Site icon Vistara News

Maha politics | ಶಿಂಧೆ ಬಣದ ಶಾಸಕರ ಬಲ 50ಕ್ಕೆ ಏರಿಕೆ ಸಂಭವ, ವಿಶ್ವಾಸಮತ ಯಾಚನೆ ನಿರೀಕ್ಷೆ

uddhav Tackeray

ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಕ್ಷಿಪ್ರ ಕ್ರಾಂತಿ ನಡೆಯುತ್ತಿದ್ದು, ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಶಿವಸೇನಾದಿಂದ ಬಂಡಾಯವೆದ್ದಿರುವ ಏಕನಾಥ್‌ ಶಿಂಧೆ ಬಣದಲ್ಲಿ ಶಾಸಕರ ಸಂಖ್ಯೆ ಇಂದು ೫೦ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಬಳಿಕ ಯಾರಿಗೆ ಬಹುಮತ ಇದೆ ಎಂದು ಗೊತ್ತಾಗಲಿದೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

ಪಕ್ಷದಿಂದ ಸಿಡಿದೆದ್ದಿರುವ ೧೨ ಶಾಸಕರನ್ನು ಅನರ್ಹಗಳಿಸಬೇಕು ಎಂಬ ಶಿವಸೇನಾದ ಬೇಡಿಕೆಗೆ ತಿರುಗೇಟು ನೀಡಿರುವ ಏಕನಾಥ್‌ ಶಿಂಧೆ, ಶಿವಸೇನಾದ ೩೭ ಶಾಸಕರು ನನ್ನ ಜತೆ ಇದ್ದಾರೆ. ಒಟ್ಟು ೪೭ ಮಂದಿ ಶಾಸಕರು ಬೆಂಬಲಿಸಿದ್ದಾರೆ. ಇನ್ನೂ ಹಲವರು ಸೇರಿಕೊಳ್ಳಲಿದ್ದಾರೆ. ಸಿಎಂ ಉದ್ಧವ್‌ ಠಾಕ್ರೆ ಬಳಿ ಕೇವಲ ೧೩-೧೭ ಶಾಸಕರಿದ್ದಾರೆ. ಹೀಗಾಗಿ ಕಾನೂನು ನಮ್ಮ ಪರವಾಗಿದೆ. ನಾವು ಶೀಘ್ರ ರಾಜ್ಯಪಾಲರನ್ನು ಭೇಟಿಯಾಗಲಿದ್ದೇವೆ ಎಂದಿದ್ದಾರೆ.

ಪಕ್ಷದ ಚಿಹ್ನೆಯನ್ನೂ ನಾವೇ ತೆಗೆದುಕೊಳ್ಳಲಿದ್ದೇವೆ ಎಂದೂ ಶಿಂಧೆ ಗುಡುಗಿದ್ದಾರೆ. ಮೂಲಗಳ ಪ್ರಕಾರ ಶಿಂಧೆ ಬಣಕ್ಕೆ ಮತ್ತಷ್ಟು ಸೇನಾ ಶಾಸಕರು ಸೇರಿಕೊಳ್ಳಲಿದ್ದು, ಇಂದು ೫೦ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

ಶರದ್‌ ಪವಾರ್‌ ವಿಶ್ವಾಸ
ರೆಬೆಲ್‌ ಶಾಸಕರು ಮುಂಬಯಿಗೆ ಮರಳಿದ ಬಳಿಕ ಪರಿಸ್ಥಿತಿ ಬದಲಾಗಲಿದೆ. ಬಂಡಾಯ ಎದ್ದಿರುವ ಶಾಸಕರು ಮಾತೃಪಕ್ಷಕ್ಕೆ ಬರಲಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ. ವಿಶ್ವಾಸ ಮತ ಯಾಚನೆಯಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರ ಗೆಲ್ಲಲಿದೆ. ವಿಧಾನಸಭೆಯಲ್ಲಿ ನಮ್ಮ ಬಹುಮತವನ್ನು ಸಾಬೀತುಪಡಿಸಲಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Maha politics | ಫಡ್ನವೀಸ್‌ ಬುಲಾವ್‌, ಮಹಾರಾಷ್ಟ್ರಕ್ಕೆ ಇಂದು ಮತ್ತೆ ರಮೇಶ್‌ ಜಾರಕಿಹೊಳಿ ದೌಡು

Exit mobile version