Site icon Vistara News

Shinzo Shooting: ಜಪಾನ್‌ಗೆ ಅಬೆನಾಮಿಕ್ಸ್‌ ಕೊಟ್ಟ ಶಿಂಜೊ, ʻಅಬ್ಬಾʼ ಎನಿಸುವ 10 ವಿಶೇಷ ಸಂಗತಿಗಳು

Shinjo abe

ಟೋಕಿಯೊ: ಸಾರ್ವಜನಿಕ ಚುನಾವಣಾ ಪ್ರಚಾರದ ವೇಳೆ ಗುಂಡೇಟಿಗೆ ಒಳಗಾದ ಜಪಾನ್‌ ನ ಮಾಜಿ ಪ್ರಧಾನಿ ಶಿಂಜೊ ಅಬೆ ಜಗತ್ತಿನ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂಬ ಖ್ಯಾತಿ ಹೊತ್ತವರು. ಅತ್ಯಂತ ಸೌಮ್ಯ ಸ್ವಭಾವ, ಆದರೆ, ಅಷ್ಟೇ ಪ್ರೋಗ್ರೆಸಿವ್‌ ಚಿಂತನೆಗಳ ನಾಯಕ. ಜಪಾನಿನ ಆರ್ಥಿಕತೆಯನ್ನು ಮೇಲೆತ್ತಲು ಅವರು ಪ್ರಯೋಗಿಸಿದ ತಂತ್ರಗಳೇ ಮುಂದೆ ʻಅಬೆನಾಮಿಕ್ಸ್‌ʼ ಆಗಿ ಬ್ರ್ಯಾಂಡ್‌ ರೂಪ ಪಡೆದಿವೆ. ಹಾಗಿದ್ದರೆ, ಶಿಂಜೊ ಅಬೆ ಅವರ ಹಿನ್ನೆಲೆ ಏನು? ಅವರು ಮಾಡಿದ ಮಹಾಸಾಹಸಗಳೇನು? ಅವರ ಕೌಟುಂಬಿಕ ಮತ್ತು ರಾಜಕೀಯ ಬದುಕಿನ ೧0 ವಿಶೇಷ ಸಂಗತಿಗಳು ಇಲ್ಲಿವೆ.

೧. ಅಮೆರಿಕದಲ್ಲಿ ಸಾರ್ವಜನಿಕ ನೀತಿ ಕಲಿತರು
ಶಿಂಜೊ ಅಬೆ ಹುಟ್ಟಿದ್ದು ೧೯೫೪ರ ಸೆಪ್ಟೆಂಬರ್‌ ೨೧ರಂದು. ಸೈಕೈ ವಿವಿಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪದವಿ (೧೯೭೭) ಪಡೆದ ಬಳಿಕ ಅವರು, ಅಮೆರಿಕಕ್ಕೆ ತೆರಳಿ ಸಾರ್ವಜನಿಕ ನೀತಿ (ಪಬ್ಲಿಕ್‌ ಪಾಲಿಸಿ) ವಿಷಯದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ೧೯೭೯ರಲ್ಲಿ ಕೋಬೆ ಸ್ಟೀಲ್‌ನಲ್ಲಿ ಉದ್ಯೋಗಕ್ಕೆ ಸೇರಿದ ಅವರು ೧೯೮೨ರಲ್ಲಿ ಕೆಲಸ ಬಿಟ್ಟು ವಿದೇಶಾಂಗ ಸಚಿವಾಲಯದಲ್ಲಿ ಎಕ್ಸಿಕ್ಯೂಟಿವ್‌ ಅಸಿಸ್ಟೆಂಟ್‌ ಆದರು.

ಪುಟ್ಟ ಮಗುವಾಗಿದ್ದಾಗ ಅಬೆ ಹೀಗಿದ್ದರು

೨. ಅಜ್ಜ ಪ್ರಧಾನಿಯಾಗಿದ್ದರು, ಅಪ್ಪ ವಿದೇಶಾಂಗ ಮಂತ್ರಿ
ಅಬೆ ಅವರದು ರಾಜಕೀಯ ಕುಟುಂಬ. ಅರ್ಥಶಾಸ್ತ್ರವನ್ನೂ ಚೆನ್ನಾಗಿ ಅರೆದು ಕುಡಿದ ಫ್ಯಾಮಿಲಿ. ಅವರ ಅಜ್ಜ ನೊಬುಸುಕೆ ಕಿಶಿ ಅವರು ೧೯೫೭ರಿಂದ ೧೯೬೦ರ ನಡುವೆ ಜಪಾನಿನ ಪ್ರಧಾನಿಯಾಗಿದ್ದರು. ಅಬೆ ಅವರ ತಂದೆ ಶಿಂಟಾರೋ ಅಬೆ ಅವರು ೧೯೮೨ರಿಂದ ೮೬ರವರೆಗೆ ವಿದೇಶಾಂಗ ಮಂತ್ರಿಯಾಗಿದ್ದರು. ಇವರೆಲ್ಲರೂ ಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿಯ(ಎಲ್‌ಡಿಪಿ) ಪ್ರಮುಖ ನಾಯಕರಾಗಿದ್ದರು.

೩. ಹಂತ ಹಂತದ ಕಲಿಕೆಯೊಂದಿಗೆ ಮೇಲೇರಿದರು
೧೯೯೧ರಲ್ಲಿ ತಂದೆ ಶಿಂಟಾರೋ ಅಬೆ ಅವರ ಮರಣದ ನಂತರ ರಾಜಕೀಯ ರಂಗ ಪ್ರವೇಶಿಸಿದ ಶಿಂಜೊ ೧೯೯೩ರಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿ ಜನಪ್ರತಿನಿಧಿ ಸಭೆಗೆ ಆಯ್ಕೆಯಾದರು. ೨೦೦೫ರಲ್ಲಿ ಆಗ ಪ್ರಧಾನಿಯಾಗಿದ್ದ ಜುನಿಚಿರೊ ಕೊಯಿಜುಮಿ ಅವರಿಂದ ಮುಖ್ಯ ಸಂಪುಟ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಗೊಂಡರು. ೨೦೦೬ರಲ್ಲಿ ಎಲ್‌ಡಿಪಿಯ ಅಧ್ಯಕ್ಷರಾಗುವುದರ ಜತೆಗೆ ಪ್ರಧಾನಿಯಾಗಿಯೂ ನೇಮಕಗೊಂಡರು.

೪. ಅತಿ ದೀರ್ಘಾವಧಿಗೆ ಪ್ರಧಾನಿಯಾದ ದಾಖಲೆ
ಅತಿ ದೀರ್ಘಾವಧಿಗೆ ಪ್ರಧಾನಿಯಾದ ಗೌರವ ಶಿಂಜೊ ಅಬೆ ಪಾಲಿಗಿದೆ. ೨೦೦೬ರಲ್ಲೇನೋ ಅಬೆ ಪ್ರಧಾನಿಯಾದರು. ಅದರೆ, ಅಲ್ಸರೇಟಿವ್‌ ಕೊಲಿಟಿಸ್‌ ಎಂಬ ಆರೋಗ್ಯ ಸಮಸ್ಯೆಗೆ ಒಳಗಾದ ಅವರು ಹುದ್ದೆಯನ್ನು ತ್ಯಜಿಸಿದರು. ಜತೆಗೆ ಅವರ ಪಕ್ಷವೂ ಹಿನ್ನಡೆಯನ್ನು ಕಂಡಿತು. ಆದರೆ, ೨೦೧೨ರ ಹೊತ್ತಿಗೆ ಆರೋಗ್ಯ ಸುಧಾರಿಸಿತು ಮತ್ತು ಫೀನಿಕ್ಸ್‌ನಂತೆ ಎದ್ದು ಬಂದ ಅವರು ಪ್ರಧಾನಿಯೇ ಅದರು. ಮುಂದೆ ೨೦೧೪ ಮತ್ತು ೨೦೧೭ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದರು. ೨೦೨೦ರಲ್ಲಿ ಮತ್ತೊಮ್ಮೆ ಅಲ್ಸರ್‌ ಉಲ್ಬಣಿಸಿ ರಾಜೀನಾಮೆ ನೀಡಿದರು. ಹೀಗೆ ೯ ವರ್ಷ ಕಾಲ ಪ್ರಧಾನಿಯಾದವರು ಜಪಾನಿನಲ್ಲಿ ಬೇರೆ ಯಾರೂ ಇಲ್ಲ.

ಶಿಂಜೊ ಅಬೆ ಮಕ್ಕಳೊಂದಿಗೆ ಮಗುವಾದ ಕ್ಷಣ..

೫. ಜಪಾನಿನ ಬಲಪಂಥೀಯ ನಾಯಕ
ಶಿಂಜೊ ಅಬೆ ಅವರು ಕನ್ಸರ್ವೇಟಿವ್‌- ಸಂಪ್ರದಾಯವಾದಿ ಧೋರಣೆಯವರು. ಅವರ ಪಕ್ಷ ಎಲ್‌ಡಿಪಿಯದ್ದೂ ಅದೇ ಸಿದ್ಧಾಂತ. ಅವರನ್ನು ಬಲಪಂಥೀಯ ಜಪಾನಿ ರಾಷ್ಟ್ರೀಯವಾದಿ ನಾಯಕ ಎಂದು ಗುರುತಿಸಲಾಗುತ್ತದೆ.

೬. ಭಾರತದ ಜತೆ ಉತ್ತಮ ಸಂಬಂಧ
ಶಿಂಜೊ ಅಬೆ ಅವರು ಭಾರತದ ಜತೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದರು. ಬುಲೆಟ್‌ ಟ್ರೇನ್‌ ಯೋಜನೆಗೆ ಬೆಂಗಾವಲಾಗಿ ನಿಂತವರು ಅವರೆ. ಅವರಿಗೆ ೨೦೨೧ರ ಜನವರಿಯಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಭಾರತ ಗೌರವಿಸಿದೆ. ೨೦೧೪ರಲ್ಲಿ ಅವರು ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಗೌರವ ಪಡೆದ ಮೊದಲ ಜಪಾನ್‌ ಪ್ರಧಾನಿ ಅಬೆ.

ಭಾರತಕ್ಕೆ ಬಂದಾಗ ಗಾಂಧಿ ಮೂರ್ತಿಗೆ ಪುಷ್ಟಾರ್ಚನೆ..

೭. ಅಬೆನಾಮಿಕ್ಸ್‌ ಎಂಬ ಬ್ರ್ಯಾಂಡ್‌ ನೇಮ್‌
೨೦೧೨ರಲ್ಲಿ ಶಿಂಜೊ ಅಬೆ ಅವರು ಎರಡನೇ ಬಾರಿ ಪ್ರಧಾನಿಯಾದಾಗ ದೇಶದ ಆರ್ಥಿಕತೆ ನಿಂತ ನೀರಾಗಿತ್ತು. ಆಗ ಅವರು ಜಾರಿಗೆ ತಂದ ಪ್ರಯೋಗಾತ್ಮಕ ಆರ್ಥಿಕತೆ ಯಶಸ್ವಿಯಾಗಿ ಮುಂದೆ ಅದುವೇ ಅಬೆನಾಮಿಕ್ಸ್‌ ಎಂದು ಹೆಸರಾಯಿತು. ಇದು ಹಣಕಾಸು ಸಂಚಲನ, ಸರಕಾರವೂ ಮೂಲಸೌಕರ್ಯಕ್ಕೆ ಖರ್ಚು ಮಾಡುವುದು ಮತ್ತು ಆರ್ಥಿಕ ಸುಧಾರಣೆಗಳೆಂಬ ಮೂರು ಪ್ರಮುಖಾಂಶಗಳನ್ನು ಹೊಂದಿದೆ.

೮. ಕ್ವಾಡ್‌ ರಚನೆಯ ಸೂತ್ರಧಾರ ಶಿಂಜೊ
ಭದ್ರತೆ ವಿಚಾರದಲ್ಲಿ ರೂಪಿಸಲಾಗಿರುವ ಕ್ವಾಡ್ರಿಲ್ಯಾಟರಲ್‌ ಸೆಕ್ಯುರಿಟಿ ಡೈಲಾಗ್‌ ಅಥವಾ ಕ್ವಾಡ್‌ ಎಂಬ ನಾಲ್ಕು ರಾಷ್ಟ್ರಗಳ ಸಂಘಟನೆಯನ್ನು ೨೦೦೭ರಲ್ಲಿ ರೂಪಿಸಿದ್ದು ಶಿಂಜೊ. ಇದರಲ್ಲಿ ಜಪಾನ್‌, ಭಾರತ, ಅಮೆರಿಕ ಮತ್ತು ಆಸ್ಟ್ರೇಲಿಯಾ ಇವೆ.

ಪತ್ನಿ ಅಕೀ ಅಬೆ ಅವರೊಂದಿಗೆ ಶಿಂಜೊ. ಇವರಿಬ್ಬರ ಮದುವೆ ೧೯೮೭ರಲ್ಲಿ ನಡೆದಿತ್ತು. ಇವರಿಗೆ ಮಕ್ಕಳಿಲ್ಲ.

೯. ಸ್ನೇಹಕ್ಕೆ ಬದ್ಧ ಸಮರಕ್ಕೂ ಸಿದ್ಧ ಎಂದ ಅಬೆ
ಜಪಾನಿನ ಸಂವಿಧಾನದಲ್ಲಿ ಆರ್ಟಿಕಲ್‌ ೯ ತುಂಬ ವಿಶೇಷವಾದುದು. ʻʻಜಪಾನಿನ ಜನತೆ ಯಾವ ಕಾರಣಕ್ಕೂ ಯುದ್ಧ ಮಾಡುವುದಿಲ್ಲ. ಯುದ್ಧ ನಿರಾಕರಣೆಯೇ ದೇಶದ ಸರ್ವೋಚ್ಚ ಹಕ್ಕುʼ ಎಂದು ಹೇಳುತ್ತದೆ. ಇದು ಎರಡನೇ ಮಹಾಯುದ್ಧದ ಬಳಿಕ ಅಮೆರಿಕದ ಒತ್ತಡದಿಂದ ಸೇರ್ಪಡೆಯಾದ ಅಂಶ. ಆದರೆ, ಅಬೆ ಪ್ರಧಾನಿಯಾದ ಬಳಿಕ ಅದಕ್ಕೆ ಪರಿಷ್ಕರಣೆ ಮಾಡಲಾಯಿತು.

೧೦. ವಿದೇಶಕ್ಕೆ ಸೇನೆ ಕಳುಹಿಸಿದ ಮೊದಲ ಪ್ರಧಾನಿ
ಜಪಾನಿನ ಸಾರ್ವಭೌಮತ್ವದ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ ಶಿಂಜೊ ಅಬೆ. ದೇಶದ ಸಾರ್ವಭೌಮತೆ ರಕ್ಷಣೆಗಾಗಿ ಮೊದಲ ಬಾರಿಗೆ ಸಾಗರೋತ್ತರ ಶಸ್ತ್ರಾಸ್ತ್ರ ರವಾನೆ ಮಾಡಿದವರು ಅಬೆ. ದಕ್ಷಿಣ ಕೊರಿಯಾದ ವಿರುದ್ಧ ಸೆಟೆದು ನಿಂತದ್ದು ಅಬೆ ಒಬ್ಬರೇ.

ಇದನ್ನೂ ಓದಿ| ಭಾರತ-ಜಪಾನ್‌ ಮೈತ್ರಿಯ ಸುಧಾರಕ, ಪದ್ಮವಿಭೂಷಣ ಪುರಸ್ಕೃತ ಶಿಂಜೊ ಅಬೆ

Exit mobile version