ಶ್ರೀನಗರ: ಪ್ರಧಾನ ಮಂತ್ರಿ ಪುನರ್ವಸತಿ ಪ್ಯಾಕೇಜ್ (PM Package) ಅಡಿಯಲ್ಲಿ ಕಣಿವೆಯಾದ್ಯಂತ ಕೆಲಸ ಮಾಡುವ ಕಾಶ್ಮೀರಿ ಪಂಡಿತ ಸಮುದಾಯದ 4,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಭದ್ರತೆಯ ಭಾವನೆಯನ್ನು ಒದಗಿಸುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಪ್ಯಾಕೇಜ್ ಮತ್ತು ಅಲ್ಪಸಂಖ್ಯಾತರ ಅಡಿಯಲ್ಲಿ ಎಲ್ಲಾ ಉದ್ಯೋಗಿಗಳನ್ನು “ತಕ್ಷಣ ನೇಮಕ” ಮಾಡಲು ಬುಧವಾರ ನಿರ್ಧರಿಸಿದೆ. ಜೂನ್ 6ರೊಳಗೆ ಸಮುದಾಯದ ಸದಸ್ಯರನ್ನು “ಸುರಕ್ಷಿತ ಸ್ಥಳಗಳಿಗೆ” ನಿಯೋಜಿಸುವ ತೀರ್ಮಾನ ಕೈಗೊಂಡಿದೆ. ಕಣಿವೆಯಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಹತ್ಯೆಗಳ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿನ್ಹಾ ಅವರು ಆಡಳಿತ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
“ಕಾಶ್ಮೀರ ವಿಭಾಗದಲ್ಲಿ ಪೋಸ್ಟ್ ಮಾಡಲಾದ ಅಲ್ಪಸಂಖ್ಯಾತ ಸಮುದಾಯಗಳ ಪ್ರಧಾನ ಮಂತ್ರಿ ಪ್ಯಾಕೇಜ್ ನೌಕರರು ಮತ್ತು ಇತರರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಲ್ಲಿ ನಿಯೋಜಿಸಲಾಗುವುದು ಮತ್ತು ಸೋಮವಾರ ಜೂನ್ 6ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು” ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ತಿಂಗಳ ಆರಂಭದಲ್ಲಿ, ಬಡ್ಗಾಮ್‌ನ ಚದೂರ ಪ್ರದೇಶದ ತಹಸಿಲ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಅವರನ್ನು ಅವರ ಕಚೇರಿಯಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಮಂಗಳವಾರ, ಕುಲ್ಗಾಮ್ ಜಿಲ್ಲೆಯ ಗೋಪಾಲಪುರ ಪ್ರದೇಶದಲ್ಲಿ ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಶಾಲೆಯೊಳಗೆ ಭಯೋತ್ಪಾದಕರ ಗುಂಡಿಗೆ ಬಲಿಯಾದರು.
ಭಟ್ ಹತ್ಯೆಯ ನಂತರ, ಕಾಶ್ಮೀರಿ ಪಂಡಿತ್ ನೌಕರರು ಕಣಿವೆಯಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ, ಪರಿಸ್ಥಿತಿ ಸುಧಾರಿಸುವವರೆಗೆ ತಮ್ಮನ್ನು ಕಾಶ್ಮೀರದ ಹೊರಗಿನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮಂಗಳವಾರ, ಪ್ರತಿಭಟನಾನಿರತ ಕಾಶ್ಮೀರಿ ಪಂಡಿತ್ ನೌಕರರ ಗುಂಪು, ಮುಂದಿನ 24 ಗಂಟೆಗಳಲ್ಲಿ ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು, ವಿಫಲವಾದರೆ ಅವರು ಸಾಮೂಹಿಕ ರಾಜೀನಾಮೆ ನೀಡಿ ಜಮ್ಮುವಿಗೆ ಸ್ಥಳಾಂತರಗೊಳ್ಳುವುದಾಗಿ ಸಿನ್ಹಾ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಏನೇನು ಸೂಚನೆಗಳು?
”ರಾಜ್ಯಪಾಲರ ಕಚೇರಿಯು ವಿಶೇಷ ಸೆಲ್ ಜೊತೆಗೆ, ಸಾಮಾನ್ಯ ಆಡಳಿತ ಇಲಾಖೆಯು ದೂರುಗಳು ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಮೀಸಲಾದ ಇಮೇಲ್ ಐಡಿಯನ್ನು ಸಹ ಹೊಂದಿರುತ್ತದೆ. ಅಂತಹ ವಿಷಯಗಳು/ದೂರುಗಳನ್ನು ಗಂಭೀರವಾಗಿ ಮತ್ತು ಆದ್ಯತೆಯ ಮೇಲೆ ತೆಗೆದುಕೊಳ್ಳಲು ಪ್ರತಿ ಇಲಾಖೆಯಲ್ಲಿನ ಕೆಳ ಹಂತದ ಅಧಿಕಾರಿಗಳನ್ನು ಸಂವೇದನಾಶೀಲಗೊಳಿಸುವ ಅವಶ್ಯಕತೆಯಿದೆ ಎಂದು ಮೂಲಗಳು ತಿಳಿಸಿವೆ.
ಪಿಎಂ ಪ್ಯಾಕೇಜ್ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಉಂಟಾಗುವ ಕಿರುಕುಳದ ದೂರುಗಳನ್ನು ನಿಭಾಯಿಸುವಲ್ಲಿ ಯಾವುದೇ ಲೋಪವಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿನ್ಹಾ ಎಚ್ಚರಿಸಿದ್ದಾರೆ.
“ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಭದ್ರತೆಯ ಭಾವನೆಯನ್ನು ಖಾತ್ರಿಪಡಿಸಿಕೊಳ್ಳಲು ವಿಶ್ವಾಸ-ನಿರ್ಮಾಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಿರಿಯ ಅಧಿಕಾರಿಗಳು ನೌಕರರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಸಂಬಂಧಿಸಿದ ಮೊದಲ ಹಂತದ ಮೌಲ್ಯಮಾಪನ ಮಾಡಲಿದ್ದಾರೆ. ಅಂತಹ ಉದ್ಯೋಗಿಗಳ ದೂರುಗಳನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾಗಳು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಬೇಕು” ಎಂದು ಮೂಲಗಳು ತಿಳಿಸಿವೆ.
ನೌಕರರ ಇತರ ಸಮಸ್ಯೆಗಳು ಮತ್ತು ಜೇಷ್ಠತಾ ಪಟ್ಟಿಯನ್ನು ಮೂರು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಿನ್ಹಾ ಅಧಿಕಾರಿಗಳಿಗೆ ಹೇಳಿದರು.
ಏನಿದು ಪಿಎಂ ಪ್ಯಾಕೇಜ್?
ಹಿಂಸಾಚಾರಕ್ಕೆ ಒಳಗಾಗಿ ಕಾಶ್ಮೀರವನ್ನು ಬಿಟ್ಟು ಬಂದಿರುವ ಪಂಡಿತರಿಗೆ ಮರು ವಸತಿ ಕಲ್ಪಿಸುವ ಈ ಯೋಜನೆ 2008ರಲ್ಲೇ ಆರಂಭವಾಗಿತ್ತು. ಆದರೆ, ಇತ್ತೀಚೆಗೆ ಶಾಂತಿ ಮರುಕಳಿಸಿದ ಬಳಿಕ ಇದಕ್ಕೆ ಭಾರಿ ಬೇಡಿಕೆ ಎದುರಾಗಿದೆ. ನಿರಾಶ್ರಿತರಾಗಿರುವ ಕುಟುಂಬಗಳಿಗೆ ಉದ್ಯೋಗ ನೀಡುವುದು, ಕೆಲವರಿಗೆ ಭೂಮಿ ನೀಡುವುದು ಈ ಯೋಜನೆಯಲ್ಲಿದೆ. ಈಗಾಗಲೇ 6000ದಷ್ಟು ಫಲಾನುಭವಿಗಳಿದ್ದಾರೆ. ಈ ನಡುವೆ, ಈ ರೀತಿ ಮರುವಸತಿ ಪಡೆದವರನ್ನೇ ಗುರುತಿಸಿ ಹಲ್ಲೆ, ಹತ್ಯೆ ಮಾಡಲಾಗುತ್ತಿದೆ.
ಇದನ್ನೂ ಓದಿ| ಜಮ್ಮು-ಕಾಶ್ಮೀರದ ಕುಲಗಾಂವ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಹಿಂದು ಶಿಕ್ಷಕಿ ಬಲಿ
ಇದನ್ನೂ ಓದಿ| Kashmir pandits ಹೇಳ್ತಾರೆ, ಅಂದಿಗಿಂತಲೂ ಇಂದೇ ಕಾಶ್ಮೀರ ನಮಗೆ ಹೆಚ್ಚು ಅಪಾಯಕರ!