ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ ಅವರ ವಿರುದ್ಧ ಅಪಮಾನಕರ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪ್ರತಿಪಕ್ಷಗಳು ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ (governor koshyari) ಅವರ ರಾಜೀನಾಮೆಗೆ ಒತ್ತಾಯಿಸಿವೆ. ಔರಂಗಾಬಾದ್‌ನಲ್ಲಿ ಭಾನುವಾರ ಆಯೋಜಿಸಿಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲರು, ಮಹಾರಾಷ್ಟ್ರದಲ್ಲಿ ಸಾಕಷ್ಟು ಜನರು ಐಕಾನ್‌ಗಳಿದ್ದಾರೆ. ಛತ್ರಪತಿ ಶಿವಾಜಿ ಮಹರಾಜ ಅವರು ಹಳೆಯ ಕಾಲದವರಾದರು. ಈಗ ಅಂಬೇಡ್ಕರ್, ನಿತಿನ್ ಗಡ್ಕರಿಯವರಂಥ ಐಕಾನ್‌ಗಳಿದ್ದಾರೆಂದು ಹೇಳಿದ್ದರು.
ಛತ್ರಪತಿ ಶಿವಾಜಿ ಮಹಾರಾಜ ಹಳೆಯ ಕಾಲದ ಐಕಾನ್ ಎಂಬ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಹೇಳಿಕೆಯು ಮಹಾರಾಷ್ಟ್ರದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಅವರು, ಕೋಶ್ಯಾರಿ ಅವರಿಗೆ ರಾಜ್ಯಪಾಲರ ಹುದ್ದೆಯಲ್ಲಿ ಮುಂದುವರಿಯುವ ಹಕ್ಕಿಲ್ಲ. ಅವರನ್ನು ರಾಜ್ಯಪಾಲರಾಗಿ ಮುಂದುವರಿಸುವ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾದ ಸಮಯ ಇದಾಗಿದೆ. ಅಧಿಕಾರವನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳದೇ ಜನರ ಕಲ್ಯಾಣಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಶಿವಾಜಿ ಮಹಾರಾಜ ಅವರು ಮಾದರಿ ವ್ಯಕ್ತಿಯಾಗಿದ್ದಾರೆ. ಅವರ ವಿಚಾರಧಾರೆಗಳು, ಪ್ರಾಚೀನ ಕಾಲದಿಂದಲೂ ಮಹಾರಾಷ್ಟ್ರವನ್ನು ಪ್ರಭಾವಿಸಿವೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಉಪಮುಖ್ಯಮಂತ್ರಿಯೂ ಆಗಿರುವ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು, ಸೂರ್ಯ ಚಂದ್ರ ಇರುವವರೆಗೂ ಶಿವಾಜಿ ಮಹಾರಾಜ ಅವರು ನಮಗೆ ಮಾದರಿ ವ್ಯಕ್ತಿಯಾಗಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಎರಡನೇ ವಿಚಾರವೇ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ರಾಜ್ಯಪಾಲರನ್ನೂ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ | ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಭಾಷಣ ವಿವಾದ; ತಿರುಗಿಬಿದ್ದ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ