ಮುಂಬಯಿ: ಬಹುಕೋಟಿ ಪತ್ರ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನೆಯ ಸಂಸದ ಸಂಜಯ್ ರಾವತ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಬೆಳಗ್ಗೆ ಮುಂಬಯಿಯಲ್ಲಿರುವ ಮನೆಗೇ ನೇರವಾಗಿ ಲಗ್ಗೆ ಇಟ್ಟ ಅಧಿಕಾರಿಗಳು ಮಧ್ಯಾಹ್ನದವರೆಗೂ ದಾಖಲೆಗಳನ್ನು ಜಾಲಾಡಿದ್ದಾರೆ. ಅಂತಿಮವಾಗಿ ಸಂಜೆಯ ಹೊತ್ತಿಗೆ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಅವರನ್ನು ತಮ್ಮ ಜತೆಗೇ ಕರೆದೊಯ್ಯಲಿದ್ದಾರೆ ಎಂದು ಹೇಳಲಾಗಿದೆ.
ರಾವತ್ ಅವರ ಪತ್ನಿಯೂ ಒಳಗೊಂಡಿರುವ ಪತ್ರ ಚಾಲ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ನೀಡಿದ್ದರೂ ನಾನಾ ಕಾರಣ ನೀಡಿ ಮುಂದಕ್ಕೆ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ನೇರವಾಗಿ ಮುಂಬಯಿಯ ಮನೆಗೇ ಲಗ್ಗೆ ಇಟ್ಟಿದ್ದರು.
ಶಿವಸೇನೆಯಲ್ಲಿ ಬಂಡಾಯ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗಲೇ ಅವರಿಗೆ ಇ.ಡಿ. ಕಚೇರಿಯಿಂದ ನೋಟಿಸ್ ಬಂದಿತ್ತು. ಆದರೆ, ಅವರು ಹೋಗಿರಲಿಲ್ಲ. ಇದು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಶಕ್ತಿ ಕುಂದಿಸುವ ಪ್ರಯತ್ನ ಎಂದು ಅವರು ಆರೋಪಿಸಿದ್ದರು. ಬಳಿಕ ಸಂಜಯ್ ರಾವತ್ ಅವರು ಜುಲೈ 1ರಂದು ಇ.ಡಿ ಕಚೇರಿಗೆ ಹಾಜರಾಗಿದ್ದರು. ಅಂದು ಸಣ್ಣ ಮಟ್ಟದ ವಿಚಾರಣೆ ಎದುರಿಸಿದ್ದ ಅವರು ಯಾವಾಗ ಕರೆದರೂ ಬರುತ್ತೇನೆ ಎಂದಿದ್ದರು. ಈ ನಡುವೆ, ಜುಲೈ ೨೦ರಂದು ಹಾಜರಾಗುವಂತೆ ಇ.ಡಿ ಸೂಚನೆ ನೀಡಿತ್ತು. ಆಗ ಸಂಸತ್ ಅಧಿವೇಶನದ ನೆಪ ಹೇಳಿದ್ದರು. ಆಗ ಇ.ಡಿ. ಜುಲೈ ೨೭ಕ್ಕೆ ಬನ್ನಿ ಎಂದು ಹೇಳಿತ್ತು. ಆಗಲೂ ಅಧಿವೇಶನದ ಕಾರಣವನ್ನೇ ನೀಡಿದ್ದರು ಸಂಜಯ್ ರಾವತ್. ಇದು ಇ.ಡಿ. ಅಧಿಕಾರಿಗಳನ್ನು ಕೆರಳಿಸಿತ್ತು. ಹೀಗಾಗಿ ಭಾನುವಾರ ಮನೆಗೇ ದಾಳಿ ನಡೆಸಿ ವಶಕ್ಕೆ ಪಡೆಯುವ ಹಂತಕ್ಕೆ ಬಂದಿದೆ.
ಪರಿಶೀಲನೆ ಆರಂಭಗೊಂಡಿದೆ.
ಏನಿದು ಪತ್ರಾ ಚಾಲ್ ಭೂ ಹಗರಣ?
ಪತ್ರಾ ಚಾಲ್ ಭೂಹಗರಣ ಎನ್ನುವುದು ೧೦೩೪ ಕೋಟಿ ರೂ. ಹಗರಣ ಎಂದು ಹೇಳಲಾಗಿದೆ. ಇದರಲ್ಲಿ ಪ್ರಧಾನವಾಗಿರುವುದು ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್. ಈ ಹಗರಣ ಹಿಂದೆಯೇ ಬೆಳಕಿಗೆ ಬಂದು ಸಂಜಯ್ ರಾವತ್ ಅವರ ಆಪ್ತರಾದ ಪ್ರವೀಣ್ ರಾವತ್ ಅವರಿಗೆ ಸೇರಿದ ೯ ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ವರ್ಷಾ ರಾವತ್ ಅವರಿಗೆ ಸೇರಿದ ೨ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಭೂಮಿಗೆ ಸಂಬಂಧಿಸಿದ ದಾಖಲೆ ಇತ್ಯರ್ಥಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದಕ್ಕೆ ಭಾರಿ ಪ್ರಮಾಣದ ಲಂಚ ಪಡೆಯಲಾಗಿದೆ ಎನ್ನುವುದು ಪ್ರಧಾನ ಆರೋಪ. ಪ್ರವೀಣ್ ರಾವತ್ ಅವರು ಸುಮಾರು ೫೫ ಕೋಟಿ ರೂಪಾಯಿಯನ್ನು ವರ್ಷಾ ಅವರ ಖಾತೆಗೆ ಹಸ್ತಾಂತರಿಸಿದ್ದನ್ನು ಇ.ಡಿ ಗಮನಿಸಿದೆ. ಇದರ ಜತೆಗೆ ಸಂಜಯ್ ರಾವತ್ ಮತ್ತು ಅವರ ಆಪ್ತರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಮಾನ ಯಾನ ಟಿಕೆಟ್‌ಗಳನ್ನು ಕೂಡಾ ಬುಕ್ ಮಾಡಲಾಗಿತ್ತು.
ಇದನ್ನೂ ಓದಿ| ಎರಡು ಬಾರಿ ಸಮನ್ಸ್‌ಗೆ ತಪ್ಪಿಸಿಕೊಂಡ ಸಂಜಯ್ ರಾವತ್, ಮನೆಗೇ ಲಗ್ಗೆ ಇಟ್ಟ ಇ.ಡಿ ಅಧಿಕಾರಿಗಳು