ನವ ದೆಹಲಿ: ಲೋಕಸಭೆಯಲ್ಲಿ ಶಿವ ಸೇನೆ ಪಕ್ಷ ನಾಯಕ ಸ್ಥಾನಮಾನವನ್ನು ಏಕನಾಥ ಶಿಂಧೆ ಬಣದ ರಾಹುಲ್ ಶೆವಾಲೆ ಅವರಿಗೆ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರು ನೀಡಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸ್ಪೀಕರ್ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು, ಬಿರ್ಲಾ ಅವರು ಎರಡು ಅಂಶಗಳನ್ನು ಆಧರಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಮೊದಲನೆಯದು ಶೆವಾಲೆ ಅವರಿಗೆ ಪಕ್ಷದ ಸಂಸದರ ಬಹುಮತವಿದೆಯೇ ಎಂಬುದು, ಹಾಗೂ ಎರಡನೆಯದು ಕಾನೂನಿನ ಪೂರ್ವನಿದರ್ಶನಗಳು ಏನು ಹೇಳುತ್ತವೆ ಎಂಬುದು. ಈ ಹಿಂದೆ ಲೋಕಜನಶಕ್ತಿ ಪಕ್ಷದ ನಾಯಕತ್ವಕ್ಕಾಗಿ ಚಿರಾಗ್ ಪಾಸ್ವಾನ್ ಹಾಗೂ ಅವರ ಚಿಕ್ಕಪ್ಪನ ನಡುವಿನ ತಿಕ್ಕಾಟದಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ಇದೇ ಮಾದರಿಯ ನಿಲುವು ತೆಗೆದುಕೊಂಡಿತ್ತು. ಶಿವಸೇನೆಯ ಹನ್ನೆರಡು ಲೋಕಸಭಾ ಸದಸ್ಯರು ಬಿರ್ಲಾ ಅವರನ್ನು ಭೇಟಿಯಾಗಿ ಉದ್ಧವ್ ಠಾಕ್ರೆ ಅವರ ನಿಷ್ಠಾವಂತ ವಿನಾಯಕ ರಾವತ್ ಅವರನ್ನು ಲೋಕಸಭೆ ನಾಯಕತ್ವದಿಂದ ಇಳಿಸುವಂತೆ ಮನವಿ ಮಾಡಿದ್ದರು.
ಈ ಹಿಂದೆ ಉದ್ಧವ್ ಠಾಕ್ರೆ ಬಣದಿಂದ ಪಕ್ಷದ ಮುಖ್ಯ ಸಚೇತಕರಾಗಿ ಸ್ಥಾನ ಪಡೆದಿದ್ದ ಭಾವನಾ ಗವಾಲಿ ಅವರು ಸಂಸತ್ತಿನ ಕೆಳಮನೆಯಲ್ಲಿ ತಮ್ಮ ಅಧಿಕೃತ ಸ್ಥಾನಮಾನವನ್ನು ಉಳಿಸಿಕೊಂಡಿದ್ದಾರೆ. ಠಾಕ್ರೆ ಬಣವು ಜುಲೈ 6ರಂದು ಗವಾಲಿ ಬದಲಿಗೆ ಲೋಕಸಭೆಯಲ್ಲಿ ರಾಜನ್ ವಿಚಾರೆ ಅವರನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನಾಮನಿರ್ದೇಶನ ಮಾಡಿತ್ತು. ಪೂರ್ವ ಮಹಾರಾಷ್ಟ್ರದ ಯಾವತ್‌ಮಲ್- ವಾಶಿಮ್ ಕ್ಷೇತ್ರದ ಸಂಸದ ಗವಾಲಿ, ಶಿವಸೇನೆ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಈ ಹಿಂದೆ ಸೂಚಿಸಿದ್ದರು.
ಇದನ್ನೂ ಓದಿ: Maha politics: ಶಿಂಧೆ ಬೆಂಬಲಿಗ 12 ಶಿವಸೇನಾ ಸಂಸದರಿಗೆ ವೈ ಭದ್ರತೆ, ಇನ್ನೂ 14 ಶಾಸಕರೂ ಉದ್ಧವ್ ಟೀಮಿಗೆ ಕೈ!