ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ (Sheikh Abdul Rashid) ಸಂಸದನಾಗಿ ಪ್ರಮಾಣವಚನ ಸ್ವೀಕರಿಸಲು ಎನ್‌ಐಎ ಅನುಮತಿ ನೀಡಿದೆ. ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸಿದ ಆರೋಪ ಎದುರಿಸುತ್ತಿರುವ ಎಂಜಿನಿಯರ್ ರಶೀದ್ ಎಂದೇ ಜನಪ್ರಿಯವಾಗಿರುವ ಶೇಖ್ ಅಬ್ದುಲ್ ರಶೀದ್ ಜು. 25ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಬಗ್ಗೆ ದಿಲ್ಲಿ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಚಂದರ್ ಜಿತ್ ಸಿಂಗ್(Chander Jit Singh) ಆದೇಶ ಹೊರಡಿಸಲಿದ್ದಾರೆ.
ಜೈಲಿನಲ್ಲಿರುವ ಕಾರಣ ಜೂ.24ರಂದು ನಡೆದ ಪ್ರಮಾಣವಚನ ಸ್ವೀಕಾರ ಸಭಾರಂಭದಲ್ಲಿ ರಶೀದ್‌ಗೆ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಮಾಣವಚನಕ್ಕೆ ಅವಕಾಶ ಕಲ್ಪಿಸುವಂತೆ ಆತ ಕೋರ್ಟ್ ಮೊರೆ ಹೋಗಿದ್ದು, ಇದಕ್ಕೆ ಪ್ರತಿಕ್ರಿಯಿಸುವಂತೆ ಕೋರ್ಟ್ ಹೇಳಿತ್ತು. 2017 ರ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿರುವ ಬಾರಾಮುಲ್ಲಾ ಸಂಸದ ರಶೀದ್ ಅವರು ಪ್ರಮಾಣ ವಚನ ಸ್ವೀಕರಿಸಲು ಮತ್ತು ಸಂಸತ್ತಿನ ಕಾರ್ಯಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಪರ್ಯಾಯವಾಗಿ ಕಸ್ಟಡಿ ಪೆರೋಲ್ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.
ಇದೀಗ ಎನ್‌ಐಎ ಅನುಮತಿ ನೀಡಿದ್ದು, ಸೋಮವಾರ, ಎನ್‌ಐಎ ಪರ ವಕೀಲರು ರಶೀದ್ ಪ್ರಮಾಣ ವಚನ ಸ್ವೀಕಾರವು ಮಾಧ್ಯಮಗಳೊಂದಿಗೆ ಮಾತನಾಡದಂತಹ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದರು. ಒಂದು ದಿನದೊಳಗೆ ರಶೀದ್ ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ಯಾರು ಈ ಶೇಖ್ ಅಬ್ದುಲ್ ರಶೀದ್?
ಇಂಜಿನಿಯರ್ ರಶೀದ್ ಪ್ರಸ್ತುತ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕನಾಗಿದ್ದ ರಶೀದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಆತ ನ್ಯಾಷನಲ್ ಕಾನ್ಫರೆನ್ಸ್‌ನ ಓಮರ್ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ 4,7,2481 ಮತಗಳನ್ನು ಗಳಿಸಿದ್ದಾನೆ. ಒಮ್ಮೆಯೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡದ ರಶೀದ್ 2,04,142 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾನೆ.
ಅಮೃತ್ ಸಿಂಗ್ ಪ್ರಮಾಣವಚನ ಸ್ವೀಕರಿಸಿಲ್ಲ
ಇನ್ನು ಜೈಲಿನಿಂದಲೇ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಕೂಡ ಪ್ರಮಾಣವಚನ ಸ್ವೀಕರಿಸಿಲ್ಲ. ಅಮೃತಸರದ ಜಲ್ಲುಪುರ್ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್, 12ನೇ ತರಗತಿವರೆಗೆ ಓದಿದ್ದಾನೆ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಕೆಲವು ದಿನಗಳ ಹಿಂದೆ- ʼವಾರಿಸ್ ಪಂಜಾಬ್ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ. ಅಮೃತ್‌ಪಾಲ್ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ್ದ.
ಹಲವು ಸಮಯದಿಂದ ಆತ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದ. 2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. 2022ರಲ್ಲಿ ಪಂಜಾಬ್‌ನಲ್ಲಿ ಅಮೃತ್‌ಪಾಲ್‌ನನ್ನು ಅರೆಸ್ಟ್ ಮಾಡಲಾಗಿತ್ತು.
ಇದನ್ನೂ ಓದಿ: Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!