Site icon Vistara News

ಶಿಂಧೆ ಸಿಎಂ ಆದ ಬೆನ್ನಲ್ಲೇ ಶರದ್‌ ಪವಾರ್‌ಗೆ ಬಂತು ಐಟಿ ‌ ʻಲವ್‌ ಲೆಟರ್‌ʼ, ಇ.ಡಿ ಮುಂದೆ ಹಾಜರಾದ ಸಂಜಯ್‌ ರಾವತ್‌

ಮುಂಬಯಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರಕಾರ ಪತನಗೊಂಡು ಬಿಜೆಪಿ- ಶಿವಸೇನೆಯ ಬಂಡಾಯ ಬಣದ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಿಗೇ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಬಂದಿದೆ. ಇದು ಕಾಕತಾಳೀಯವೇ ಆಗಿರಬಹುದಾದರೂ ಮಹಾರಾಷ್ಟ್ರದ ಒಟ್ಟಾರೆ ಬೆಳವಣಿಗೆ ಹಿನ್ನೆಲೆಯಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ಈ ನೋಟಿಸನ್ನು ʻಲವ್‌ ಲೆಟರ್‌ʼ ಎಂದು ಶರದ್‌ ಪವಾರ್‌ ವ್ಯಾಖ್ಯಾನಿಸಿದ್ದಾರೆ.

ಶರದ್‌ ಪವಾರ್‌ ಅವರು 2004, 2009, 2014, 2020ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ಗಳಲ್ಲಿ ಕಂಡ ಕೆಲವು ದೋಷಗಳಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಈ ನೋಟಿಸ್‌ ಜಾರಿ ಮಾಡಿದೆ.

ಈ ನೋಟಿಸ್‌ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ʻʻಇತ್ತೀಚಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿರುವುದರ ಫಲಿತಾಂಶವನ್ನು ನಾವು ಕಾಣುತ್ತಿದ್ದೇವೆ. ಹಲವು ಶಾಸಕರಿಗೆ ಈಗಾಗಲೇ ನೋಟಿಸ್‌ ಬಂದಿದೆ. ಇದು ಈಗಷ್ಟೇ ಶುರುವಾದ ಕ್ರಮ. ನಮಗೆ ಐದು ವರ್ಷದ ಹಿಂದೆ ಜಾರಿ ನಿರ್ದೇಶನಾಲಯದ ಹೆಸರೆಲ್ಲ ಗೊತ್ತಿರಲಿಲ್ಲ. ಈಗ ಹಳ್ಳಿ ಹಳ್ಳಿಗಳಲ್ಲಿ ಜನ ಇದರ ಬಗ್ಗೆ ಮಾತನಾಡುತ್ತಾರೆ. ಇ.ಡಿ ನಿಮ್ಮ ಬೆನ್ನ ಹಿಂದಿದೆ ಎಂದು ಗೇಲಿ ಮಾಡುತ್ತಾರೆ,ʼʼ ಎಂದು ಹೇಳಿದ್ದಾರೆ.

ʻʻಈ ವ್ಯವಸ್ಥೆಗಳನ್ನು ಭಿನ್ನ ರಾಜಕೀಯ ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿಗಳ ಮೇಲೆ ಬಳಸಲಾಗುತ್ತಿದೆ. ನನಗೂ ಇನ್‌ಕಂ ಟ್ಯಾಕ್ಸ್‌ ಕಚೇರಿಯಿಂದ ಇಂಥಹುದೇ ಲವ್‌ ಲೆಟರ್‌ ಬಂದಿದೆ. 2004 ಲೋಕಸಭಾ ಚುನಾವಣೆಯ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅವರು ಈಗ ತಪ್ಪು ಹುಡುಕಿದ್ದಾರೆ,ʼʼ ಎಂದು ತಮಾಷೆ ಮಾಡಿದ್ದಾರೆ.

ಇ.ಡಿ ಮುಂದೆ ಹಾಜರಾದ ಸಂಜಯ್‌ ರಾವತ್‌
ಪತ್ರ ಚಾಲ್‌ ಭೂಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ನೋಟಿಸ್‌ ಪಡೆದಿರುವ ಶಿವಸೇನಾ ಸಂಸದ ಸಂಜಯ್‌ ರಾವತ್‌ ಅವರು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದಾರೆ. ಶಿವಸೇನಾ ಬಂಡಾಯದ ಹೋರಾಟ ಉತ್ತುಂಗದಲ್ಲಿದ್ದಾಗ ಕಳೆದ ಸೋಮವಾರ ಅವರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಈ ಹಂತದಲ್ಲಿ ಯಾವ ಕಾರಣಕ್ಕೂ ತನಿಖೆಗೆ ಹಾಜರಾಗುವುದಿಲ್ಲ. ನನಗೆ ಪಕ್ಷದ ಜವಾಬ್ದಾರಿ ಮುಖ್ಯ ಎಂದು ಹೇಳಿದ್ದರು.

ಶುಕ್ರವಾರ ಕಚೇರಿಗೆ ಹಾಜರಾಗುವ ಮುನ್ನ ಮಾತನಾಡಿದ ಅವರು, ʻʻನನಗೆ ಯಾವ ಭಯವೂ ಇಲ್ಲ. ಯಾಕೆಂದರೆ ನಾನು ಬದುಕಿನಲ್ಲಿ ಯಾವ ತಪ್ಪೂ ಮಾಡಿಲ್ಲ. ಇದು ರಾಜಕೀಯ ವಿಚಾರವಾಗಿದ್ದರೆ ಅದು ಗೊತ್ತಾಗುತ್ತದೆ. ಸದ್ಯ ನಾನು ಒಂದು ತಟಸ್ಥ ಏಜೆನ್ಸಿ ಮುಂದೆ ಹೋಗುತ್ತಿದ್ದೇನೆ ಎನ್ನುವ ನಂಬಿಕೆಯನ್ನುಹೊಂದಿದ್ದೇನೆ. ಅವರನ್ನು ಸಂಪೂರ್ಣ ನಂಬುತ್ತೇನೆʼ ಎಂದರು.

ಇದನ್ನೂ ಓದಿ| Maha politics: ಜುಲೈ 4ರಂದು ಶಿಂಧೆ ವಿಶ್ವಾಸಮತ ಯಾಚನೆ, ತಡೆ ನೀಡುವಂತೆ ಸುಪ್ರೀಂ ಮೊರೆ ಹೊಕ್ಕ ಉದ್ಧವ್‌ ಟೀಮ್‌

Exit mobile version