕರ ದ್ವಾರದಲ್ಲಿ ರಾಜ್ಯಸಭಾ ಅಧ್ಯಕ್ಷರನ್ನು ಅಪಹಾಸ್ಯ ಮಾಡುತ್ತಿರುವುದು ಹಾಗೂ ಈ ಕೃತ್ಯವನ್ನು ಗಾಂಧಿ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿರುವುದು ನಿನ್ನೆ ಕಂಡುಬಂದಿತ್ತು. ನಂತರ ಮಧ್ಯಾಹ್ನ 12 ಗಂಟೆಗೆ ಸದನ ಮತ್ತೆ ಸೇರಿದಾಗ ಇದನ್ನು ಧನ್‌ಕರ್‌ ತೀವ್ರವಾಗಿ ಖಂಡಿಸಿದ್ದರು. “ಸಭಾಧ್ಯಕ್ಷರ ಕಚೇರಿ, ರಾಜ್ಯಸಭೆ ಅಧ್ಯಕ್ಷರ ಸ್ಥಾನ ತುಂಬಾ ವಿಭಿನ್ನವಾದುದು. ಈಂಥ ಸ್ಥಾನವನ್ನು ಅಣಕಿಸುವುದು ಎಷ್ಟು ಹಾಸ್ಯಾಸ್ಪದ, ಎಷ್ಟು ನಾಚಿಕೆಗೇಡಿನ ಕೃತ್ಯ! ಇದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದರು.

ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಮಾತನಾಡಿ, ಟಿಎಂಸಿ ಸಂಸದರ ಕಾರ್ಯವೈಖರಿ ನಾಚಿಕೆಗೇಡು ಎಂದಿದ್ದಾರೆ. “ಸಂಸತ್ತು ನಾಟಕಕ್ಕೆ ಜಾಗವಲ್ಲ. ನಿಮ್ಮ ವಿರೋಧವನ್ನು ದಾಖಲಿಸಲು ವಿಧಾನಗಳಿವೆ. ಆದರೆ ಉಪರಾಷ್ಟ್ರಪತಿಯನ್ನು ಅಪಹಾಸ್ಯ ಮಾಡುವುದು ಮತ್ತು ಅವಮಾನಿಸುವುದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲ” ಎಂದು ಅವರು ಹೇಳಿದರು.

“ಪ್ರತಿಪಕ್ಷಗಳು ಸಂಸದೀಯ ಪ್ರಜಾಪ್ರಭುತ್ವವನ್ನು ಹೇಗೆ ಹಾಳು ಮಾಡುತ್ತಿವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಸಂಸತ್ತಿನ ಆವರಣದಲ್ಲಿ ಉಪರಾಷ್ಟ್ರಪತಿಯನ್ನು ಅಣಕಿಸುತ್ತಿದ್ದಾರೆ ಮತ್ತು ರಾಹುಲ್ ಗಾಂಧಿ ವೀಡಿಯೊ ರೆಕಾರ್ಡ್ ಮಾಡುತ್ತಿದ್ದಾರೆ; ಇದಕ್ಕಿಂತ ದುರದೃಷ್ಟಕರ ಮತ್ತೊಂದಿಲ್ಲ,” ಎಂದು ಅವರು ಹೇಳಿದರು.

ಇದನ್ನೂ ಓದಿ: Digital Sansad: ಈಗ ಸಂಸತ್ತು ಕೂಡ ಡಿಜಿಟಲ್‌, ಟ್ಯಾಬ್ಲೆಟ್‌ ನೋಡಿಯೇ ಸದಸ್ಯರ ಹೆಸರು ಕೂಗಿದ ಧನ್‌ಕರ್

Exit mobile version