ನವದೆಹಲಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯು (Bangladesh Protest) ನಾಗರಿಕ ದಂಗೆಯಾಗಿ ಬದಲಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಶೇಖ್ ಹಸೀನಾ (Sheikh Hasina), ಭಾರತಕ್ಕೆ ಬಂದಿಳಿದಿದ್ದಾರೆ. ದೆಹಲಿಯಲ್ಲಿರುವ ಹಿಂಡನ್ ಏರ್‌ಫೋರ್ಸ್ ವಾಯುನೆಲೆಗೆ (Hindon Air Force Base) ಬಂದಿಳಿದಿದ್ದು, ವಾಯುಪಡೆ ಅಧಿಕಾರಿಗಳು ಶೇಖ್ ಹಸೀನಾ ಅವರನ್ನು ಸ್ವಾಗತಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಗಿ ಭದ್ರತೆಯಲ್ಲಿ ಶೇಖ್ ಹಸೀನಾ ಅವರು ದೆಹಲಿಗೆ ಬಂದಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಾಣಭಯದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿರುವ ಶೇಖ್ ಹಸೀನಾ, ಶೀಘ್ರದಲ್ಲಿಯೇ ಲಂಡನ್‌ಗೆ ಹಾರಲಿದ್ದಾರೆ ಎಂದು ತಿಳಿದುಬಂದಿದೆ. ತಾತ್ಕಾಲಿಕವಾಗಿ ಭಾರತದಲ್ಲಿ ಆಶ್ರಯ ಪಡೆಯುವ ಅವರು ಬಳಿಕ ಲಂಡನ್‌ಗೆ ತೆರಳಿ, ಅಲ್ಲಿಯೇ ಕೆಲ ಕಾಲ ನೆಲೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ, ಶ್ರೀಲಂಕಾದಲ್ಲೂ ನಾಗರಿಕ ದಂಗೆಗಳು ಉಂಟಾದಾಗ, ಆ ದೇಶಗಳ ನಾಯಕರು ವಿದೇಶದಲ್ಲಿ ಆಶ್ರಯ ಪಡೆದಿದ್ದರು. ಈಗಲೂ ಕೆಲ ನಾಯಕರು ವಿದೇಶಗಳಲ್ಲಿಯೇ ನೆಲೆಸಿದ್ದಾರೆ.
🇧🇩 | URGENTE
— Revista Panorama 𝕏 (@panorama_la) August 5, 2024
Ha emergido un video que muestra a la Primera Ministra de Bangladesh, Sheikh Hasina, huyendo de la capital en helicóptero durante un golpe de Estado en curso. pic.twitter.com/YyRwVkaTus
ಬಾಂಗ್ಲಾ ರೈಲುಗಳ ಸೇವೆ ರದ್ದು
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಬಾಂಗ್ಲಾ ಜತೆಗಿನ ಎಲ್ಲ ರೈಲು ಸೇವೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಹಾಗೆಯೇ, ಮುಂದಿನ ಸೂಚನೆವರೆಗೆ ಭಾರತೀಯರು ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಬಾರದು ಎಂದು ಕೂಡ ಸೂಚನೆ ನೀಡಲಾಗಿದೆ. ಬಾಂಗ್ಲಾದೇಶದಲ್ಲಿರುವ ಭಾರತೀಯರು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಪಾಕಿಸ್ತಾನ ಕಾರಣ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿ ಎಂಬ ನಿಷೇಧಿತ ಸಂಘಟನೆಯ ವಿದ್ಯಾರ್ಥಿ ಘಟಕವಾಗಿರುವ ಛತ್ರಾ ಶಿಬಿರ್ ಎಂಬ ಸಂಘಟನೆಗೆ ಪಾಕಿಸ್ತಾನದ ಐಎಸ್‌ಐ ಬೆಂಬಲ ಇದೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ವಿಮೋಚನೆ ಹೋರಾಟದ ವೇಳೆ ಭಾಗಿಯಾದವರ ಕುಟುಂಬಸ್ಥರಿಗೆ ನೀಡುವ ಮೀಸಲಾತಿಯನ್ನು ಶೇ.5ಕ್ಕೆ ಇಳಿಸಿದರೂ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ಹಿಂದಿರುವ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಲ್ಲಿ ಛತ್ರಾ ಶಿಬಿರ್ ಎಂಬ ಸಂಘಟನೆಯ ಪಾತ್ರ ಪ್ರಮುಖವಾಗಿದೆ. ಇದಕ್ಕೆ ಪಾಕಿಸ್ತಾನವು ಹಣಕಾಸು ನೆರವು ಕೂಡ ನೀಡುತ್ತಿದೆ ಎಂದು ತಿಳಿದುಬಂದಿದೆ.
ಶೇಖ್ ಹಸೀನಾ ಅವರು ಕಳೆದ 15 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅವರು ರಾಷ್ಟ್ರೀಯವಾದದಲ್ಲಿ ನಂಬಿಕೆ ಇರಿಸಿರುವುದರ ಜತೆಗೆ ಜನರ ಬೆಂಬಲ ಗಳಿಸಿದ್ದಾರೆ. ಬಡತನ ಪ್ರಮಾಣವನ್ನು ಶೇ.5ಕ್ಕೆ ಇಳಿಸಿದ್ದಾರೆ. ಇದರ ಜತೆಗೆ ಭಾರತದ ಜತೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದ್ದಾರೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನು ಸಹಿಸದ ಪಾಕಿಸ್ತಾನವು, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯು ಅಧಿಕಾರಕ್ಕೆ ಬರಬೇಕು ಎಂಬುದು ಪಾಕಿಸ್ತಾನದ ಕುತಂತ್ರವಾಗಿದೆ. ಇದಕ್ಕಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Bangladesh Protests: ಬಾಂಗ್ಲಾ ಹಿಂಸಾಚಾರದ ಹಿಂದೆ ಪಾಕ್ ಕೈವಾಡ; ಭಾರತದ ಜತೆ ಹಸೀನಾ ಸ್ನೇಹ ಕಾರಣ?