Site icon Vistara News

Shehzad Poonawalla: ಬಾಂಗ್ಲಾದಂತೆ ಭಾರತದಲ್ಲಿಯೂ ಹಿಂಸಾಚಾರ; ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ಹೇಳಿಕೆಗೆ ಬಿಜೆಪಿ ಕಿಡಿ

Shehzad Poonawalla

ನವದೆಹಲಿ: ನೆರೆಯ ಬಾಂಗ್ಲಾದೇಶದಂತೆಯೇ ಭಾರತದಲ್ಲಿಯೂ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ (Salman Khurshid) ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ (Shehzad Poonawalla) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ ಮತ್ತು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಭಾರತದಲ್ಲಿಯೂ ಸಂಭವಿಸಬಹುದು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಮಂಗಳವಾರ ವಿವಾದವನ್ನು ಹುಟ್ಟು ಹಾಕಿದ್ದಾರೆ. ಶಿಕ್ಷಣ ತಜ್ಞ ಮುಜಿಬುರ್ ರೆಹಮಾನ್ ಅವರ ‘ಶಿಕ್ವಾ-ಎ-ಹಿಂದ್: ದಿ ಪೊಲಿಟಿಕಲ್ ಫ್ಯೂಚರ್ ಆಫ್ ಇಂಡಿಯನ್ ಮುಸ್ಲಿಮ್ಸ್’ (Shikwa-e-Hind: The Political Future of Indian Muslims) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ʼʼಮೇಲ್ನೋಟಕ್ಕೆ ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂದು ಕಾಣಿಸಬಹುದು. ಇಲ್ಲಿ ಎಲ್ಲವೂ ಸರಿ ಇದೆ ಎಂದು ಎಲ್ಲರೂ ಭಾವಿಸಬಹುದು. 2024ರ ಗೆಲುವು ಅತ್ಯಲ್ಪ ಎಂದು ನಂಬುವವರಿದ್ದಾರೆ. ಇನ್ನೂ ಹೆಚ್ಚಿನದು ಆಗಬೇಕಿದೆ. ಆದರೆ ವಾಸ್ತವ ಬೇರೆಯದೇ ಇದೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ್ದು, ನಮ್ಮ ದೇಶದಲ್ಲಿಯೂ ನಡೆಯಬಹುದುʼʼ ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದದ್ದರು.

ದಾಳಿ ನಡೆಯಬೇಕೆಂದು ಅವರು ಬಯಸುತ್ತಾರೆಯೆ?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಕಿಡಿಕಾರಿರುವ ಶೆಹಜಾದ್ ಪೂನಾವಾಲಾ ಅವರು, “ಮೋದಿ ಮೇಲಿನ ದ್ವೇಷದ ಕಾರಣಕ್ಕೆ ಅವರು ಭಾರತವನ್ನೇ ವಿರೋಧಿಸುತ್ತಿದ್ದಾರೆ. ಸಲ್ಮಾನ್ ಖುರ್ಷಿದ್ / ಕಾಂಗ್ರೆಸ್ ನಾಯಕರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಭಾರತದಲ್ಲಿಯೂ ನಡೆಯುವಂತೆ ಪ್ರಚೋದಿಸುತ್ತಿದ್ದಾರೆಯೇ? ಭಾರತದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯಬೇಕೆಂದು ಅವರು ಬಯಸುತ್ತಾರೆಯೇ? ಅವರು ಯಾರಿಗೆ ಸಂಕೇತ ನೀಡುತ್ತಿದ್ದಾರೆ? ಸಲ್ಮಾನ್ ಖುರ್ಷಿದ್ ಕುಟುಂಬ ಈಗಾಗಲೇ ಒಮ್ಮೆ ವೋಟ್ ಜಿಹಾದ್ ಎಂದು ಹೇಳಿದೆ. ಇದು ಭಾರತದ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವುದಿಲ್ಲವೇ? ಕಾಂಗ್ರೆಸ್ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ?ʼʼ ಎಂದು ಬರೆದುಕೊಂಡಿದ್ದಾರೆ.

ಸದ್ಯ ಕಾಂಗ್ರೆಸ್‌ ಸಲ್ಮಾನ್ ಖುರ್ಷಿದ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ʼʼಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲʼʼ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: Bangladesh Unrest: ಭಾರತದಲ್ಲೂ ಬಾಂಗ್ಲಾ ಮಾದರಿ ಗಲಭೆಗೆ ಸಂಚು; ಪಾಕ್‌ ಮಾಜಿ ಕ್ರಿಕೆಟಿಗನ ಸ್ಫೋಟಕ ಮಾಹಿತಿ

ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ?

ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ದೀರ್ಘಕಾಲದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ್ದು, ಬಾಂಗ್ಲಾದೇಶವು ಪ್ರಕ್ಷುಬ್ಧವಾಗಿದೆ. ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಆರಂಭವಾದ ಪ್ರತಿಭಟನೆ ಹಿಂಸಾರೂಪ ತಾಳಿದೆ. ಈಗಾಗಲೇ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸದ್ಯ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಭಾರತ ಬಾಂಗ್ಲಾದೇಶದಲ್ಲಿರುವ ತನ್ನ ಎಲ್ಲ ಪ್ರಜೆಗಳಿಗೆ ತೀವ್ರ ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ. ಈ ಮಧ್ಯೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ (Muhammad Yunus) ಅವರನ್ನು ನೇಮಕ ಮಾಡಲಾಗಿದೆ.

Exit mobile version